ಅಧಿಕಾರಿಗಳೇ ಸಮನ್ವಯದಿಂದ ಕಾರ್ಯ ನಿರ್ವಹಿಸಿ: ಡಾ. ರಂಗಸ್ವಾಮಿ ಸೂಚನೆ

KannadaprabhaNewsNetwork |  
Published : Jun 07, 2025, 12:27 AM ISTUpdated : Jun 07, 2025, 12:28 AM IST
ಫೋಟೊ ಶೀರ್ಷಿಕೆ: 6ಆರ್‌ಎನ್‌ಆರ್2, 2ಎರಾಣಿಬೆನ್ನೂರು ನಗರದ ತಾಪಂ ಸಭಾಭವನದಲ್ಲಿ ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು. ಶಾಸಕ ಪ್ರಕಾಶ ಕೋಳಿವಾಡ ಉಪಸ್ಥಿತರಿದ್ದರು.   | Kannada Prabha

ಸಾರಾಂಶ

ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯಿಂದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ. ಅಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು.

ರಾಣಿಬೆನ್ನೂರು: ಎಲ್ಲ ಇಲಾಖೆ ಅಧಿಕಾರಿಗಳು ಕಳೆದ ವರ್ಷದ ಮಾಹಿತಿ ಸಮೇತ ಸಭೆಗೆ ಹಾಜರಾಗಬೇಕು ಎಂದು ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಹುತೇಕ ಇಲಾಖೆ ಅಧಿಕಾರಿಗಳು ಕಳೆದ ವರ್ಷದ ಮಾಹಿತಿಯಿಲ್ಲದೆ ಸಭೆಗೆ ಆಗಮಿಸಿದ್ದರು. ಇದನ್ನು ಗಮನಿಸಿದ ರಂಗಸ್ವಾಮಿ ಹೀಗಾದರೆ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ ಹೇಗೆ ಮಾಡಬೇಕು ಎಂದು ಪ್ರಶ್ನಿಸಿದರು. ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದು ತಿಂಗಳಿನಲ್ಲಿ ಮುಗಿಯಬೇಕಾದ ಕೆಲಸಗಳಿದ್ದರೂ ವಿಳಂಬವೇಕೆ? ಏನಾದರೂ ಸಮಸ್ಯೆಗಳಿದ್ದರೆ ಶಾಸಕರ ಗಮನಕ್ಕೆ ತನ್ನಿ ಎಂದು ರಂಗಸ್ವಾಮಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಜಯರಾಂ, ಕಾಮಗಾರಿ ವಿಳಂಬ ಮಾಡಿರುವ 8 ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಎಪಿಎಂಸಿ ಬಡಾವಣೆಯಲ್ಲಿ ಇ- ಸ್ವತ್ತು ನೀಡುವ ವಿಚಾರವಾಗಿ ನಡೆದ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಡಾ. ರಂಗಸ್ವಾಮಿ, ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯಿಂದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗದಂತಾಗಿದೆ. ಅಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದರು.

ಆರೋಗ್ಯ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ, ತಾಲೂಕಿನಲ್ಲಿ ಜ್ವರ, ಶೀತ, ಕೆಮ್ಮು ಹೆಚ್ಚಾಗುತ್ತಿದ್ದು, ಕೋವಿಡ್ ಪ್ರಕರಣಗಳು ಎಷ್ಟು ಪತ್ತೆಯಾಗಿವೆ ಎಂದು ತಾಲೂಕು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ, ತಾಲೂಕಿನಲ್ಲಿ ಇದುವರೆಗೂ ಯಾವುದೇ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ. ಕೋವಿಡ್ ಪರಿಸ್ಥಿತಿ ಎದುರಿಸಲು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೌಲಭ್ಯ, ಬೆಡ್‌ಗಳು ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.ಡಾ. ರಂಗಸ್ವಾಮಿ ಮಾತನಾಡಿ, ಜಿಲ್ಲೆಯ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ₹1.80 ಲಕ್ಷ ದರ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದ್ದು, ಇದರ ಬಗ್ಗೆ ವಿಚಾರಿಸಿ ಮಾಹಿತಿ ತಿಳಿದುಕೊಳ್ಳಿ. ಜೂ. 12ರಂದು ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆಯಲ್ಲಿ ನಗರದಲ್ಲಿನ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ನಿಗದಿಪಡಿಸಿ ಎಂದು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು. ಕೃಷಿ ಇಲಾಖೆಯ ಚರ್ಚೆ ವೇಳೆ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ, ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ತಾಲೂಕಿನಲ್ಲಿ ನಕಲಿ ಹಾಗೂ ಖುಲ್ಲಾ ಬಿತ್ತನೆ ಬೀಜಗಳ ಮಾರಾಟದ ಬಗ್ಗೆ ದೂರು ಕೇಳಿ ಬಂದಿವೆ. ಕೃಷಿ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಮುಲಾಜಿಲ್ಲದೇ ಹಾಗೂ ಅಂತಹ ವ್ಯಕ್ತಿಗಳು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಿ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಕಟ್ಟುನಿಟ್ಟಾಗಿ ತಿಳಿಸಿದರು. ನಿರ್ಮಿತಿ ಕೇಂದ್ರದ ಕೆಲಸಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಡಾ. ರಂಗಸ್ವಾಮಿ, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ ಕುಂಠಿತವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶೌಚಾಲಯಗಳ ಚಾವಣಿಗೆ ಆರ್‌ಸಿಸಿ ಹಾಕುವ ಬದಲಿಗೆ ಪ್ಲಾಸ್ಟಿಕ್ ಶೀಟ್‌ಗಳನ್ನು ಬಳಸುವುದರಿಂದ ಅವುಗಳಲ್ಲಿ ಸರಿಯಾಗಿ ಗಾಳಿಯಾಡುತ್ತದೆ. ಇದರಿಂದ ವಾಸನೆ ಉಂಟಾಗುವುದಿಲ್ಲ. ಇದರ ಬಗ್ಗೆ ಗಮನ ಹರಿಸಿ ಎಂದು ಸೂಚಿಸಿದರು.ತಹಸೀಲ್ದಾರ್ ಆರ್.ಎಚ್. ಭಾಗವಾನ್, ತಾಪಂ ಇಒ ಪರಮೇಶಪ್ಪ ವೇದಿಕೆಯಲ್ಲಿದ್ದರು.

PREV

Recommended Stories

ಬಿಎಂಟಿಸಿ ನೌಕರರ ಅಪಘಾತ ವಿಮಾ ಮೊತ್ತ 1.25 ಕೋಟಿಗೆ ಏರಿಕೆ
ಪರಪ್ಪನ ಅಗ್ರಹಾರ ಜೈಲಲ್ಲಿರುವ ಪ್ರಜ್ವಲ್‌ಗೆ ಬಿಡುಗಡೆ ಭಾಗ್ಯ ಇಲ್ಲ