ಆರ್‌ಟಿಐ ಕಾಯ್ದೆಯ ಬಗ್ಗೆ ಅಧಿಕಾರಿಗಳಿಗೆ ಬೇಡ ಭಯ: ಡಿಸಿ ದಿವ್ಯ ಪ್ರಭು

KannadaprabhaNewsNetwork |  
Published : Feb 21, 2025, 11:49 PM IST
21ಡಿಡಬ್ಲೂಡಿ1ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮಾಹಿತಿ ಹಕ್ಕು ಅಧಿನಿಯಮ ಕುರಿತು ಆಯೋಜಿಸಿದ್ದ ಕಾರ್ಯಾಗಾರವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಧಾರವಾಡ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಶುಕ್ರವಾರ ಮಾಹಿತಿ ಹಕ್ಕು ಅಧಿನಿಯಮ ಕುರಿತು ಕಾರ್ಯಾಗಾರ ನಡೆಯಿತು.

ಧಾರವಾಡ: ಸಾರ್ವಜನಿಕ ಕೆಲಸಗಳಲ್ಲಿ ಪಾರದರ್ಶಕತೆ ತರಲು ಮತ್ತು ಸಕಾಲಕ್ಕೆ ಸೇವೆಗಳು ತಲುಪುವಂತೆ ಮಾಡುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರಿ ನೌಕರರಿಗೆ ಆರ್.ಟಿ.ಐ. ಕಾಯ್ದೆಯ ಬಗ್ಗೆ ಭಯ ಬೇಡ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಹಾಯಕ ಮಾಹಿತಿ ಅಧಿಕಾರಿಗಳು ಮತ್ತು ಆರ್.ಟಿ.ಐ. ವಿಷಯ ನಿರ್ವಾಹಕರಿಗೆ ಶುಕ್ರವಾರ ಮಾಹಿತಿ ಹಕ್ಕು ಅಧಿನಿಯಮ ಕುರಿತು ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಹೆದರುವ ಅಗತ್ಯವಿಲ್ಲ. ಕಾಯ್ದೆಯನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು. ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಿಸಿದ ಮಾಹಿತಿ ಇರುವ ಅಧಿಕಾರಿಗಳಿಗೆ ವರ್ಗಾಯಿಸಬೇಕು. ಒಟ್ಟಾರೆ ಆರ್.ಟಿ.ಐ. ಅರ್ಜಿಗೆ ಕಾಲಮಿತಿಯಲ್ಲಿ ಉತ್ತರಿಸುವುದು ಬಹುಮುಖ್ಯ ಎಂಬ ಸಲಹೆ ನೀಡಿದರು.

ಪ್ರತಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆರ್.ಟಿ.ಐ. ಕಾಯ್ದೆಯ ಕುರಿತು ಅಗತ್ಯ ಮಾಹಿತಿ ಮತ್ತು ತಿಳಿವಳಿಕೆ ಪಡೆಯುವುದು ಅಗತ್ಯ. ಸರ್ಕಾರ ಪ್ರತಿ ನೌಕರನನ್ನೂ ಮಾಹಿತಿಯುಕ್ತ ಅಧಿಕಾರಿಯಾಗಿ ರೂಪಿಸುವ ಉದ್ದೇಶದಿಂದ ಇಂತಹ ಮಾಹಿತಿ ಹಕ್ಕು ಅಧಿನಿಯಮ ಕುರಿತು ಕಾರ್ಯಾಗಾರ ಏರ್ಪಡಿಸಿ, ತರಬೇತಿ ನೀಡಲು ನಿರ್ದೇಶಿಸಿದೆ ಎಂದರು.

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ವಿಶ್ರಾಂತ ಆಯುಕ್ತ ಡಾ. ಶೇಖರ ಸಜ್ಜನ, ಅಧಿನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅನೇಕರು ತೊಂದರೆಗೆ ಒಳಗಾಗುತ್ತಾರೆ. ಅಧಿನಿಯಮದಲ್ಲಿ ಆರ್.ಟಿ.ಐ. ಅರ್ಜಿಯ ಪ್ರತಿ ಹಂತದ ವಿಲೇವಾರಿ ಬಗ್ಗೆ ಹಾಗೂ ತಿರ್ಮಾನಗಳ ಬಗ್ಗೆ ಸೆಕ್ಷೆನ್‌ಗಳ ಪ್ರಕಾರ ವಿವರವಾಗಿ ತಿಳಿಸಲಾಗಿದೆ. ಅನೇಕರು ಮಾಹಿತಿ ದುರಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಮಾಹಿತಿ ಆಯೋಗವು ಈಗಾಗಲೇ ಸುಮಾರು 22 ಜನ ಮಾಹಿತಿ ಹಕ್ಕು ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶಿಸಿದೆ ಎಂದರು.

ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ವೇದಿಕೆಯಲ್ಲಿದ್ದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ವಂದಿಸಿದರು. ಶಿರಸ್ತೇದಾರ ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ