ಬಸವರಾಜ ಹಿರೇಮಠ
ಧಾರವಾಡ: ಇತ್ತೀಚೆಗೆ ಸುರಿದ ಭಾರೀ ಮಳೆಯು ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಅದರಲ್ಲೂ ಗ್ರಾಮೀಣ ರಸ್ತೆಗಳಿಗೆ ತೀವ್ರ ರೀತಿಯ ಹೊಡೆತ ಬಿದ್ದಿದ್ದು, ಕೆಲವು ಭಾಗಗಳಲ್ಲಿ ಸಂಪರ್ಕ ಸಹ ಕಡಿತಗೊಂಡಿದ್ದು ರೈತರು ಪರದಾಡುವ ಸ್ಥಿತಿ ಉಂಟಾಗಿದೆ.ತಾಲೂಕಿನ ಕವಲಗೇರಿಯ ಬಳಿಯ ಸವದತ್ತಿ ಮುಖ್ಯ ರಸ್ತೆಗೆ ಸೇರುವ ರಸ್ತೆಯು ಮಳೆ ನೀರಿನಿಂದ ಬಹುತೇಕ ಕೊಚ್ಚಿ ಹೋಗಿದೆ. ನಿತ್ಯ ಚಕ್ಕಡಿ, ಟ್ರಾಕ್ಟರ್, ಬೈಕ್ ಸೇರಿದಂತೆ ಇತರೆ ವಾಹನಗಳು ಸಂಚರಿಸುವ ಈ ರಸ್ತೆ ಹತ್ತಾರು ಜಮೀನುಗಳಿಗೆ ಸಂಪರ್ಕ ಸಹ ಕಲ್ಪಿಸಲಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಈ ರಸ್ತೆಯು ಕೊಚ್ಚಿ ಹೋಗಿದೆ. ಇದುವರೆಗೂ ಈ ರಸ್ತೆ ಸುತ್ತಲೂ ಮಳೆ ನೀರು ನಿಂತಿದ್ದರಿಂದ ಯಾರೂ ಈ ರಸ್ತೆ ಬಳಸಿ ಸಂಚಾರ ಮಾಡಿಲ್ಲ. ಯಾವಾಗ ಮಳೆ ಕಡಿಮೆಯಾಗಿ, ನೀರು ಸರಿಯಿತೋ ರಸ್ತೆ ಇಲ್ಲದಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ.
ಈ ರಸ್ತೆಯ ಅರ್ಧ ಭಾಗ ಕೊಚ್ಚಿಕೊಂಡು ಹೋಗಿರುವುದರಿಂದ ಇಲ್ಲಿ ವಾಹನ, ಚಕ್ಕಡಿಗಳು ಹೋಗಲು ಸಾಧ್ಯವಾಗದಂತಾಗಿದೆ. ನಿತ್ಯವೂ ಅನೇಕ ಟ್ರಾಕ್ಟರ್, ಚಕ್ಕಡಿಗಳು ಇದೇ ರಸ್ತೆ ಮೂಲಕ ಸಾಗುತ್ತಿದ್ದವು. ಮುಂದಿನ ಭಾಗದಲ್ಲಿರುವ ರೈತರು ತಮ್ಮ ಜಮೀನುಗಳಿಗೆ ಇದೇ ರಸ್ತೆ ಮೂಲಕ ಸಾಗಬೇಕು. ಆದರೆ, ಇದೀಗ ಈ ರಸ್ತೆ ಬಳಕೆದಾರರಿಗೆ ಅತೀವ ತೊಂದರೆಯಾಗಿದೆ.ಕಾರಣ, ಪರಿಹಾರವೇನು?: ಈ ರಸ್ತೆಯ ಮಧ್ಯದಿಂದ ಒಂದು ಸಣ್ಣ ಹಳ್ಳ ಹಾದು ಹೋಗುತ್ತದೆ. ಸಾಮಾನ್ಯ ಮಳೆಗೆ ಯಾವ ತೊದರೆ ಇಲ್ಲ. ತುಸು ಹೆಚ್ಚಿನ ಮಳೆಯಾದರೆ ರಸ್ತೆ ಮೇಲೆಯೇ ನೀರು ಹರಿದು ಹೋಗುತ್ತದೆ. ಇತ್ತೀಚೆಗೆ ಸುರಿದ ದೊಡ್ಡ ಮಳೆಗೆ ಹಳ್ಳವು ರಸ್ತೆಯನ್ನೇ ಹೊತ್ತೊಯ್ದಿದೆ. ಪಕ್ಕದ ಹಳ್ಳದ ಕಾಲುವೆ ತುಂಬೆಲ್ಲಾ ಗಿಡ- ಗಂಟಿಗಳು ಬೆಳೆದಿದ್ದು ನಿರ್ವಹಣೆ ಇಲ್ಲದ ಕಾರಣ ಹಳ್ಳದಲ್ಲಿ ಹೂಳು ತುಂಬಿ ರಸ್ತೆ ಕೊಚ್ಚಿ ಹೋಗಿದೆ. ಈ ಹಳ್ಳ ಹೋಗುವ ಪ್ರದೇಶದಲ್ಲಿ ಸಣ್ಣದೊಂದು ಸೇತುವೆ ನಿರ್ಮಿಸಿ, ಅದರ ಕೆಳಗಡೆ ಪೈಪುಗಳನ್ನು ಅಳವಡಿಸಿದರೆ ನೀರು ಸರಾಗವಾಗಿ ಹರಿದು ಹೋಗುತ್ತದೆ. ಆದರೆ, ಅಧಿಕಾರಿಗಳು ರಸ್ತೆ ನಿರ್ಮಿಸುವಾಗ ಇಂಥದ್ದೊಂದು ಕಾಳಜಿ ತೆಗೆದುಕೊಂಡಿದ್ದರೆ ರಸ್ತೆ ಹಾಳಾಗುವುದನ್ನು ತಪ್ಪಿಸಬಹುದಿತ್ತು.
ಸದ್ಯದ ಸ್ಥಿತಿ ಗಮನಿಸಿದರೆ ನಮ್ಮೂರಿನ ಈ ರಸ್ತೆಯನ್ನು ಮರು ನಿರ್ಮಾಣ ಮಾಡುತ್ತಾರೋ ಅಥವಾ ಇಲ್ಲವೋ ನಂಬಿಕೆ ಉಳಿದಿಲ್ಲ. ಆದರೂ, ರೈತರಿಗೆ ಇದು ಸಂಪರ್ಕ ರಸ್ತೆಯಾಗಿದ್ದು, ತಾತ್ಕಾಲಿಕವಾಗಿಯಾದರೂ ರಸ್ತೆಯನ್ನು ದುರಸ್ತಿಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಪಂ ಸದಸ್ಯ ಮೃತ್ಯುಂಜಯ ಇಂಚಲ್ ಆಗ್ರಹಿಸಿದರು.ಪ್ರಸ್ತುತ ಮಳೆ ಕಡಿಮೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ತಮ್ಮ ತಮ್ಮ ಹೊಲಗಳಿಗೆ ಹೋಗಬೇಕಿದೆ. ಆದರೆ, ಇದೀಗ ರಸ್ತೆ ಕೊಚ್ಚಿ ಹೋಗಿದ್ದರಿಂದ ಸಾಧ್ಯವಾಗುತ್ತಿಲ್ಲ. ಕೂಡಲೇ ತಾತ್ಕಾಲಿಕವಾಗಿಯಾದರೂ ರಸ್ತೆಯನ್ನು ದುರಸ್ತಿ ಮಾಡಿ ಕೊಡಿ ಎಂದು ರೈತ ಫಕ್ಕೀರಪ್ಪ ಆಗ್ರಹಿಸಿದರು.
ಜಿಲ್ಲಾದ್ಯಂತ ಭೌತಿಕ ಹಾನಿ: ಇತ್ತೀಚೆಗೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳಿಗೆ, ಸೇತುವೆಗಳಿಗೆ ಹಾನಿಯಾಗಿದೆ. ಈ ಪೈಕಿ ಕವಲಗೇರಿ ಸಮೀಪದ ರಸ್ತೆ ಉದಾಹರಣೆಯಷ್ಟೇ. ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ 70 ಶಾಲೆಗಳ 290 ಕೊಠಡಿಗಳಿಗೆ ಹಾನಿಯಾಗಿದೆ. 47 ಅಂಗನವಾಡಿ ಕೇಂದ್ರಗಳು, 262.84 ಕಿ.ಮೀ. ಗ್ರಾಮೀಣ ರಸ್ತೆಗಳಿಗೆ ಹಾನಿಯಾಗಿದೆ. ಮಹಾನಗರ, ಸ್ಥಳೀಯ ಸಂಸ್ಥೆಗಳಲ್ಲಿ 106.58 ಕಿ.ಮೀ, 12.60 ಕಿ.ಮೀ. ಜಿಲ್ಲಾ ಪ್ರಮುಖ ರಸ್ತೆಗಳು, 4 ಕಿ.ಮೀ. ಹೆದ್ದಾರಿ ರಸ್ತೆಗಳು, 54 ಸಿ.ಡಿ. ಹಾಗೂ ಸೇತುವೆಗಳು ಹಾನಿಯಾಗಿವೆ.