ಕನ್ನಡಪ್ರಭ ವಾರ್ತೆ ಮೂಲ್ಕಿ ಮೂಲ್ಕಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ನಗರ, ಪಟ್ಟಣ ಪಂಚಾಯಿತಿಗಳು ಅಭಿವೃದ್ಧಿಯ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಬೇಕೆಂದು ಜಿಲ್ಲಾಧಿಕಾರಿ ಎಂ.ಪಿ. ಮುಲ್ಲೈ ಮುಗಿಲನ್ ಹೇಳಿದರು. ಮೂಲ್ಕಿಯ ಕಾರ್ನಾಡಿನ ಬಂಟರ ಸಂಘ ಸಭಾಭವನದಲ್ಲಿ ಮೂಲ್ಕಿ ತಾಲೂಕಿನ ಸಾರ್ವಜನಿಕರ ಅಹವಾಲುಗಳನ್ನು ಅಲಿಸುವ ಸಂಬಂಧ ಜರುಗಿದ ಜಿಲ್ಲಾಧಿಕಾರಿಯವರ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. * ಅವಧಿಯೊಳಗೆ ಸಮಸ್ಯೆಗೆ ಪರಿಹಾರ ಜಿಲ್ಲೆಯಲ್ಲಿ ಸರ್ವೇಯರ್‌ಗಳ ಕೊರತೆಯಿದ್ದು, ಸಾರ್ವಜನಿಕರು ಜನತಾ ದರ್ಶನದಲ್ಲಿ ನೀಡಿದ ನಿಗದಿತ ಅವಧಿಯೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ನೇರವಾಗಿ ಸಂಪರ್ಕಿಸಬಹುದು. ಮೂಲ್ಕಿ ತಾಲೂಕು ವ್ಯಾಪ್ತಿಯ ಜನತಾದರ್ಶನದ ಕಾರ್ಯಕ್ರಮದ ಸಾರ್ವಜನಿಕ ಅಹವಾಲಿನಲ್ಲಿ ಸುಮಾರು 50ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರ್ಜಿಗಳಲ್ಲಿ ಹೆಚ್ಚು ಕುಡಿಯುವ ನೀರು, ಕಂದಾಯ ಇಲಾಖೆಯ ಸಮಸ್ಯೆಗಳು ಇದ್ದು, ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಪ್ರತಿಯೊಂದು ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು ಹಾಗೂ ಪ್ರತಿಯೊಬ್ಬ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಯತ್ನಿಸಬೇಕೆಂದು ಹೇಳಿದರು. ದೂರುಗಳಲ್ಲಿ ಮುಖ್ಯವಾಗಿ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ತೆರೆದ ಚರಂಡಿಯಲ್ಲಿ ಹರಿಯುತ್ತಿರುವುದರಿಂದ ರೋಗದ ಭೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ, ಮೂಲ್ಕಿ ನ.ಪಂ. ವ್ಯಾಪ್ತಿಯ ಕಡವಿನ ಬಾಗಿಲು ಬಳಿ ಗುಡ್ಡೆಯಲ್ಲಿ ಅಪಾಯಕಾರಿ ಮೊಬೈಲ್ ಟವರ್ ಬೀಳುವ ಸ್ಥಿತಿಯಲ್ಲಿದೆ ತೆರವುಗೊಳಿಸಿ, ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಬಗ್ಗೆ ಮೂಡಾ ಅಧಿಕಾರಿಗಳು ಸ್ಪಷ್ಟನೆ ನೀಡಲಿ, ಕಿನ್ನಿಗೊಳಿ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿ, ಕಾರ್ನಾಡಿನಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಪರವಾನಗಿ, ಐಕಳ ಗ್ರಾಮದ ಅಕ್ರಮ ಹಂದಿ ಸಾಕಾಣಿಕಾ ಕೇಂದ್ರ ತೆರವುಗೊಳಿಸಿ, ಉಡುಪಿ ಜಿಲ್ಲೆಯ ಹೆಜಮಾಡಿ ಸಮುದ್ರ ತೀರದಲ್ಲಿ ನಿರ್ಮಾಣವಾಗುತ್ತಿರುವ ಬ್ರೇಕ್ ವಾಟರ್ ಕಾಮಗಾರಿಯಿಂದ ದ.ಕ. ಜಿಲ್ಲೆಯ ಚಿತ್ರಾಪು ಪರಿಸರದ ನಿವಾಸಿಗಳಿಗೆ ತೊಂದರೆಯ ಭೀತಿ, ಮೂಲ್ಕಿ ಹಳೆಯಂಗಡಿ, ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆ ಹಾಗೂ ತಂಗುತಾಣ ಬೇಕು, ಚಿತ್ರಾಪು ಗಜನಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿದ್ದು ತೆರವುಗೊಳಿಸಬೇಕು, ಕಾರ್ನಾಡ್ ಕೈಗಾರಿಕಾ ಪ್ರದೇಶದಲ್ಲಿ ರಾಮ್ ಕಿ ಇಂಡಸ್ಟ್ರಿಯಿಂದ ಬಿಡುವ ವಿಷಾನಿಲದಿಂದ ಪರಿಸರಕ್ಕೆ ಹಾನಿ, ಏಳಿಂಜೆ ಕೃಷಿ ಭೂಮಿಯಲ್ಲಿ ಹೈಟೆನ್ಶನ್ ಹಾದು ಹೋಗುವ ಬಗ್ಗೆ ವಿರೋಧ, ಬಳಕುಂಜೆ, ಕೊಲ್ಲೂರು, ಉಳೆಪಾಡಿ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಕೃಷಿ ಭೂಮಿ ಸ್ವಾಧೀನ ನಿಲ್ಲಿಸಬೇಕು ಮುಂತಾದ ಅರ್ಜಿಗಳು ಬಂದಿದ್ದವು. ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಯೋಜನಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಅಭಿಷೇಕ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ, ಸಹಾಯಕ ಆಯುಕ್ತ ಹರ್ಷವರ್ಧನ, ಮೂಲ್ಕಿ ತಾಲೂಕು ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶಾಂತಪ್ಪ, ಮಂಗಳೂರು ತಹಸೀಲ್ದಾರ್ ಶಾಂತಪ್ಪ, ಮೂಲ್ಕಿ ನ.ಪಂ. ಮಖ್ಯಾಧಿಕಾರಿ ಇಂದು ಎಂ. ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಮೂಲ್ಕಿ ತಾಲೂಕು ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ಸ್ವಾಗತಿಸಿದರು.