ಕನ್ನಡಪ್ರಭ ವಾರ್ತೆ ಸಿಂದಗಿ ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ನೃತ್ಯಕಲೆಗಳು ನಾಡಿನ ಅಮೂಲ್ಯ ಸಾಂಸ್ಕೃತಿಕ ಆಸ್ತಿಗಳಾಗಿವೆ. ನೈಜ ಕಲೆಯನ್ನು ಅನಾವರಣಗೊಳಿಸುವ ದಾಂಡಿಯಾ ನೃತ್ಯರೂಪಕಗಳು ಸಂಸ್ಕೃತಿ, ಸಂಸ್ಕಾರ ಮತ್ತು ಗತವೈಭವವನ್ನು ಜೀವಂತವಾಗಿ ಬಿಂಬಿಸುತ್ತವೆ ಎಂದು ಚಲನಚಿತ್ರ ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಿಂದಗಿ

ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ನೃತ್ಯಕಲೆಗಳು ನಾಡಿನ ಅಮೂಲ್ಯ ಸಾಂಸ್ಕೃತಿಕ ಆಸ್ತಿಗಳಾಗಿವೆ. ನೈಜ ಕಲೆಯನ್ನು ಅನಾವರಣಗೊಳಿಸುವ ದಾಂಡಿಯಾ ನೃತ್ಯರೂಪಕಗಳು ಸಂಸ್ಕೃತಿ, ಸಂಸ್ಕಾರ ಮತ್ತು ಗತವೈಭವವನ್ನು ಜೀವಂತವಾಗಿ ಬಿಂಬಿಸುತ್ತವೆ ಎಂದು ಚಲನಚಿತ್ರ ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಮಾಂಗಲ್ಯ ಭವನದಲ್ಲಿ ಡ್ಯಾನಿ ಅಕಾಡೆಮಿ ಹಾಗೂ ಎಬಿಸಿಡಿ ಡ್ಯಾನ್ಸ್ ಕ್ಲಾಸ್‌ನಿಂದ ಅ.23ರಂದು ಆಯೋಜಿಸಿದ್ದ ನವರಾತ್ರಿ ವೈಭವ–ದಾಂಡಿಯಾ ನೃತ್ಯೋತ್ಸವ 2026 ಉದ್ಘಾಟಿಸಿ ಅವರು ಮಾತನಾಡಿದರು. ಹಬ್ಬಗಳ ತವರೂರಾದ ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ ಮನುಷ್ಯ ಸಂಬಂಧಗಳನ್ನು ಬೆಸೆಯುವ, ಸಾಮರಸ್ಯ ಸಾರುವ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾಂಸ್ಕೃತಿಕ ಸೇತುವೆಗಳಾಗಬೇಕು. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿಯ ಬೇರುಗಳು ಸಡಿಲಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಮಹಿಳೆಯರು ದಾಂಡಿಯಾದಂತಹ ಸಾಂಪ್ರದಾಯಿಕ ನೃತ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕಲೆ ಕೇವಲ ಮನರಂಜನೆಯ ಸಾಧನವಲ್ಲ; ಅದು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವ, ಸಮಾಜವನ್ನು ಒಗ್ಗೂಡಿಸುವ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಶಕ್ತಿಯುತ ಮಾಧ್ಯಮವಾಗಿದೆ. ಪೂರ್ವಜರು ಬಳುವಳಿಯಾಗಿ ನೀಡಿರುವ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಜೀವಂತವಾಗಿ ಹಸ್ತಾಂತರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರ ಅಕ್ಕ, ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಹಾಗೂ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾತನಾಡಿದರು. ಮುತ್ತು ಮುಂಡೇವಾಡಗಿ, ಭಾರತಿ ಹೊಸಮನಿ, ಡಾ.ಅಕ್ಷತಾ ಗೋಟಗುಣಕಿ, ತಾರಾನಾಥ ರಾಠೋಡ, ಅಶೋಕ ಕೊಳಾರಿ, ಡಾ.ಅನಿಲ ನಾಯಕ, ಮಲ್ಲನಗೌಡ ಪಾಟೀಲ, ಮುತ್ತು ಸೊನ್ನದ ಹಾಗೂ ಡ್ಯಾನಿ ಅಕಾಡೆಮಿ ಸಂಚಾಲಕ ಜ್ಞಾನೇಶ ಗುರವ ವೇದಿಕೆಯಲ್ಲಿದ್ದರು.

ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿದ್ಧಲಿಂಗ ಚೌಧರಿ ಸ್ವಾಗತಿಸಿ, ನಿರೂಪಿಸಿದರು. ಮಹಿಳೆಯರ ಕಲಾತ್ಮಕ ಪ್ರತಿಭೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.