ಶಿಗ್ಗಾಂವಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಿಸಬೇಕಿದ್ದ ತಾಲೂಕು ಆಡಳಿತವು ನಿಗದಿತ ಸಮಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಕನ್ನಡಪರ ಹೋರಾಟಗಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಸಾಳೊಂಕೆ ಅವರನ್ನು ಪ್ರಶ್ನಿಸಿದ ಹೋರಾಟಗಾರರು, ಕನ್ನಡ ರಾಜ್ಯೋತ್ಸವದಂತಹ ನಾಡಿನ ಹೆಮ್ಮೆಯ ಹಬ್ಬದ ಆಚರಣೆಯಲ್ಲಿಯೇ ಅಧಿಕಾರಿಗಳು ಸಮಯಪ್ರಜ್ಞೆ ಹಾಗೂ ಜವಾಬ್ದಾರಿ ಪ್ರದರ್ಶಿಸದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಸಮಯಪಾಲನೆ ಮತ್ತು ಶಿಸ್ತು ಕಾಪಾಡುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಕನ್ನಡಪರ ಹೋರಾಟಗಾರರು ಒತ್ತಾಯಿಸಿದರು.