ಅಪ್ರಾಪ್ತ ಬಾಲಕಿಯ ವಿವಾಹ ತಡೆದ ಅಧಿಕಾರಿಗಳು

KannadaprabhaNewsNetwork |  
Published : Nov 08, 2024, 12:43 AM IST
ಪೋಟೋ೭ಸಿಎಲ್‌ಕೆ೧ ಚಳ್ಳಕೆರೆ ನಗರದ ಖಾಸಗಿ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ನಡೆದ ಸಿಡಿಪಿಒ ಮತ್ತು ಪೊಲೀಸರು. | Kannada Prabha

ಸಾರಾಂಶ

ಚಳ್ಳಕೆರೆ: ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಾಲ್ಯವಿವಾಹವೊಂದು ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಿವಾಹ ತಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ: ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಾಲ್ಯವಿವಾಹವೊಂದು ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ವಿವಾಹ ತಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಿಡಿಪಿಒ ಹರಿಪ್ರಸಾದ್, ಗುರುವಾರ ಬೆಳಗ್ಗೆ ೯ ರ ಸಮಯದಲ್ಲಿ ಬಾಲ್ಯವಿವಾಹ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಕೂಡಲೇ ಜಾಗೃತಗೊಂಡ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತು. ಅಲ್ಲಿ ವಿಚಾರಿಸಿದಾಗ ಚಿತ್ರದುರ್ಗ ತಾಲುಕು ಕಲ್ಲಹಳ್ಳಿ ಗೊಲ್ಲರಹಟ್ಟಿಯ ಸಿದ್ದಮ್ಮ, ಜಡಿಯಪ್ಪನವರ ದ್ವಿತೀಯ ಪುತ್ರಿಯ ವಿವಾಹವು ತಾಲ್ಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಮುಂದಲಹಟ್ಟಿಯ ಸಿದ್ದವೀರಮ್ಮ, ಸಿದ್ದಪ್ಪನವರ ಪುತ್ರ ಎಸ್.ಶಿವುನೊಂದಿಗೆ ನಡೆಯುತ್ತಿತ್ತು. ಮಾಂಗಲ್ಯಧಾರಣೆಯಾಗುವ ಸಿದ್ಧತೆಗಳು ಕಂಡುಬಂದವು. ಈ ವೇಳೆ ವಿಚಾರಿಸಿದಾಗ ಅಪ್ರಾಪ್ತ ಬಾಲಕಿಯ ವಯಸ್ಸು ಕೇವಲ ೧೭ ವರ್ಷ ೧೦ ತಿಂಗಳಾಗಿತ್ತು ಎಂದು ತಿಳಿಯಿತು. ಈ ಬಗ್ಗೆ ಬಾಲಕಿಯ (ವಧು) ಪೋಷಕರಿಗೆ ಮತ್ತು ವರನ ಕಡೆಯವರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡಿ ಮದುವೆಯನ್ನು ತಡೆಯಲಾಗಿದೆ ಎಂದು ತಿಳಿಸಿದರು.

ಬಾಲಕಿಯನ್ನು ಪೋಷಕರೊಂದಿಗೆ ಇಲಾಖೆಯ ಸಿಬ್ಬಂದಿಯೊಂದಿಗೆ ಚಿತ್ರದುರ್ಗದ ಮಕ್ಕಳ ಕಲ್ಯಾಣ ಸಮಿತಿಗೆ ಕಳಿಸಿಕೊಟಲಾಗಿದೆ. ಅಲ್ಲಿ ವಿಚಾರಣೆ ಮುಂದುವರೆದಿದೆ ಎಂದು ಹೇಳಿದರು.

ಕಲ್ಯಾಣಮಂಟಪದಲ್ಲಿ ಮದುವೆ ದಿನಾಂಕ ನೊಂದಾವಣೆ ಮಾಡಿದ ಕೂಡಲೇ ವಧುವಿನ ವಯಸ್ಸಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಇಲ್ಲವಾದರೆ ಇಲಾಖೆಯಿಂದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರದ ಎಲ್ಲಾ ಕಲ್ಯಾಣ ಮಂಟಪಗಳ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಇಲ್ಲಿನ ಸಿಡಿಪಿಒ ಮತ್ತು ಸಿಬ್ಬಂದಿ ವರ್ಗದ ಸಕಾಲಿಕ ಕ್ರಮದಿಂದ ಬಾಲ್ಯವಿವಾಹವನ್ನು ರದ್ದುಪಡಿಸಿ ಅಪ್ರಾಪ್ತ ಬಾಲಕಿಗೆ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎನ್ನಲಾಗಿದೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ