ಮಂಗಳೂರು : ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ಕದ್ರಿ ದೇವಸ್ಥಾನದ ಬಳಿಯ ಆಹಾರ (ತಿಂಡಿ) ತಯಾರಿಕಾ ಘಟಕಕ್ಕೆ ಶನಿವಾರ ದಿಡೀರ್ ದಾಳಿ ನಡೆಸಿದ ಘಟನೆ ನಡೆದಿದೆ.ಆಹಾರ ಉತ್ಪಾದನಾ ಸ್ಥಳದಲ್ಲಿ ನೈರ್ಮಲ್ಯತೆಯ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಅನೈರ್ಮಲ್ಯದಿಂದ ತಯಾರಿಸಲಾದ ಹಲ್ವಾ ಹಾಗೂ ಖರ್ಜೂರ ಉತ್ಪನ್ನಗಳನ್ನು ಸೀಸ್ ಮಾಡಿ ಸೀಲ್ ಮಾಡಿ ಇರಿಸಿ, ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಯಿತು.ಹಬ್ಬಗಳ ಸಂದರ್ಭದಲ್ಲಿ ತಯಾರಿಸುವ ಆಹಾರ ಉತ್ಪನ್ನಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆಹಾರ ಉತ್ಪನ್ನಗಳನ್ನು ತಯಾರಿಸುವಂತೆ ಸೂಚಿಸಲಾಯಿತು. ಯಾವುದೇ ರೀತಿಯ ಫುಡ್ ಪಾಯಿಸನಿಂಗ್‌ಗೆ ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಲು, ಡ್ರೈನೇಜ್ ವ್ಯವಸ್ಥೆ ಸರಿಪಡಿಸಲು, ಯಾವುದೇ ಕೀಟ, ಜಿರಳೆ ಇಲಿ, ಹೆಗ್ಗಣಗಳು ತಯಾರಿಕಾ ಘಟಕದೊಳಗೆ ನುಸುಳಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆಯಂತೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ ದಾಳಿಯಲ್ಲಿ ಭಾಗವಹಿಸಿದ್ದರು.