ರಾಮನಗರ: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಮತ್ತು ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಮೊದಲ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ವದರ್ಜೆಯ ಎಐ ಸಿಟಿ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ - ಬಿಡದಿ ಟೌನ್ ಶಿಪ್)ಯ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನ ಹಿಂದೆಯೇ ರೈತರ ಆಕ್ರೋಶ ಭುಗಿಲೆದ್ದಿದೆ.
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಘೋಷಣೆಯಾಗಿ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಆನಂತರ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಅವಧಿಯಲ್ಲಿ ಟೌನ್ ಶಿಪ್ ಯೋಜನೆ ಪ್ರಕ್ರಿಯೆಗಳು ಹಂತ ಹಂತವಾಗಿ ನಡೆದುಕೊಂಡು ಬಂದಿತ್ತು. ಆಗಿನಿಂದಲೂ ರೈತರು ಹೋರಾಟ ನಡೆಸುತ್ತಲೇ ಬಂದಿದ್ದರು. 20 ವರ್ಷಗಳ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರ ಅಂದಾಜು 18,104 ಕೋಟಿ ರು. ವೆಚ್ಚದಲ್ಲಿ ಒಟ್ಟು 7,481 ಎಕರೆ ಪ್ರದೇಶವನ್ನು ಒಳಗೊಂಡ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಕಾರ್ಯಗತಗೊಳಿಸಲು ಅಧಿಕೃತವಾಗಿ ಅನುಮೋದನೆ ನೀಡಿದೆ.
ಇಂದು ಸಿಎಂ ಬಳಿಗೆ ರೈತರ ನಿಯೋಗ:ಈಗ ರೈತರು ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಚಳವಳಿಯನ್ನು ತೀವ್ರ ಗೊಳಿಸುವ ಜೊತೆಗೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಟೌನ್ ಶಿಪ್ ಯೋಜನೆ ಜಾರಿಗೊಳಿಸಲು ಉದ್ದೇಶಿಸಿರುವ ಪ್ರದೇಶ ಹಸಿರು ವಲಯವಾಗಿದ್ದು, 2013ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಸಾಮಾಜಿಕ ಪರಿಣಾಮ ಅಧ್ಯಯನ ಮಾಡಿಲ್ಲ. ಇದನ್ನು ಪ್ರಶ್ನಿಸಿ ರೈತರ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದೀಗ ವಿಶೇಷ ಸಚಿವ ಸಂಪುಟದಲ್ಲಿ ಟೌನ್ ಶಿಪ್ ಯೋಜನೆಗೆ ಅನುಮೋದನೆ ನೀಡಿರುವುದು ರೈತರ ಆಕ್ರೋಶ ಇಮ್ಮಡಿಗೊಳ್ಳುವಂತೆ ಮಾಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಶುಕ್ರವಾರ (ಮೇ 1) ರೈತರ ನಿಯೋಗ ತೆರಳುತ್ತಿದ್ದು, ಈ ಯೋಜನೆಯಿಂದ ಕೃಷಿ ಭೂಮಿ ಮೇಲಾಗುವ ದುಷ್ಪರಿಣಾಮಗಳ ವಸ್ತುಸ್ಥಿತಿಯನ್ನು ರೈತ ನಾಯಕರು ಮನವರಿಕೆ ಮಾಡಿಕೊಡಲಿದ್ದಾರೆ.
ಬಿಡದಿ ಟೌನ್ ಶಿಪ್‌ಗಾಗಿ ಅಧಿಸೂಚನೆ ಹೊರಡಿಸಿ, ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿ ರೈತರೊಂದಿಗೆ ಬೀದಿಗಿಳಿದು ಹೋರಾಟ ನಡೆಸಿತ್ತು. ಕೇಂದ್ರ ಸಚಿವ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ , ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಚಳವಳಿಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಆದರೆ, ರಾಜ್ಯ ಸರ್ಕಾರ ವಿಪಕ್ಷಗಳು ಹಾಗೂ ರೈತರ ಹೋರಾಟವನ್ನು ಲೆಕ್ಕಿಸದೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ(ಬಿಡದಿ ಟೌನ್ ಶಿಪ್)ಗೆ ಅನುಮೋದನೆ ನೀಡಿರುವುದರಿಂದ ರೈತರ ಹೋರಾಟ ತೀವ್ರಗೊಳ್ಳುವ ಸಾಧ್ಯತೆಗಳಿವೆ.
ಬಿಡದಿ ಟೌನ್ ಯೋಜನೆ ಸಾಗಿ ಬಂದ ಹಾದಿ:
2025 ಮಾ.12ರಂದು ಭೂಸ್ವಾಧೀನ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಭೂ ದರ ನಿಗದಿ ಪಡಿಸಿದ ನಂತರ ಭೂ ಸ್ವಾಧೀನ ಪ್ರಕ್ರಿಯೆಯೂ ಆರಂಭಗೊಂಡಿತ್ತು. ಇದೀಗ 2026ರ ಏ.30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ಬಿಡದಿ ಟೌನ್ ಶಿಪ್ ಯೋಜನೆಗೆ ಅಧಿಕೃತ ಮುದ್ರೆ ಹೊತ್ತಿದೆ.
ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಅನುಮೋದನೆ ನೀಡುವ ಮೂಲಕ ಬೆಂಗಳೂರು ಸುತ್ತಮುತ್ತಲಿರುವ ಹಸಿರನ್ನು ನಾಶ ಮಾಡುವ ಪ್ರಕ್ರಿಯೆಗೆ ಮುನ್ನುಡಿ ಬರೆದಿದೆ. ರೈತರಿಂದ ಬಲವಂತವಾಗಿ ಭೂಮಿ ಕಸಿದುಕೊಳ್ಳಲು 2013ರ ಭೂ ಸ್ವಾಧೀನ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ನಮ್ಮ ಭೂಮಿ ನಮ್ಮ ಹಕ್ಕು. ನಮ್ಮ ಜೀವ ಹೋದರೂ ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.
-ಪ್ರಕಾಶ್ , ರೈತ ಮುಖಂಡರುಕೋಟ್ ....
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಕಾರ್ಯಗತಗೊಳಿಸಲು ವಿಶೇಷ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಅಂತಿಮ ಅಧಿಸೂಚನೆ ಪ್ರಕಟವಾದ ಮೇಲೆ ಕಾನೂನು ಹೋರಾಟ ಆರಂಭಿಸುತ್ತೇವೆ. ಅಲ್ಲಿವರೆಗೆ ಬೀದಿ ಹೋರಾಟ ಮುಂದುವರೆಯಲಿದೆ. ಬಡ ರೈತರ ಕೃಷಿ ಭೂಮಿ ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ.-ಎ.ಮಂಜುನಾಥ್, ಮಾಜಿ ಶಾಸಕರು
30ಕೆಆರ್ ಎಂಎನ್ 7,8.ಜೆಪಿಜಿ7.ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ನಕ್ಷೆ
8.ಎ.ಐ.ಸಿಟಿ ನಿರ್ಮಾಣಗೊಳ್ಳಲಿರುವ ಪ್ರದೇಶ