ಪಾಲಿಕೆ ಸ್ಥಾಯಿ ಸಮಿತಿಗೆ ಸದಸ್ಯರ ಅವಿರೋಧ ಆಯ್ಕೆ

KannadaprabhaNewsNetwork |  
Published : Oct 15, 2025, 02:07 AM IST
ಹು-ಧಾ ಮಹಾನಗರ ಪಾಲಿಕೆಯ 24ನೇ ಅವಧಿಗೆ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಮಂಗಳವಾರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ನೇತೃತ್ವದಲ್ಲಿ ಪಾಲಿಕೆಯ ಸಭಾಭವನದಲ್ಲಿ ನಡೆಯಿತು. | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಒಟ್ಟು ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ಬಿಜೆಪಿಯ 15, ಕಾಂಗ್ರೆಸ್‌ನ 12 ಹಾಗೂ ಜೆಡಿಎಸ್‌ನಿಂದ ಓರ್ವರು ಸೇರಿ ಒಟ್ಟು 28 ಜನರನ್ನು ವಿವಿಧ ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಗೆ ಸ್ಥಾಯಿ ಸಮಿತಿಗಳ ಸದಸ್ಯರ ಅವಿರೋಧ ಆಯ್ಕೆ ಮಂಗಳವಾರ ಪಾಲಿಕೆ ಸಭಾ ಭವನದಲ್ಲಿ ನಡೆಯಿತು.

ಪಾಲಿಕೆಯ ಲೆಕ್ಕಗಳ ಸ್ಥಾಯಿ ಸಮಿತಿಗೆ ಬಿಜೆಪಿಯ ಸುರೇಶ ಬೇದರೆ, ಪ್ರೀತಿ ಖೋಡೆ, ರತ್ನಾಬಾಯಿ ನಾಝರೆ, ರೂಪಾ ಶೆಟ್ಟಿ, ಕಾಂಗ್ರೆಸ್‌ನ ಮಂಜುಳಾ ಜಾಧವ, ಶಿವಕುಮಾರ ರಾಯನಗೌಡರ, ಬಲ್ಕೀಸ್‌ ಬಾನು ಮುಲ್ಲಾ ಆಯ್ಕೆಯಾದರು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಬಿಜೆಪಿಯ ಮೀನಾಕ್ಷಿ ವಂಟಮುರಿ, ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ, ವಿಷ್ಣುತೀರ್ಥ ಕೊರ್ಲಹಳ್ಳಿ, ಕಾಂಗ್ರೆಸ್‌ನ ಮನಸೂರಾ ಮುದಗಲ್ಲ, ಕವಿತಾ ಕಬ್ಬೇರ, ಪ್ರಕಾಶ ಕುರಹಟ್ಟಿ ಆಯ್ಕೆಗೊಂಡರು.

ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಬಿಜೆಪಿಯ ಶೀಲಾ ಕಾಟಕರ, ನಿತಿನ್‌ ಇಂಡಿ, ಉಮಾ ಮುಕುಂದ, ಶಿವಪ್ಪ ಯಾವಗಲ್ಲ, ಕಾಂಗ್ರೆಸ್‌ನ ಫಮೀದಾ ಕಾರಡಗಿ, ಶಂಕರಪ್ಪ ಹರಿಜನ, ದಿಲಶಾದಬೇಗಂ ನದಾಫ ಆಯ್ಕೆಯಾದರು.

8 ಜನ ನಾಮಪತ್ರ:

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಬಿಜೆಪಿಯ ಮಹಾದೇವಪ್ಪ ನರಗುಂದ, ಸುನಿತಾ ಮಾಳದಕರ, ಅನಿತಾ ಚಳಗೇರಿ, ದುರ್ಗಮ್ಮ ಬಿಜವಾಡ, ಕಾಂಗ್ರೆಸ್‌ನ ರಾಜಾರಾವ ಮನ್ನಕುಂಟ್ಲ, ಪರವೀನ ದೇಸಾಯಿ, ಮಹ್ಮದ ಇಕ್ಬಾಲ್‌ ನವಲೂರ ಹಾಗೂ ಜೆಡಿಎಸ್‌ನ ಲಕ್ಷ್ಮೀ ಹಿಂಡಸಗೇರಿ ಸೇರಿ ಒಟ್ಟು 8 ಜನರು ನಾಮಪತ್ರ ಸಲ್ಲಿಸಿದ್ದರು. ಸ್ಥಾಯಿ ಸಮಿತಿಗೆ 7 ಸದಸ್ಯರಿರುತ್ತಾರೆ. ಆದರೆ, 8 ಜನ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನದ ವೇಳೆ ಬಿಜೆಪಿಯ ಸುನಿತಾ ಮಾಳದಕರ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಈ ಸಮಿತಿಗೂ ಸದಸ್ಯರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು.

28 ಸದಸ್ಯರ ಆಯ್ಕೆ:

ಒಟ್ಟು ವಿವಿಧ ನಾಲ್ಕು ಸ್ಥಾಯಿ ಸಮಿತಿಗಳಿಗೆ ಬಿಜೆಪಿಯ 15, ಕಾಂಗ್ರೆಸ್‌ನ 12 ಹಾಗೂ ಜೆಡಿಎಸ್‌ನಿಂದ ಓರ್ವರು ಸೇರಿ ಒಟ್ಟು 28 ಜನರನ್ನು ವಿವಿಧ ಸ್ಥಾಯಿ ಸಮಿತಿ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.

ಪಾಲಿಕೆ ಸಭಾಭವನದಲ್ಲಿ ಮಂಗಳವಾರ ಬೆಳಗ್ಗೆ 10 ರಿಂದ 12ರ ವರೆಗೆ ನಾಮಪತ್ರ ಸ್ವೀಕೃತಿ ಹಾಗೂ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಮಧ್ಯಾಹ್ನ 1 ಗಂಟೆ ವರೆಗೆ ನಾಮಪತ್ರ ಸ್ವೀಕರಿಸಲಾಯಿತು. ನಾಮಪತ್ರ ಪರಿಶೀಲನೆ ನಂತರ ಕ್ರಮಬದ್ಧ ನಾಮಪತ್ರಗಳ ಘೋಷಣೆ ಮಾಡಿ ಉಮೇದುವಾರರ ಪಟ್ಟಿ ಘೋಷಿಸಲಾಯಿತು. ಈ ವೇಳೆ ಸುನಿತಾ ಮಾಳದಕರ ಅವರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಮತದಾನದ ಅವಶ್ಯಕತೆ ಇರದಿದ್ದರಿಂದ ನಾಲ್ಕೂ ಸಮಿತಿಗಳಿಗೆ ಪಾಲಿಕೆ(ಚುನಾವಣೆ)ಯ ಅಧ್ಯಕ್ಷಾಧಿಕಾರಿಯಾಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವಿರೋಧವಾಗಿ ಸದಸ್ಯರ ಆಯ್ಕೆಗೊಳಿಸಿರುವುದಾಗಿ ತಿಳಿಸಿದರು.

PREV

Recommended Stories

ನಿರೀಕ್ಷೆಯಂತೆ ನಡೆಯದ ಸಮೀಕ್ಷೆ: ಬೆಂಗಳೂರು ಮುಖ್ಯ ಆಯುಕ್ತರಿಗೆ ಸಿಎಸ್‌ ಪತ್ರ
ಬೆಂಗಳೂರಲ್ಲಿನ್ನು ವೈದ್ಯಕೀಯ ಪರಿಕರಗಳ ಡ್ರೋನ್‌ ಡೆಲಿವರಿ