ಕೆರೆಗಳನ್ನು ತುಂಬಿಸುವಲ್ಲಿ ಅಧಿಕಾರಿಗಳು ವಿಫಲ: ಶಾಸಕರ ಆರೋಪ

KannadaprabhaNewsNetwork | Published : Aug 14, 2024 1:05 AM

ಇದೇ ನಿಮಗೆ ಕೊನೆಯ ವಾರ್ನಿಂಗ್. ಐ ಡೋಂಟ್ ಕೇರ್ ಎನಿಬಡಿ. ನಾನು ರೂಲಿಂಗ್ ಪಾರ್ಟಿ ಎಂಎಲ್‌ಎ ಆಗಿದ್ದರೂ ರೈತರನ್ನು ನಾನೇ ಕರೆತಂದು ಹೋರಾಟ ಮಾಡಬೇಕಾಗುತ್ತೆ. ಅಣೆಕಟ್ಟು ಭರ್ತಿಯಾಗಿ ಎಷ್ಟು ದಿನವಾಯ್ತು. ಕೆರೆಗಳನ್ನು ತುಂಬಿಸೋಕೆ ವಿಳಂಬ ಏಕೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್ ಭರ್ತಿಯಾಗಿ ಹದಿನೈದು ದಿನಳಾದರೂ ವಿಶ್ವೇಶ್ವರಯ್ಯ ನಾಲಾ ಕೊನೆಯ ಭಾಗಕ್ಕೆ ನೀರು ತಲುಪದಿರುವುದು, ಕೆರೆಗಳನ್ನು ತುಂಬಿಸದಿರುವುದು ನೀರು ನಿರ್ವಹಣೆಯಲ್ಲಾಗುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಧು ಜಿ.ಮಾದೇಗೌಡ ಅವರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಮಂಗಳವಾರ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಳವಳ್ಳಿ ಭಾಗಕ್ಕೆ ಹೆಬ್ಬಕವಾಡಿ ಬಳಿ ಸುತ್ತುಕಟ್ಟೆಯಿಂದ ಹೆಚ್ಚು ನೀರು ಹರಿದುಬರುತ್ತದೆ. ಆ ನಾಲೆಯಲ್ಲಿ ೧೦೦೦ ಕ್ಯುಸೆಕ್ ನೀರು ಹರಿಯಬೇಕಿದ್ದು, ಅಲ್ಲಿ ೭೫೦ ಕ್ಯುಸೆಕ್‌ನಿಂದ ೮೫೦ ಕ್ಯುಸೆಕ್ ನೀರು ಹರಿಸುತ್ತಿದ್ದೀರಿ. ನೀರು ತಲುಪುವುದಕ್ಕೆ ಹೇಗೆ ಸಾಧ್ಯ ಎಂದು ಕೆಆರ್‌ಎಸ್ ಅಧೀಕ್ಷಕ ಎಂಜಿನಿಯರ್ ರಘುರಾಮ್ ಅವರನ್ನು ಪ್ರಶ್ನಿಸಿದರು.

ಇದೇ ನಿಮಗೆ ಕೊನೆಯ ವಾರ್ನಿಂಗ್. ಐ ಡೋಂಟ್ ಕೇರ್ ಎನಿಬಡಿ. ನಾನು ರೂಲಿಂಗ್ ಪಾರ್ಟಿ ಎಂಎಲ್‌ಎ ಆಗಿದ್ದರೂ ರೈತರನ್ನು ನಾನೇ ಕರೆತಂದು ಹೋರಾಟ ಮಾಡಬೇಕಾಗುತ್ತೆ. ಅಣೆಕಟ್ಟು ಭರ್ತಿಯಾಗಿ ಎಷ್ಟು ದಿನವಾಯ್ತು. ಕೆರೆಗಳನ್ನು ತುಂಬಿಸೋಕೆ ವಿಳಂಬ ಏಕೆ. ಸಚಿವರು ಅವಶ್ಯಕತೆ ಇಲ್ಲದ ಕಾನೂನು ಮಾಡಿಕೊಂಡು ಕುಳಿತಿದ್ದಾರೆ. ಅದನ್ನೆಲ್ಲಾ ಕೇಳಿಕೊಂಡು ಕೂರೋದಕ್ಕಲ್ಲ ನಾವು ಬರೋದು. ಹಿಂದಿನಿಂದಲೂ ಮೊದಲು ಒಣಪ್ರದೇಶಕ್ಕೆ ನೀರು ಕೊಡಿ ಅಂತಾನೇ ಹೇಳುತ್ತಿದ್ದೇವೆ. ಆದರೆ, ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಮದ್ದೂರು, ಚಿಕ್ಕರಸಿನಕೆರೆ ಹೋಬಳಿಯಲ್ಲೂ ಇದೇ ಪರಿಸ್ಥಿತಿ ಇದೆ. ಇದುವರೆಗೂ ಒಂದು ಕೆರೆಯೂ ಭರ್ತಿಯಾಗಿಲ್ಲ. ಕೇವಲ ಮಂತ್ರಿಗಳ ಕ್ಷೇತ್ರದ ಕೆರೆಗಳನ್ನು ತುಂಬಿಸಿದ್ದೀರಿ. ನಾಲೆಯ ತೂಬುಗಳನ್ನು ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ಹಲವೆಡೆ ಕೃಷಿ ಜಮೀನುಗಳಿಗೂ ನೀರು ತಲುಪಿಲ್ಲ ಎಂಬುದನ್ನು ಸಭೆಯ ಗಮನಕ್ಕೆ ತಂದರು.

ಮದ್ದೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗಿಲ್ಲ. ಆದರೂ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದಾಗಿ ನೀಡಲಾಗಿದೆ. ಈ ಅಂಕಿ-ಅಂಶಗಳ ಬಗ್ಗೆಯೇ ನಮಗೆ ಅನುಮಾನವಿದೆ. ಮದ್ದೂರು ಭಾಗಕ್ಕೆ ನಿರಂತರವಾಗಿ ನೀರು ಹರಿಸುವ ಮೂಲಕ ಕೆರೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಆಗ ಸಚಿವ ಎನ್.ಚಲುವರಾಯಸ್ವಾಮಿ ಅವರು, ಅಚ್ಚುಕಟ್ಟು ಪ್ರದೇಶದಲ್ಲಿ ಕೆರೆ-ಕಟ್ಟೆ, ಹಳ್ಳ ತುಂಬುಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೆರೆಗಳು ತುಂಬುವುದಕ್ಕೆ ಮಳೆಯ ಸಹಕಾರವೂ ಬೇಕು. ನೀರಾವರಿ ಇಲಾಖೆ ಅಧಿಕಾರಿಗಳು ಸ್ವತಃ ಶಾಸಕರ ಜೊತೆ ಕುಳಿತು ಚರ್ಚಿಸಿ ನೀರು ಹರಿಸುವುದಕ್ಕೆ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ತಿಳಿದು ಹತ್ತು ದಿನಗಳೊಳಗೆ ಸಮಸ್ಯೆ ಬಗೆಹರಿಸಬೇಕು. ಎಲ್ಲಾ ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೆಪ್ಟೆಂಬರ್ ಒಳಗೆ ಕಾಮಗಾರಿ ಮುಗಿಸಿ:

ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ನೆಪ ಹೇಳಿದರೆ ಆಗುವುದಿಲ್ಲ. ಕಾಮಗಾರಿಗಳಲ್ಲಿ ಸಮಸ್ಯೆಗಳಿದ್ದರೆ ಅದನ್ನು ಶಾಸಕರ ಗಮನಕ್ಕೆ ತಂದು ಬದಲಾವಣೆ ಮಾಡಿಕೊಂಡು ಕಾಮಗಾರಿ ಮುಗಿಸಬೇಕು. ಈಗ ಶಾಸಕರ ಖಾತೆಯಲ್ಲಿ ತಲಾ ಎರಡು ಕೋಟಿ ರು. ಅನುದಾನವಿದೆ. ಹಾಗಾಗಿ ಈ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡುವುದಕ್ಕೆ ಅವಕಾಶವಿರುವುದರಿಂದ ಕೂಡಲೇ ಕಾಮಗಾರಿಗಳನ್ನು ಕೈಗೆತ್ತಿಕಕೊಂಡು ಮುಗಿಸುವಂತೆ ತಿಳಿಸಿದರು.

ಕ್ರಿಮಿನಲ್ ಕೇಸು ದಾಖಲಿಸಿ:

ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಆಧಾರ್ ಸೀಡಿಂಗ್ ಮಾಡುವ ಸಮಯದಲ್ಲಿ ಎಚ್ಚರದಿಂದ ಇರಬೇಕು. ಒಂದೇ ಹೆಸರಿನ ವ್ಯಕ್ತಿಗಳ ಆರ್‌ಟಿಸಿಗೆ ಅದೇ ಹೆಸರಿನ ಇನ್ನೊಬ್ಬರನ್ನು ತಂದು ಸೇರಿಸುವ ಕೆಲಸವಾಗುತ್ತಿದೆ. ಅಧಿಕೃತ ಮಾಲೀಕರ ಹೆಸರನ್ನೇ ಸೇರಿಸಬೇಕು. ಜೊತೆಗೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಕ್ರಯ ಮಾಡಲಾಗುತ್ತಿದೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ. ಆದರೆ, ಯಾರ ವಿರುದ್ಧವೂ ಕ್ರಮವಾಗುತ್ತಿಲ್ಲ ಎಂದು ತಿಳಿಸಿದಾಗ, ಜಿಲ್ಲಾಧಿಕಾರಿ ಡಾ.ಕುಮಾರ ಉತ್ತರಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಿದರೆ ಇಲಾಖೆ ಕೆಲಸಗಳಿಗೆ ತೊಂದರೆಯಾಗುತ್ತುದೆ ಎಂದಾಗ, ಅವರಲ್ಲಿ ಭಯ ಬರುವುದಾದರೂ ಹೇಗೆ ಎಂದು ಶಾಸಕ ರಮೇಶ್ ಮತ್ತೊಮ್ಮೆ ಪ್ರಶ್ನಿಸಿದರು. ಇದಕ್ಕೆ ಶಾಸಕಕ ಪಿ.ಎಂ.ನರೇಂದ್ರಸ್ವಾಮಿ ಅವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು, ಗ್ಯಾರಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಅನ್ಬುಕುಮಾರ್, ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಳದಂಡಿ ಇತರರಿದ್ದರು.