ಬೀದಿಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳ ದೌರ್ಜನ್ಯ: ಆರೋಪ

KannadaprabhaNewsNetwork |  
Published : Dec 06, 2025, 03:00 AM IST
ಸುದ್ದಿಗೋಷ್ಠಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಇ ರಂಗಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಕೇಂದ್ರ ಸರ್ಕಾರದ ಸ್ಟ್ರೀಟ್ ವೆಂಡರ್ ಆಕ್ಟ್ ನ್ನು ಉಲ್ಲಂಘಿಸಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಇ ರಂಗಸ್ವಾಮಿ ಆರೋಪಿಸಿದ್ದಾರೆ.

ಕಾರವಾರ: ನಗರದಲ್ಲಿ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ನಗರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಮಿತಿಮೀರಿದೆ. ಜೀವನೋಪಾಯಕ್ಕಾಗಿ ಹಣ್ಣು, ಹೂವು ಮಾರುವವರ ಗಾಡಿಗಳಿಂದ ವಸ್ತುಗಳನ್ನು ಕಿತ್ತು ಬಿಸಾಕುವ ಮೂಲಕ ಅಧಿಕಾರಿಗಳು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಇ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವಿದ್ದರೂ, ಕೇಂದ್ರ ಸರ್ಕಾರದ ಸ್ಟ್ರೀಟ್ ವೆಂಡರ್ ಆಕ್ಟ್ ನ್ನು ಉಲ್ಲಂಘಿಸಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.

ನಿಯಮದ ಪ್ರಕಾರ, ಟೌನ್ ವೆಂಡಿಂಗ್ ಕಮಿಟಿ ರಚನೆಯಾಗದೆ ಮತ್ತು ಅದರ ಒಪ್ಪಿಗೆ ಇಲ್ಲದೆ ಯಾವುದೇ ವ್ಯಾಪಾರಿಯನ್ನು ಒಕ್ಕಲೆಬ್ಬಿಸುವಂತಿಲ್ಲ. ಈ ಸಮಿತಿಯಲ್ಲಿ ನಗರಸಭೆ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್‌ಗಳು ಹಾಗೂ 10 ಜನ ವ್ಯಾಪಾರಿ ಪ್ರತಿನಿಧಿಗಳು ಸೇರಿದಂತೆ ಒಟ್ಟು 21 ಸದಸ್ಯರಿರುತ್ತಾರೆ. ಆದರೆ ಕಾರವಾರದಲ್ಲಿ ಆಯುಕ್ತರು ತಾವೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಕಾಯ್ದೆ ಅನುಷ್ಠಾನಗೊಳಿಸದೆ, ಸಮಿತಿ ಸಭೆ ಕರೆಯದೆ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ರಂಗಸ್ವಾಮಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೀದಿಬದಿ ವ್ಯಾಪಾರಿಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಸಾಲ ಸೌಲಭ್ಯ ಮತ್ತು ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ನೀಡುತ್ತಿವೆ. ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಗೋದಾಮು ನಿರ್ಮಿಸಲು 80 ಲಕ್ಷದಿಂದ 1.5 ಕೋಟಿ ರೂ.ವರೆಗೆ ಅನುದಾನವಿದೆ. ಆದರೆ ಕಾರವಾರದಲ್ಲಿ ಈ ಹಣ ಎಲ್ಲಿ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಡದೆ, ಅವರು ಪಡೆದ ಸಾಲ ಮರುಪಾವತಿ ಮಾಡಲಾಗದ ಸ್ಥಿತಿ ನಿರ್ಮಿಸಿ, ಅವರನ್ನು ಆತ್ಮಹತ್ಯೆಯತ್ತ ದೂಡಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಅಧಿಕಾರಿಗಳು ವ್ಯಾಪಾರಿಗಳಿಂದ ದಿನನಿತ್ಯ ₹40 ರಿಂದ ₹50 ಅಕ್ರಮವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ರಂಗಸ್ವಾಮಿ ಆರೋಪ ಮಾಡಿದರು. ಸ್ಥಳೀಯರಿಗೆ ಆದ್ಯತೆ ನೀಡುವ ಬದಲು ಅನ್ಯ ರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ. ಸರಿಯಾದ ಡಿಜಿಟಲ್ ಐಡಿ ಕಾರ್ಡ್‌ಗಳನ್ನು ನೀಡಲಾಗಿಲ್ಲ. ಇನ್ನು ಮುಂದಾದರೂ ಕಿರುಕುಳ ನಿಲ್ಲಿಸದಿದ್ದರೆ ಪೊಲೀಸ್ ಇಲಾಖೆ ಮತ್ತು ಆಯುಕ್ತರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಬೀದಿ ಬದಿ ವ್ಯಾಪಾರಸ್ಥರ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಕಾವ್ಯಶ್ರೀ ಕೆ.ಎಸ್., ಜಿಲ್ಲಾಧ್ಯಕ್ಷ ಫಕೀರಪ್ಪ ಭಂಡಾರಿ, ಮಹಿಳಾ ಜಿಲ್ಲಾಧ್ಯಕ್ಷೆ ಮಮತಾಜ ಆರ್.ಹಬೀಬ ಸೇರಿದಂತೆ ಇತರೆ ಸದಸ್ಯರು ಇದ್ದರು.ನಿರಂತರ ಸಭೆ

ಬೀದಿ ಬದಿ ವ್ಯಾಪಾರದ ಪರವಾನಗಿ ಪಡೆದವರು ಬೇರೆಯವರಿಗೆ ಅಂಗಡಿ ನಡೆಸುವಂತೆ ಕೊಡಲು ಅವಕಾಶ ಇಲ್ಲವಾಗಿದ್ದು, ಹಾಗೆ ಮಾಡಿದಲ್ಲಿ ಅವರ ಪರವಾನಗಿ ರದ್ದುಪಡಿಸಲು ಅವಕಾಶವಿದೆ. ಇದಕ್ಕೆ ನಮ್ಮ ಬೆಂಬಲ ಸಹ ಇದ್ದು, ನಗರಸಭೆ ಆಯುಕ್ತರು ನಿಗದಿತವಾಗಿ ವ್ಯಾಪಾರಸ್ಥರ ಕಮಿಟಿಗಳೊಂದಿಗೆ ಸಭೆ ನಡೆಸಿದಲ್ಲಿ ಇಂತಹ ಲೋಪಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ ಎಂದು .ರಾಜ್ಯಾಧ್ಯಕ್ಷ ಸಿ.ಇ. ರಂಗಸ್ವಾಮಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲೆಗಳಿಗೆ ಸಕಾರಾತ್ಮಕತೆ ಹೆಚ್ಚಿಸುವ ಶಕ್ತಿ ಇದೆ: ಡಾ.ಪಿ.ವಿ.ಭಂಡಾರಿ
ಬೆಳೆ ಕಟಾವಿಗೆ ಯಂತ್ರದ ಮೊರೆ ಹೋದ ಅನ್ನದಾತ