ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಾಗಳ ಬಳಿಯ ಯಾಂತ್ರೀಕೃತ ನಾಡದೋಣಿಯು ಗದಗ, ಹಾವೇರಿ ಮತ್ತು ವಿಜಯನಗರ ಸೇರಿದಂತೆ ಮೂರು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿತ್ತು.
ಹೂವಿನಹಡಗಲಿ: ತಾಲೂಕಿನ ಮಾಗಳ- ವಿಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ಯಾಂತ್ರೀಕೃತ ನಾಡದೋಣಿಗೆ ರಂಧ್ರ ಬಿದ್ದು ತಿಂಗಳು ಕಳೆದರೂ ದುರಸ್ತಿ ಮಾಡಲು ಅಧಿಕಾರಿಗಳು, ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಮೈಲಾರ ಜಾತ್ರೆಗೆ ಬರುವ ಭಕ್ತರು ಕೊಂಕಣ ಸುತ್ತಿ ಮೈಲಾರಕ್ಕೆ ಬರುವಂತಾಗಿದೆ.
ಹೌದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಾಗಳ ಬಳಿಯ ಯಾಂತ್ರೀಕೃತ ನಾಡದೋಣಿಯು ಗದಗ, ಹಾವೇರಿ ಮತ್ತು ವಿಜಯನಗರ ಸೇರಿದಂತೆ ಮೂರು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿತ್ತು. ನಿತ್ಯ ನೂರಾರು ಪ್ರಯಾಣಿಕರನ್ನು ಆಚೆ ಈಚೆ ದಡ ಸೇರಿಸುತ್ತಿದ್ದ ಯಾಂತ್ರೀಕೃತ ನಾಡದೋಣಿ ದುರಸ್ತಿಗೆ ಬಂದು ಬರೋಬ್ಬರಿ ತಿಂಗಳು ಕಳೆದಿವೆ. ಈ ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ವಿಶೇಷ ವರದಿ ಮಾಡಿ ಗಮನ ಸೆಳೆದರೂ, ಅಧಿಕಾರಿಗಳು ಮಾತ್ರ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅವರು ಅನುಮತಿ ನೀಡಿದ ಬಳಿಕ ಟೆಂಡರ್ ಕರೆದು, ದುರಸ್ತಿ ಕಾರ್ಯ ಮಾಡಬೇಕಾಗುತ್ತದೆ. ಆದರೆ ಈವರೆಗೂ ಅನುಮತಿ ಸಿಕ್ಕಿಲ್ಲ ಎಂಬ ಸಬೂಬು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಲೀಸು ಆಗಿದೆ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಾಡಿನ 2ನೇ ಅತಿ ದೊಡ್ಡ ಮೈಲಾರಲಿಂಗೇಶ್ವರ ಜಾತ್ರೆಗೆ ಉತ್ತರ ಕರ್ನಾಟಕ ಭಾಗದ ಭಕ್ತರು, ಮೈಲಾರಕ್ಕೆ ಬರಲು ಈ ಯಾಂತ್ರೀಕೃತ ನಾಡದೋಣಿ ಮೂಲಕ ಮಾಗಳ, ಹಿರೇಹಡಗಲಿ ಹೊಳಲು ಮೂಲಕ ಮೈಲಾರಕ್ಕೆ ಬರುತ್ತಿದ್ದರು. ಆದರೆ ಈಗ ಈ ನಾಡದೋಣಿ ದುರಸ್ತಿಗೆ ಬಂದ ಪರಿಣಾಮ ಸಾವಿರಾರು ಭಕ್ತರು, ಕೊಂಕಣ ಸುತ್ತಿ ಮೈಲಾರ ಎಂಬ ಗಾದೆ ಮಾತಿನಂತೆ, 40 ರಿಂದ 45 ಕಿಮೀ ದೂರ, ನದಿ ಸುತ್ತುವರೆದು ಮೈಲಾರಕ್ಕೆ ಹೋಗುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಸಾರ್ವಜನಿಕರು.
ನಾಡದೋಣಿ ದುರಸ್ತ ಮಾಡಲು ಕ್ರಮಕ್ಕೆ ಮುಂದಾಗಬೇಕೆಂದು ಇಲ್ಲಿನ ತಹಸೀಲ್ದಾರ್, ವಿಜಯನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಜತೆಗೆ ಈ ಕುರಿತು ವಿಜಯನಗರ ಜಿಲ್ಲಾಧಿಕಾರಿ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಂದು ತಿಳಿದು ಬಂದಿದೆ.
ಹೂವಿನಹಡಗಲಿ ತಾಲೂಕಿನ ಮಾಗಳ-ವಿಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ಯಾಂತ್ರೀಕೃತ ನಾಡದೋಣಿ ದುರಸ್ತಿ ಮಾಡುವಂತೆ ಈಗಾಗಲೇ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ.
ತುಂಗಭದ್ರಾ ನದಿ ತೀರದ ಮಾಗಳ ವಿಠಲಾಪುರ ಮಧ್ಯೆ ಸಂಚರಿಸುತ್ತಿದ್ದ ಯಾತ್ರೀಕೃತ ನಾಡದೋಣಿ ದುರಸ್ತಿ ಕುರಿತು ಪತ್ರ ಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎನ್ನುತ್ತಾರೆ ಬಂದರು ಒಳನಾಡು ಜಲಸಾರಿಗೆ ಇಲಾಖೆಯ ಮೇರಿನ್ ಎಂಜಿನಿಯರಿಂಗ್ ಆಫೀಸರ್ ದೀಪಕ್.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.