ಮೂರು ವರ್ಷದಲ್ಲಿ ನಾಲ್ಕು ಮದುವೆ: ನಕಲಿ ವಧುವಿಗೆ ಇಬ್ಬರು ಮಕ್ಕಳು

KannadaprabhaNewsNetwork |  
Published : Aug 14, 2024, 01:04 AM IST
ಗುಬ್ಬಿ ತಾಲೂಕು ಹತ್ತಿಗೆಟ್ಟೆ ಗ್ರಾಮದಲ್ಲಿ ಮೋಸ ಮಾಡಿಕೊಂಡು ತಾಳಿ ಕಟ್ಟಿಸಿಕೊಳ್ಳುತ್ತಿರುವ ಮದುಮಗಳು | Kannada Prabha

ಸಾರಾಂಶ

ಮೂರು ವರ್ಷದಲ್ಲಿ ನಾಲ್ಕು ಮದುವೆ: ನಕಲಿ ವಧುವಿಗೆ ಇಬ್ಬರು ಮಕ್ಕಳು

ಕನ್ನಡಪ್ರಭ ವಾರ್ತೆ ಗುಬ್ಬಿಅಸಲಿ ಮದುವೆಯ ನಾಟಕವಾಡಿ ಒಡವೆ ಸೇರಿದಂತೆ ಹಣ ದೋಚುತ್ತಿದ್ದ ನಾಲ್ವರ ವ್ಯವಸ್ಥಿತ ತಂಡವನ್ನು ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಮದುವೆ ಹೆಸರಲ್ಲಿ ಅವಿವಾಹಿತ ಯುವಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ ದಲ್ಲಾಳಿಗಳ ತಂಡ ಗ್ರಾಮೀಣ ಭಾಗದಲ್ಲಿ ಮದುವೆ ಮಾಡಲು ಹಾತೊರೆಯುವ ಕುಟುಂಬವನ್ನು ನಂಬಿಸಿ ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಹಣ, ಚಿನ್ನದೊಂದಿಗೆ ವ್ಯವಸ್ಥಿತವಾಗಿ ಪರಾರಿಯಾಗುತ್ತಿದ್ದರು. ಈ ತಂಡವನ್ನು ಗುಬ್ಬಿ ಪೊಲೀಸರು, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಂಧಿಸಿ ಕರೆ ತಂದು ಜೈಲಿಗಟ್ಟುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.ಎಲ್ಲರೂ ಪಾತ್ರಧಾರಿಗಳುಲಕ್ಷ್ಮೀ ಬಾಳಾಸಾಬ್ ಜನಕರ್, @ ಕೋಮಲ, ಸಿದ್ದಪ್ಪ, ಲಕ್ಷ್ಮೀಬಾಯಿ, ಲಕ್ಷ್ಮೀ ಬಂಧಿತರು. ಲಕ್ಷ್ಮೀ ಬಾಳಾಸಾಬ್ ಜನಕರ್ @ಕೋಮಲ ಮಧುಮಗಳಾಗಿ ಸಿಕ್ಕಿಬಿದ್ದಿದ್ದರೆ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ ಹಾಗೂಬ್ರೋಕರ್‌ ಆಗಿರುವ ಲಕ್ಷ್ಮೀ ಬಂಧಿತರು. ಆಶ್ಚರ್ಯ ಎಂದರೆ ನಕಲಿ ವಧುವಿಗೆ ಇಬ್ಬರು ಬೆಳೆದು ನಿಂತ ಮಕ್ಕಳಿದ್ದಾರೆ.ತುಮಕೂರಿನ ಗುಬ್ಬಿ ಸೇರಿದಂತೆ ರಾಜ್ಯದ ಹಲವು ಕಡೆ ಮುಗ್ಧ ಕುಟುಂಬವನ್ನು ಯಾಮಾರಿಸಿದ್ದ ತಂಡ ಮೂರು ವರ್ಷದಲ್ಲಿ ನಾಲ್ಕು ನಕಲಿ ಮದುವೆ ನಡೆಸಿ ಹಣ, ಚಿನ್ನಾಭರಣ ದೋಚಿ ನಾಪತ್ತೆಯಾಗಿದ್ದ ಘಟನೆ ನಡೆದಿತ್ತು.ಮೋಸದ ಜಾಲಕ್ಕೆ ಬಿದ್ದಿದ್ದ ಪಾಲಾಕ್ಷಈ ಪೈಕಿ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಪಾಲಾಕ್ಷ ಎಂಬವರ ಮಗನಿಗೆ ನಕಲಿ ವಧು ಸೃಷ್ಟಿಸಿ, ಎಲ್ಲ ಸಂಪ್ರದಾಯದಂತೆ ಮದುವೆ ನಡೆಸಿದ್ದಾರೆ. ದಯಾನಂದಮೂರ್ತಿ(38) ಅಸಲಿ ಗಂಡಿಗೆ ಹೆಣ್ಣು ಹುಡುಕುವ ತವಕದಲ್ಲಿ ಈ ಮೋಸದ ಜಾಲಕ್ಕೆ ಪಾಲಾಕ್ಷ ಕುಟುಂಬ ಸಿಲುಕಿದೆ.ಕುಷ್ಟಗಿ ಮೂಲದ ಬಸವರಾಜು ಮೂಲಕ ಬ್ರೋಕರ್ ಲಕ್ಷ್ಮೀ ಎಂಬಾಕೆಯ ಪರಿಚಯ ಮಾಡಿಕೊಂಡ ಪಾಲಾಕ್ಷ ಅವರ ಮದುವೆ ಕನಸಿಗೆ ಮತ್ತಷ್ಟು ಆಸೆ ಹುಟ್ಟಿಸಿ, ಹುಬ್ಬಳ್ಳಿಯಲ್ಲಿ ಒಬ್ಬ ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ ತಾಯಿ ಇಲ್ಲ, ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿ ಕೋಮಲ ಎಂಬ ಹೆಸರಿನಲ್ಲಿ ಯುವತಿಯ ಪೋಟೋ ತೋರಿಸಿದ್ದರು.ಗಂಡಿನ ಮನೆ ನೋಡಲು ತಾಲೂಕಿನ ಅತ್ತಿಕಟ್ಟೆ ಗ್ರಾಮಕ್ಕೆ ಬಂದಿದ್ದ ನಕಲಿ ವಧು, ಜೊತೆಗೆ ನಕಲಿ ಚಿಕ್ಕಮ್ಮ ಚಿಕ್ಕಪ್ಪ ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಮದುವೆ ಗಂಡಿನ ಮನೆಗೆ ಬಂದು ಅಂದೇ ಮದುವೆ ಮಾತುಕತೆ ನಡೆಸಿ ಮರುದಿನವೇ ಅತ್ತಿಕಟ್ಟೆ ಗ್ರಾಮದಲ್ಲೇ ದೇವಸ್ಥಾನದ ಬಳಿ ಮದುವೆ ಮಾಡಿ ಮುಗಿಸಿ ತಮ್ಮ ಮೋಸದ ಜಾಲ ಯಶಸ್ವಿಗೊಳಿಸಿದ್ದರು.ಬ್ರೋಕರ್‌ ಗೆ ಕೊಟ್ಟಿದ್ದರು 1.5ಲಕ್ಷ ರು.ಮಧುಮಗಳಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ಒಟ್ಟು 25 ಗ್ರಾಂ ಚಿನ್ನಾಭರಣ ನೀಡಿದ್ದ ಪಾಲಾಕ್ಷ ಇಡೀ ನಕಲಿ ಮದುವೆಯ ಸೂತ್ರಧಾರಿ ಬ್ರೋಕರ್‌ ಲಕ್ಷ್ಮಿಗೆ 1.5ಲಕ್ಷ ಹಣ ಸಹ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನ ಕರೆ ತಂದಿದ್ದ ಬ್ರೋಕರ್‌ ಲಕ್ಷ್ಮೀ, ಮದುವೆ ಮುಗಿದು ಎರಡು ದಿನದ ನಂತರ ಸಂಪ್ರದಾಯದ ಹೆಸರಿನಲ್ಲಿ ಚಿನ್ನಾಭರಣ ಸಹಿತ ಯುವತಿಯೊಬ್ಬಳನ್ನೇ ವಾಪಸ್‌ ಕರೆದುಕೊಂಡು ಹೊರಟಿದ್ದಾಳೆ. ಒಂದು ವಾರ ಕಳೆದರೂ ವಾಪಸ್‌ ಬಾರದ ಮಧುಮಗಳ ಬಗ್ಗೆ ಆತಂಕಗೊಂಡ ಪಾಲಾಕ್ಷ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಸತ್ಯ ಬಯಲಾಗಿದೆ. ವಾಪಸ್‌ ಗುಬ್ಬಿಗೆ ಬಂದ ಪಾಲಕ್ಷ ಮದುವೆ ಮಾಡಿಸಿದ ತಂಡದ ವಿರುದ್ಧ ದೂರು ನೀಡಿದ್ದರು.ನಕಲಿ ಆಧಾರ್‌ ಕಾರ್ಡ್‌ ಸೃಷ್ಠಿಪ್ರಕರಣ ದಾಖಲಿಸಿಕೊಂಡಿದ್ದ ಗುಬ್ಬಿ ಪೊಲೀಸರು ನಿರಂತರ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮದುವೆ ಮಾಡಿ ವಂಚನೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ತಂಡ, ನಕಲಿ ವಿಳಾಸದಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿಕೊಳ್ಳುತ್ತಿದ್ದರು. ಆಧಾರ್ ಕಾರ್ಡ್ ತೋರಿಸಿ ಗಂಡಿನ‌ ಮನೆಯವರನ್ನು ನಂಬಿಸುತ್ತಿದ್ದರು. ನಾಲ್ವರಿಗೂ ಹೆಚ್ಚು ಜನರಿಗೆ ಮದುವೆ ಹೆಸರಿನಲ್ಲಿ ದೋಖಾ ಮಾಡಿದ್ದ ಗ್ಯಾಂಗ್‌ ಈಗ, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ