ಅಧಿಕಾರಿಗಳ ಮಾಹಿತಿ ತಾಳೆಯಾಗುತ್ತಿಲ್ಲ

KannadaprabhaNewsNetwork |  
Published : Jun 23, 2025, 11:47 PM IST
ಕೃಷ್ಣಭೈರೇಗೌಡ | Kannada Prabha

ಸಾರಾಂಶ

ಕಂದಾಯ ಪ್ರಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲವೆಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಕಂದಾಯ ಪ್ರಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲವೆಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ನಗರ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ಜಿಲ್ಲೆಯ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಎಲ್ಲಾ ತಾಲೂಕು ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ವರದಿಯನುಸಾರ ಜಿಲ್ಲೆಯಲ್ಲಿ ದಾಖಲೆಗಳಿಲ್ಲದ 522 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸಿರುವುದು ಅಭಿನಂದನಾರ್ಹ. ಆದರೆ ಕೈಬಿಟ್ಟು ಹೋಗಿರುವ ಹಟ್ಟಿ, ತಾಂಡಾಗಳಲ್ಲದೆ ಸಾಮಾನ್ಯ ರೈತರು ವಾಸಿಸುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಗುರುತಿಸುವುದರಿಂದ ಅಲ್ಲಿನ ನಿವಾಸಿಗಳು ತಮ್ಮ ಸ್ವತ್ತಿನ ದಾಖಲೆಗಳನ್ನು ಹೊಂದುವುದರೊಂದಿಗೆ ಅವರ ಅತಂತ್ರ ಬದುಕಿನಿಂದ ಮುಕ್ತರಾಗಿ ನೆಮ್ಮದಿ ಜೀವನ ನಡೆಸಲು ಅನುವಾಗುತ್ತದೆ ಎಂದು ಹೇಳಿದರು. ಕಂದಾಯ ಇಲಾಖೆಯಲ್ಲಿ ಎಷ್ಟು ಕೆಲಸ ಮಾಡಿದರೂ ಕಡಿಮೆಯೇ. ಜನಸಾಮಾನ್ಯರಿಗೆ ಕಂದಾಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರಿಗಳು ಸಕಾಲದಲ್ಲಿ ಜನಸಾಮಾನ್ಯರ ಕೆಲಸ ಮಾಡಿಕೊಟ್ಟಲ್ಲಿ ಇಲಾಖೆಯ ಬಗ್ಗೆ ಅವರಿಗೆ ಸದಾಭಿಪ್ರಾಯ ಬರುತ್ತದೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ ದುರುಪಯೋಗವಾಗಿರುವ ಬಗ್ಗೆ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಇಂತಹ ವಂಚನೆ ಪ್ರಕರಣಗಳನ್ನು ಎಸಗುವ ಅಧಿಕಾರಿ/ಸಿಬ್ಬಂದಿಯನ್ನು ಬೇರು ಬಿಡದಂತೆ ಮೂಲದಲ್ಲಿಯೇ ಕಿತ್ತು ಹಾಕಬೇಕು. ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಯಾರೇ ಆಗಲಿ ತನಿಖೆ ನಡೆಸಿ ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಕಂದಾಯ ಗ್ರಾಮಗಳೆಂದು ಗುರುತಿಸಿರುವ 522 ಗ್ರಾಮಗಳ ನಿವಾಸಿಗಳಿಗೆ 7653 ಹಕ್ಕುಪತ್ರಗಳನ್ನು ವಿತರಿಸಲು ಅಂತಿಮ ಅಧಿಸೂಚನೆ ಮಾಡಲಾಗಿದೆ. ಈಗಾಗಲೇ ಗುರುತಿಸಿರುವ ಉಪ ಗ್ರಾಮ/ಕಂದಾಯ ಗ್ರಾಮಗಳನ್ನು ಹೊರತುಪಡಿಸಿ ಹೊಸದಾಗಿ 683 ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಗುರುತಿಸಲಾಗಿದೆ ಎಂದರು.ಸಚಿವರು ಮುಂದುವರೆದು ಮಾತನಾಡಿ, ಜಿಲ್ಲೆಯಲ್ಲಿ ಈವರೆಗೂ ಆರ್‌ಟಿಸಿಗಳಿಗೆ 15,52,703 ಆಧಾರ್ ಲಿಂಕ್ ಮಾಡಲಾಗಿದ್ದು, ಶೇ.86.7ರಷ್ಟು ಪ್ರಗತಿ ಸಾಧಿಸಿರುವುದು ಸ್ವಲ್ಪ ಸಮಾಧಾನ ತಂದಿದೆ. ತುರುವೇಕೆರೆಯಲ್ಲಿ ಇನ್ನು ಶೇ.16.2ರಷ್ಟು ಆಧಾರ್ ಸೀಡಿಂಗ್ ಬಾಕಿಯಿದ್ದು, ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಜನವರಿಯಿಂದ ದರಖಾಸ್ತು ಪ್ರಗತಿಯಿಲ್ಲದೆ ನಿರೀಕ್ಷಿತ ಸಾಧನೆಯಾಗಿಲ್ಲ. ಜನರಿಗೆ, ಮುಖ್ಯಮಂತ್ರಿಗಳಿಗೆ, ವಿಧಾನಸಭೆಗೆ ಏನೆಂದು ಉತ್ತರ ನೀಡಬೇಕು? ಎಂದು ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸಿದ ಸಚಿವರು, ರಾಜ್ಯದಲ್ಲಿ ಬಗರ್ ಹುಕುಂ ಅರ್ಜಿಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿ 1 ತಿಂಗಳು ಕಳೆದಿದೆ. ಉಳಿದಿರುವ ಇನ್ನೆರಡು ತಿಂಗಳೊಳಗಾಗಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.ಲ್ಯಾಂಡ್ ಬೀಟ್, ಭೂ ದಾಖಲೆಗಳ ನ್ಯಾಯಾಲಯ ಪ್ರಕರಣ, ಭೂ ಪರಿವರ್ತನೆ, ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ, ಇ-ಆಫೀಸ್ ಅನುಷ್ಠಾನ ಸೇರಿದಂತೆ ಮತ್ತಿತರ ಕಂದಾಯ ವಿಷಯಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು. ಸಭೆಯಲ್ಲಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಹಾಗೂ ಬಿ.ಸುರೇಶ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಕಂದಾಯ ಆಯುಕ್ತ ಮಂಜುನಾಥ್ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ