ಕೆಪಿಎಸ್ಸಿ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್ ಬಸವರಾಜ ಕನ್ನಾಳೆಯ ಅಕ್ರಮ ಸಾಮ್ರಾಜ್ಯದ ವ್ಯಾಪ್ತಿ ಕೇವಲ ರಾಜಧಾನಿ ಬೆಂಗಳೂರಿನ ಉನ್ನತ ಅಧಿಕಾರಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಸ್ಥಳೀಯವಾಗಿಯೂ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಗಡಿ ಜಿಲ್ಲೆ ಬೀದರ್‌ನ ಹಲವು ಅಧಿಕಾರಿಗಳು ಕನ್ನಾಳೆಯ ಅಕ್ರಮ ಹಣದ ಆಮೀಷಕ್ಕೆ ಸಿಲುಕಿ, ಆತನ ಕಪ್ಪು ಹಣದ ವ್ಯವಹಾರಗಳಿಗೆ ಸಾಥ್ ನೀಡಿದ್ದರೆಂಬ ಸ್ಫೋಟಕ ಸತ್ಯಗಳು ಈಗ ಹೊರಬರುತ್ತಿ
ಕನ್ನಡಪ್ರಭ ವಾರ್ತೆ ಬೀದರ್
ಕೆಪಿಎಸ್ಸಿ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್ ಬಸವರಾಜ ಕನ್ನಾಳೆಯ ಅಕ್ರಮ ಸಾಮ್ರಾಜ್ಯದ ವ್ಯಾಪ್ತಿ ಕೇವಲ ರಾಜಧಾನಿ ಬೆಂಗಳೂರಿನ ಉನ್ನತ ಅಧಿಕಾರಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಸ್ಥಳೀಯವಾಗಿಯೂ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಗಡಿ ಜಿಲ್ಲೆ ಬೀದರ್‌ನ ಹಲವು ಅಧಿಕಾರಿಗಳು ಕನ್ನಾಳೆಯ ಅಕ್ರಮ ಹಣದ ಆಮೀಷಕ್ಕೆ ಸಿಲುಕಿ, ಆತನ ಕಪ್ಪು ಹಣದ ವ್ಯವಹಾರಗಳಿಗೆ ಸಾಥ್ ನೀಡಿದ್ದರೆಂಬ ಸ್ಫೋಟಕ ಸತ್ಯಗಳು ಈಗ ಹೊರಬರುತ್ತಿವೆ.ಬೆಂಗಳೂರಿನ ಸೌಧ - ಸಚಿವಾಲಯಗಳ ಮಟ್ಟದಲ್ಲಿ ಪ್ರಭಾವ ಬೀರಿದ್ದ ಬಸವರಾಜ ಕನ್ನಾಳೆ, ತನ್ನ ಸ್ವಜಿಲ್ಲೆ ಬೀದರ್‌ನಲ್ಲೂ ಸ್ಥಳೀಯ ಕಂದಾಯ ಮತ್ತು ಪೊಲೀಸ್ ಇಲಾಖೆಯ ಕೆಲವರನ್ನು ಹಣದ ಬಲದಿಂದ ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದ ಬಗ್ಗೆ ಆರೋಪಗಳು ಬಲವಾಗುತ್ತಿವೆ. ಇದಕ್ಕೆ ಜೀವಂತ ನಿದರ್ಶನ ಎಂಬಂತೆ ಬೀದರ್ ತಾಲೂಕಿನ ಯರನಳ್ಳಿ (ಡಿ) ಗ್ರಾಮದ ಕೋಟಿಗಟ್ಟಲೆ ಮೌಲ್ಯದ ಅಕ್ರಮ ಜಮೀನು ಖರೀದಿ ಹಾಗೂ ಖಾತಾ ಬದಲಾವಣೆ ಪ್ರಕರಣ ಮುನ್ನೆಲೆಗೆ ಬಂದಿದೆ. ಭೂ ನ್ಯಾಯ ಮಂಡಳಿಯಲ್ಲಿದ್ದ 20 ಎಕರೆ ಜಮೀನು ಅಕ್ರಮ ಖರೀದಿ: ಬೀದರ್ ತಾಲೂಕಿನ ಜನವಾಡ ಹೋಬಳಿಯ ಯರನಳ್ಳಿ (ಡಿ) ಗ್ರಾಮದ ಸರ್ವೆ ನಂ. 53ರಲ್ಲಿರುವ 20 ಎಕರೆ ಜಮೀನು ಈಗಾಗಲೇ ಹೈಕೋರ್ಟ್ ಆದೇಶದಂತೆ ಭೂ ನ್ಯಾಯ ಮಂಡಳಿಯಲ್ಲಿ (ದಾವೆ ಸಂಖ್ಯೆ: LRM/CR-58/1976-77) ಮರು ವಿಚಾರಣೆಯಲ್ಲಿದೆ. ನಿಯಮಗಳ ಪ್ರಕಾರ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ ಜಮೀನನ್ನು ಕ್ರಯ ಮಾಡುವುದು ಹಾಗೂ ಖಾತಾ ಬದಲಾವಣೆ ಮಾಡುವುದು ಸಂಪೂರ್ಣ ಕಾನೂನುಬಾಹಿರ. ಆದರೆ ಬಸವರಾಜ ಕನ್ನಾಳೆ ಹಾಗೂ ಆತನ ಆಪ್ತ ಶಿವಬಸಪ್ಪ (ರಾಜಪ್ಪ) ಮಾಳಗೆ ಸೇರಿಕೊಂಡು ಕಳೆದ ವರ್ಷದ ಏಪ್ರಿಲ್ 16ರಂದು ಈ 20 ಎಕರೆ ಜಮೀನನ್ನು 1ಕೋಟಿ ರುಪಾಯಿಗೆ ಅಕ್ರಮವಾಗಿ ಖರೀದಿ ಮಾಡಿದ್ದರು. ಕಂದಾಯ ಅಧಿಕಾರಿಗಳ ಶಾಮೀಲಾತಿ ಆರೋಪ:
ಕಾನೂನುಬಾಹೀರವಾಗಿ ನಡೆದ ಈ ಜಮೀನು ಖರೀದಿಯ ಕುರಿತು ಜಮೀನಿನ ವಾರಸುದಾರರು ಬೀದರ್ ತಹಸೀಲ್ದಾರ್ ಅವರಿಗೆ ಅಧಿಕೃತ ಆಕ್ಷೇಪಣೆ ಸಲ್ಲಿಸಿ, ಸೂಕ್ತ ದಾಖಲೆಗಳನ್ನು ನೀಡಿದ್ದರು. ಅಷ್ಟೇ ಅಲ್ಲದೆ, ಸಹಾಯಕ ಆಯುಕ್ತರು (AC) ಸಹ ಈ ಸರ್ವೆ ನಂಬರ್‌ಗೆ ಸಂಬಂಧಿಸಿದಂತೆ ವ್ಯಾಜ್ಯವಿರುವುದನ್ನು ಕಾನೂನು ನಿಯಮಗಳಂತೆ ಪರಿಶೀಲಿಸಬೇಕೆಂದು ಸೂಚಿಸಿದ್ದರು. ಆದರೆ, ತಹಸೀಲ್ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪಿ ಬಸವರಾಜ ಕನ್ನಾಳೆ ಗೈರುಹಾಜರಾ ಗಿದ್ದರೂ ಸಹ, ಸ್ಥಳೀಯ ಕಂದಾಯ ಅಧಿಕಾರಿಗಳು ಆತನ ಹಣದ ಪ್ರಭಾವಕ್ಕೆ ಮಣಿದು ಖಾತಾ ಬದಲಾವಣೆ (ಮ್ಯುಟೇಷನ್) ಮಾಡಿಕೊಟ್ಟಿದ್ದಾರೆಂಬ ಆರೋಪ ಕಂದಾಯ ಇಲಾಖೆಯ ಅಧಿಕಾರಿಗಳ ಕರಾಳ ಮುಖವನ್ನು ಬಯಲು ಮಾಡಿದೆ. ---
--ಬಾಕ್ಸ್---
10 ತಿಂಗಳಲ್ಲೇ ಕೋಟಿ ಕೋಟಿ ಲಾಭ
ಪೊಲೀಸ್ ಸಿಬ್ಬಂದಿ ಭಾಗಿಯಾಗುವಿಕೆ?:
ಅಕ್ರಮವಾಗಿ ವಶಪಡಿಸಿಕೊಂಡ ಈ ಜಮೀನನ್ನು ಕನ್ನಾಳೆ ಹಾಗೂ ಆತನ ಸಹಚರರು ಕೇವಲ 10 ತಿಂಗಳ ಅವಧಿಯಲ್ಲಿ, ಎಕರೆಗೆ ₹5 ಲಕ್ಷ ಖರೀದಿಸಿದ್ದ ಭೂಮಿಯನ್ನು ₹25 ಲಕ್ಷದಂತೆ ಕೋಟಿಗಟ್ಟಲೆ ಲಾಭಕ್ಕೆ ಮತ್ತೆ ಮಾರಾಟ ಮಾಡಿದ್ದಾರೆ. ಮಾರಾಟ ಪ್ರಕ್ರಿಯೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಪೊಲೀಸ್ (ಮರಖಲ್) ಎಂಬುವವರು ಇಲಾಖೆಯ ಯಾವುದೇ ಅನುಮತಿ ಪಡೆಯದೇ, ವ್ಯಾಜ್ಯದಲ್ಲಿದ್ದ ಸುಮಾರು 14 ಎಕರೆ ಜಮೀನನ್ನು ಕನ್ನಾಳೆಯಿಂದ ಭಾರಿ ಪ್ರಮಾಣದ ಹಣ ನೀಡಿ ಖರೀದಿ ಮಾಡಿರುವ ಕುರಿತು ಸಿಐಡಿಗೆ ಸಲ್ಲಿಸಲಾಗಿರುವ ದೂರೊಂದರಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.
---
--ಬಾಕ್ಸ್--
ಸಿಐಡಿಗೆ ಅನಾಮಿಕ ದೂರು
ರಾಜಧಾನಿಯ ಅಧಿಕಾರಿಗಳನ್ನು ನಿಯಂತ್ರಿಸುತ್ತಿದ್ದ ಕನ್ನಾಳೆ, ಬೀದರ್ ಜಿಲ್ಲೆಯ ಸ್ಥಳೀಯ ಅಧಿಕಾರಿಗಳಿಗೂ ಅಕ್ರಮ ಹಣದ ರುಚಿ ತೋರಿಸಿ ಇಡೀ ತಾಲೂಕು ಆಡಳಿತ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಂಡಿದ್ದಾನೆಂಬ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲಾ ಅಕ್ರಮ ಜಮೀನು ವ್ಯವಹಾರ ಹಾಗೂ ಅಧಿಕಾರಿಗಳ ಶಾಮೀಲಾತಿಯ ಕುರಿತು ಅನಾಮಿಕ ವ್ಯಕ್ತಿಯೊಬ್ಬರು ಬೆಂಗಳೂರಿನ ಸಿಐಡಿ ಮುಖ್ಯ ಕಚೇರಿಗೆ ಸಮಗ್ರ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದು, ಸಮಾಜಘಾತುಕ ಕೃತ್ಯ ಎಸಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿ ತಮ್ಮ ಹೆಸರು ಬಹಿರಂಗಪಡಿಸದಂತೆ ಕೋರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.