ಅರಮನೆ ಬ್ಯಾಣ ಭೂಮಿ ಮಂಜೂರಾತಿಯಲ್ಲಿ ಅಧಿಕಾರಿಗಳು ಶಾಮೀಲು: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Oct 15, 2025, 02:07 AM IST
ತೀರ್ಥಹಳ್ಳಿ ತಾಲೂಕು ಸಾಲೂರು ಅರಮನೆಬ್ಯಾಣ ಉಳಿಸಿ ಹೋರಾಟ ಸಮಿತಿಯಿಂದ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರಿ ಭೂಮಿಯನ್ನು ಕಬಳಿಸುವ ವ್ಯಕ್ತಿಗಳ ಎಂಜಲು ಕಾಸಿಗೆ ಬಲಿಯಾಗಿ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಭೂಮಿಯ ಮೂಲ ದಾಖಲೆಯನ್ನೇ ತಿದ್ದುವ ಮೂಲಕ ಸಾಲೂರು ಗ್ರಾಪಂ ವ್ಯಾಪ್ತಿಯ ಅರಮನೆ ಬ್ಯಾಣ ಭೂಮಿ ಮಂಜೂರಾತಿಯಲ್ಲಿ ಶಾಮೀಲಾಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಸರ್ಕಾರಿ ಭೂಮಿಯನ್ನು ಕಬಳಿಸುವ ವ್ಯಕ್ತಿಗಳ ಎಂಜಲು ಕಾಸಿಗೆ ಬಲಿಯಾಗಿ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಭೂಮಿಯ ಮೂಲ ದಾಖಲೆಯನ್ನೇ ತಿದ್ದುವ ಮೂಲಕ ಸಾಲೂರು ಗ್ರಾಪಂ ವ್ಯಾಪ್ತಿಯ ಅರಮನೆ ಬ್ಯಾಣ ಭೂಮಿ ಮಂಜೂರಾತಿಯಲ್ಲಿ ಶಾಮೀಲಾಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಸಾಲೂರು ಗ್ರಾಪಂ ವ್ಯಾಪ್ತಿಯ ಸನಂ 116 ಮತ್ತು 118 ರಲ್ಲಿ ಭೂ ರಹಿತರಿಗೆ ಹಂಚಿಕೆಯಾಗಿದ್ದ 27 ಎಕರೆ ಭೂಮಿಯನ್ನು ಸಿರಿಬೈಲು ಧರ್ಮೇಶ್ ಮತ್ತು ವಾಗ್ದೇವಿ ಪುಟ್ಟಸ್ವಾಮಿ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ಖರೀದಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಅರಮನೆಬ್ಯಾಣ ಉಳಿಸಿ ಹೋರಾಟ ಸಮಿತಿ ಸಾಲೂರು ವತಿಯಿಂದ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಅರಮನೆಬ್ಯಾಣದಲ್ಲಿ ನಕ್ಷೆ ಕಂಡ ದಾರಿಯನ್ನೂ ಮುಚ್ಚಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ನೆರವಿನಿಂದ ಮೂಲ ದಾಖಲೆಯನ್ನೇ ತಿದ್ದಲಾಗಿದೆ. ಹೊಸದಾಗಿ ನಕಾಶೆಯನ್ನು ತಯಾರಿಸಲಾಗಿದೆ. ಇಲ್ಲಿನ ತಾಲೂಕು ಕಚೇರಿ ಲಂಚಕೋರ ಅಧಿಕಾರಿಗಳು ಮಧ್ಯವರ್ತಿಗಳ ಅಡ್ಡೆಯಾಗಿದ್ದು ಸಾರ್ವಜನಿಕರಿಗೆ ಸ್ಪಂದಿಸದ ಈ ಕಚೇರಿಗೆ ಬೀಗ ಹಾಕೋದೇ ಸೂಕ್ತ. ಸರ್ಕಾರದ ಅನ್ನ ತಿನ್ನುವ ಇಲ್ಲಿನ ಅಧಿಕಾರಿಗಳು ಈ ಪ್ರಕರಣದಲ್ಲಿ ನಡೆದುಕೊಂಡಿರುವ ರೀತಿ ಹೇಸಿಗೆ ಎನ್ನಿಸುತ್ತಿದೆ ಎಂದು ಖಂಡಿಸಿದರು.

ಅರಮನೆಬ್ಯಾಣದಲ್ಲಿದ್ದ ಬೆಲೆಬಾಳುವ ಮರಗಳನ್ನು ಕಡಿದು ಸಾಮಾಜಿಕ ಅರಣ್ಯವನ್ನು ನಾಶ ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿರುವ ಮೂಲ ದಾಖಲೆಗಳನ್ನೂ ನಾಶ ಪಡಿಸಲಾಗಿದೆ. ಒಂದು ಮರ ಕಡಿದರೂ ಜನರ ಮೇಲೆರಗುವ ಅರಣ್ಯ ಇಲಾಖೆ ಅರಮನೆಬ್ಯಾಣದಲ್ಲಿ ಸಾಮಾಜಿಕ ಅರಣ್ಯವನ್ನು ನಾಶಪಡಿಸಿದ್ದರೂ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಕಾಳಜಿಯಿಂದ ನ್ಯಾಯ ಕೇಳಿರುವ ಸಾಲೂರಿನ ಗ್ರಾಮಸ್ಥರಿಗೆ ಬೆದರಿಕೆ ಹಾಕಲಾಗಿದ್ದು, ಈ ಪ್ರಕರಣ ನನಗೂ ಸವಾಲಾಗಿದೆ. ಈ ಬಗ್ಗೆ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸಾಲೂರು ಗ್ರಾಮಸ್ಥರು ಸಿದ್ಧಪಡಿಸಿರುವ ಅರಮನೆಬ್ಯಾಣದ ವಿಡಿಯೋವನ್ನು ಅರಣ್ಯ ಸಚಿವರಿಗೂ ತೋರಿಸುತ್ತೇನೆ. ಈ ಕೂಡಲೇ ಮುಚ್ಚಿರುವ ನಕಾಶೆ ಕಂಡ ದಾರಿಯನ್ನು ತೆರವುಗೊಳಿಸಬೇಕು ಎಂದು ತಹಸೀಲ್ದಾರರಿಗೆ ತಾಕೀತು ಮಾಡಿದರು.

ಹೋರಾಟ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶ್ರೀಧರ ಆಚಾರ್ ಮಾತನಾಡಿ, ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಕೆಗೆ ಮುಂದಾಗಿರುವವರ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು. ಅಪಾರ ಅರಣ್ಯ ಸಂಪತ್ತನ್ನು ನಾಶ ಮಾಡಿ ಸುಟ್ಟು ಹಾಕಲಾಗಿದೆ. ಗ್ರಾಪಂಯಿಂದ ನಿರ್ಮಿಸಲಾಗಿರುವ ಸಾಮಾಜಿಕ ನೆಡುತೋಪನ್ನು ಅತಿಕ್ರಮಿಸಿ ಬೇಲಿ ನಿರ್ಮಿಸುತ್ತಿರುವುದನ್ನು ಖುಲ್ಲಾ ಪಡಿಸಬೇಕು ಎಂದು ಆಗ್ರಹಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಕೆ.ಅರ್.ಸುಬ್ಬಯ್ಯ, ಸಾಲೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಡಾಕಪ್ಪಗೌಡ, ಲಿಂಗಪ್ಪ, ಶ್ರೀನಿವಾಸ, ರಮೇಶ್ ಹೊಸೂರು, ಸುರೇಶ ಕೋಗೋಡು, ಸುರೇಶ ಹೊಸೂರು ಮತ್ತು ಸಾಲೂರಿನ ಗ್ರಾಮಸ್ಥರಿದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ