ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಯೂರಿಯಾ ರಸಗೊಬ್ಬರಕ್ಕಾಗಿ ತಾಲೂಕಿನ ವಿವಿದೆಡೆ ರೈತರು ಮುಗಿಬಿದ್ದು ಗದ್ದಲ, ಗಲಾಟೆ ಮಾಡಿದ್ದು, ಹಲುವಾಗಲು ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಗೆ ಬೀಗ ಜಡಿದು, ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.ಕಳೆದ ವಾರದಿಂದ ತಾಲೂಕಿನಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಬೆಳವಣಿಗೆ ಹಂತದಲ್ಲಿ ಇರುವುದರಿಂದ ಯೂರಿಯಾ ಗೊಬ್ಬರಕ್ಕೆ ಸಾಕಷ್ಟು ಬೇಡಿಕೆಯಿದೆ.
ಆದರೆ ಅಗತ್ಯ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ, ಬುಧವಾರ ಬೆಳಗ್ಗೆಯಿಂದಲೇ ರೈತರು ಇದ್ದಕ್ಕಿದ್ದಂತೆ ಸೊಸೈಟಿಗಳ ಮುಂದೆ ಜಮಾಯಿಸಿ ಗೊಬ್ಬರ ನೀಡುವಂತೆ ಆಗ್ರಹಿಸಿದರು. ಆದರೆ ಗೊಬ್ಬರ ಲಭ್ಯವಿರಲಿಲ್ಲ.ದಿಗ್ಬಂಧನ:
ಹಲುವಾಗಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಅಲ್ಲಿದ್ದ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ಒಳಗಿದ್ದಾಗ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆಗೆ ಇಳಿದರು.ಈ ಸಂದರ್ಭ ಮಾತನಾಡಿದ ಸೊಸೈಟಿ ನಿರ್ದೇಶಕ ಎಸ್ಪಿ ಲಿಂಬ್ಯಾನಾಯ್ಕ, ಕಳೆದ 1 ತಿಂಗಳಿನಿಂದ ಗೊಬ್ಬರಕ್ಕಾಗಿ ಆಗ್ರಹಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಮೂಲಕ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಖಾಸಗಿ ಅಂಗಡಿಯಲ್ಲಿ ಗೊಬ್ಬರ ಸಿಗುತ್ತಿದ್ದು, ಸಹಕಾರ ಸಂಸ್ಥೆಗಳಲ್ಲಿ ಗೊಬ್ಬರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಲುವಾಗಲಿನ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಸಹಾಯಕ ಕೃಷಿ ನಿರ್ದೆಶಕ ವಿ.ಸಿ. ಉಮೇಶ 600 ಚೀಲ ಗೊಬ್ಬರ ಬಳ್ಳಾರಿಯಿಂದ ಬರುತ್ತಿದೆ ಎಂದು ಸಮಾಧಾನ ಹೇಳಿದರು. ಆದರೂ ರೈತರು ಸಮಾಧಾನಗೊಳ್ಳಲಿಲ್ಲ.ಅಂತಿಮವಾಗಿ ಹೊಸಪೇಟೆಯ ಜಂಟಿ ಕೃಷಿ ನಿರ್ದೆಶಕ ಎಸ್.ಮಂಜುನಾಥ ಆಗಮಿಸಿ ಇಂದು ರಾತ್ರಿ 32 ಟನ್ ಯೂರಿಯಾ ಗೊಬ್ಬರ ಬಳ್ಳಾರಿಯಿಂದ ಬರಲಿದೆ. ಗುರುವಾರ ವಿತರಣೆ ಮಾಡುತ್ತೇವೆ, ಶುಕ್ರವಾರ ಅಥವಾ ಶನಿವಾರ ಮತ್ತಷ್ಟು ಟನ್ ರಸಗೊಬ್ಬರ ಕೊಡುತ್ತೇವೆ ಎಂದು ಹೇಳಿದರು. ಆ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಇನ್ನು ಹರಪನಹಳ್ಳಿ ಪಟ್ಟಣದ ಟಿಎಪಿಎಂಎಸ್, ಹಳೆಬಸ್ ನಿಲ್ದಾಣದಲ್ಲಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸಹ ರೈತರು ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಮಧ್ಯಾಹ್ನದ ಸಮಯದಲ್ಲಿ ಬಂದ ಗೊಬ್ಬರವನ್ನು ಪೊಲೀಸರ ನೆರವಿನೊಂದಿಗೆ ರೈತರಿಗೆ ವಿತರಿಸಲಾಯಿತು. ಆದರೂ ಇನ್ನೂ ಸಾಲುತ್ತಿಲ್ಲ ಎನ್ನಲಾಗುತ್ತಿದೆ.ಒಟ್ಟಿನಲ್ಲಿ ಯೂರಿಯಾ ರಸಗೊಬ್ಬಕ್ಕಾಗಿ ತಾಲೂಕಿನಾದ್ಯಂತ ಹಾಹಾಕಾರ ಎದ್ದಿದ್ದು, ಅಧಿಕಾರಿಗಳು ಅಗತ್ಯ ಗೊಬ್ಬರ ವಿತರಿಸಲು ಕ್ರಮಕೈಗೊಳ್ಳಬೇಕಾಗಿದೆ.