ಕನ್ನಡಪ್ರಭ ವಾರ್ತೆ ಸಿರಿಗೆರೆ
ಅರ್ಧ ಶತಮಾನಕ್ಕೂ ಹಿಂದೆ ನಿರ್ಮಾಣಗೊಂಡಿರುವ ಶಾಲೆಯಲ್ಲಿನ ತರಗತಿಯ ತಾರಸಿಯ ಸಿಮೆಂಟ್ ಕಳಚುತ್ತಿದೆ, ಆರ್‌ಸಿಸಿ ಸೋರುತ್ತದೆ, ಗೋಡೆಗಳು ಬಿರುಕು ಬಿಟ್ಟಿವೆ. ಇವು ಯಾವಾಗ ಮಕ್ಕಳ ತಲೆ ಮೇಲೆ ಬಿದ್ದು ಅಪಾಯ ಸಂಭವಿಸುವುದೋ ಎಂಬ ಆತಂಕದಲ್ಲಿ ಮಕ್ಕಳು ಮತ್ತು ಅವರನ್ನು ಶಾಲೆಗೆ ಕಳಿಸುತ್ತಿರು ಪೋಷಕರು ದಿನ ತಳ್ಳುವಂತಾಗಿದೆ.
ಶಾಲೆಯಲ್ಲಿ 9 ಕೊಠಡಿಗಳು ಇದ್ದವು. ಅಪಾಯದ ಅಂಚಿಗೆ ಹೋಗಿದ್ದ 2 ಕೊಠಡಿಗಳನ್ನು ನೆಲಸಮ ಮಾಡಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಕೊಠಡಿಗಳ ಸಂಖ್ಯೆ ಎದ್ದು ಕಾಣುತ್ತಿದೆ. ಜೊತೆಗೆ ಈಗಿರುವ ಕೊಠಡಿಗಳಲ್ಲಿ ಆರ್‌ಸಿಸಿಗೆ ಹಾಕಲಾಗಿರುವ ಸಿಮೆಂಟ್ ಯಾವಾಗ ಮಕ್ಕಳ ತಲೆ ಮೇಲೆ ಬೀಳುವುದೋ ಎಂಬ ಆತಂಕವೂ ಇದೆ. ಮಕ್ಕಳನ್ನು ತರಗತಿಗಳಲ್ಲಿ ಕುಳ್ಳಿರಿಸಿಕೊಂಡು ಪಾಠ ಮಾಡಲು ಶಿಕ್ಷಕರೇ ಭಯ ಪಡುತ್ತಿದ್ದಾರೆ.ಶಿಕ್ಷಕರು ಪರಿಶ್ರಮ ಹಾಕಿದ್ದರಿಂದ ಈ ಬಾರಿ ಶಾಲೆಯಲ್ಲಿ 200 ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಜೊತೆಗೆ ಎಲ್‌ಕೆಜಿ ಮತ್ತು ಯುಕೆಜಿ ವಿಭಾಗವೂ ಮಂಜೂರಾಗಿದ್ದರಿಂದ ಆ ಮಕ್ಕಳೂ ಶಾಲೆಗೆ ಬರುತ್ತಿದ್ದಾರೆ. ತರಗತಿವಾರು ಮಕ್ಕಳನ್ನು ಕೂರಿಸಿ ಪಾಠ ಹೇಳಲು ಕೊಠಡಿಗಳು ಸಾಲುತ್ತಿಲ್ಲ. ಹೀಗಾಗಿ ಹಲವು ತರಗತಿಗಳ ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಮಾಡುವ ಪರಿಸ್ಥಿತಿ ಇಲ್ಲಿದೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತಿದೆ ಎಂಬುದು ಗ್ರಾಮಸ್ಥರ ಅಳಲು.
ಈ ಕುರಿತು ಸ್ಥಳೀಯ ಶಾಸಕ ಡಾ.ಎಂ.ಚಂದ್ರಪ್ಪ ಅವರು ಶಾಲೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮತ್ತು ಪೋಷಕರು ಮನವಿ ಮಾಡಿದ್ದಾರೆ.