ಮೈಸೂರನ್ನು ಯೋಗ ನಗರಿ ಎಂದು ಅಧಿಕೃತವಾಗಿ ಘೋಷಿಸಿ, ಅನುದಾನ ನೀಡಿ: ಮಡ್ಡೀಕೆರೆ ಗೋಪಾಲ್‌

KannadaprabhaNewsNetwork |  
Published : Jan 12, 2024, 01:46 AM IST
3 | Kannada Prabha

ಸಾರಾಂಶ

ಸಾಂಸ್ಕೃತಿಕ ನಗರಿ ಮೈಸೂರಿಗೆ ಯೋಗ ಕಲಿಯಲು ದೇಶ- ವಿದೇಶಗಳ ಸಾವಿರಾರು ಜನ ಬರುತ್ತಿದ್ದಾರೆ. ಯಾದವಗಿರಿ, ಒಂಟಿಕೊಪ್ಪಲು, ಗೋಕುಲಂನಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ನೂರಾರು ವಿದೇಶಿಯರು ಕಣ್ಣಿಗೆ ಬೀಳುತ್ತಾರೆ. ಮೈಸೂರನ್ನು ಯೋಗ ನಗರಿ ಎಂದು ಕರೆಯಲಾಗುತ್ತಿದೆ. ಆದರೆ, ಅಧಿಕೃತವಾಗಿ ಘೋಷಿಸಿ, ಯೋಗ ಅಭಿವೃದ್ಧಿಗೆ ಅನುದಾನ ನೀಡಿದರೆ ಮತ್ತಷ್ಟು ಉತ್ತಮ.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರನ್ನು ಯೋಗ ನಗರಿ ಎಂದು ಅಧಿಕೃತವಾಗಿ ಘೋಷಿಸಿ, ಯೋಗ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಚೈತನ್ಯ ಯೋಗ ಎಜುಕೇಷನಲ್‌ ಅಂಡ್‌ ರಿಸರ್ಚ್‌ ಫೌಂಡೇಷನ್‌ನ ಯೋಗ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಾಂಸ್ಕೃತಿಕ ನಗರಿ ಮೈಸೂರಿಗೆ ಯೋಗ ಕಲಿಯಲು ದೇಶ- ವಿದೇಶಗಳ ಸಾವಿರಾರು ಜನ ಬರುತ್ತಿದ್ದಾರೆ. ಯಾದವಗಿರಿ, ಒಂಟಿಕೊಪ್ಪಲು, ಗೋಕುಲಂನಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ನೂರಾರು ವಿದೇಶಿಯರು ಕಣ್ಣಿಗೆ ಬೀಳುತ್ತಾರೆ. ಮೈಸೂರನ್ನು ಯೋಗ ನಗರಿ ಎಂದು ಕರೆಯಲಾಗುತ್ತಿದೆ. ಆದರೆ ಅಧಿಕೃತವಾಗಿ ಘೋಷಿಸಿ, ಯೋಗ ಅಭಿವೃದ್ಧಿಗೆ ಅನುದಾನ ನೀಡಿದರೆ ಮತ್ತಷ್ಟು ಉತ್ತಮ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರೋತ್ಸಾಹದಿಂದ ಕೃಷ್ಣಮಾಚಾರ್‌ ಯೋಗ ಆರಂಭಿಸಿದರು. ಬಿಕೆಎಸ್‌ ಅಯ್ಯಂಗಾರ್‌ ಅವರು ಅದನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸಲು ಕಾರಣಕರ್ತರಾದರು ಎಂದು ಅವರು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಟಿ. ಜಲೇಂದ್ರಕುಮಾರ್‌ ಮಾತನಾಡಿ, ಮೂವತ್ತು ವರ್ಷಗಳ ಹಿಂದೆ ಕೇವಲ ಐದು ಯೋಗ ಕಲಿಕೆ ಸಂಸ್ಥೆಗಳಿದ್ದವು.ಈಗ ಸಾಕಷ್ಟು ಬೆಳೆದಿದೆ. ಇದರಿಂದಾಗಿಯೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದರು ಎಂದರು.

ಜಿಎಸ್‌ಎಸ್‌ ಯೋಗ ಫೌಂಡೇಷನ್‌ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್‌ ಮಾತನಾಡಿ, ಯೋಗ ಎಂದರೇ ಕೇವಲ ಯೋಗಾಭ್ಯಾಸವಲ್ಲ. ಜೀವನದ ಪ್ರತಿಯೊಂದು ಹೆಜ್ಜೆ ಕೂಡ ಯೋಗವೇ ಎಂದರು.

ಮೈಸೂರಿನ ಎಲ್ಲಾ ಯೋಗ ಸಂಘಟನೆಗಳ ಸಹಕಾರದಿಂದ ಯೋಗವನ್ನು ಪ್ರಸಿದ್ಧಿ ಮಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಫೌಂಡೇಷನ್‌ ಅಧ್ಯಕ್ಷ ಬಿ.ಪಿ. ಮೂರ್ತಿ ಪ್ರಾಸ್ತಾವಿಕ ಮಾತನಾಡಿ, 23 ವರ್ಷಗಳ ಹಿಂದೆ ಆರಂಭವಾದ ನಮ್ಮ ಸಂಸ್ಥೆ ಈವರೆಗೆ ಸಾವಿರಾರು ಮಂದಿಗೆ ಯೋಗ ತರಬೇತಿ ನೀಡಿದೆ ಎಂದರು.

ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯಕ್ಕೆ ಯೋಗ ಬೇಕು ಎಂಬ ಕಾರಣಕ್ಕಾಗಿ ಯೋಗಾಭ್ಯಾಸದ ಚಿತ್ರಗಳಿರುವ ಕ್ಯಾಲೆಂಜರ್‌ ಹೊರತರಲಾಗಿದೆ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ, ಉಸಿರಾಟ, ವಿಶ್ರಾಂತಿ, ಸಕಾರಾತ್ಮಕ ಚಿಂತನೆಗಳು ಮತ್ತು ಉತ್ತಮ ಜೀವನಶೈಲಿ- ಈ ಪಂಚಸೂತ್ರಗಳನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ತಜ್ಞೆ ನಂದಿನಿ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಫೌಂಡೇಷನ್‌ ಕಾರ್ಯದರ್ಶಿ ಭವಾನಿ ವಂದಿಸಿದರು. ಲಕ್ಷ್ಮಿ,ಲಕ್ಷ್ಮಿ ನಾಗ್‌ ಇದ್ದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಇದೇ ವೇಳೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರಿಗೆ ಪತ್ರಿಕಾ ಚೈತನ್ಯ, ಜಿಎಸ್ಎಸ್‌ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್‌ ಅವರಿಗೆ ಯೋಗ ಚೈತನ್ಯ ಹಾಗೂ ಹಿಮಾಲಯ ಫೌಂಡೇಷನ್‌ ಅಧ್ಯಕ್ಷ ಎನ್‌. ಅನಂತ ಅವರಿಗೆ ಯೋಗ ಸಾಹಿತ್ಯ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ