ಅಧಿಕಾರಿಗಳು ನಾವೇ ಮಾಸ್ಟರ್‌ ಎಂದು ಮೆರೆಯಬೇಡಿ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

KannadaprabhaNewsNetwork |  
Published : Jun 22, 2024, 12:51 AM IST
ಅಂಧ ವಿದ್ಯಾರ್ಥಿನಿಗೆ ಬ್ರೈಲ್‌ ಲ್ಯಾಪ್‌ಟ್ಯಾಪ್‌ಗಳನ್ನು ಸಿಎಂ ವಿತರಿಸಿದರು. | Kannada Prabha

ಸಾರಾಂಶ

ಜಿಲ್ಲೆಗೆ ಜಿಲ್ಲಾಧಿಕಾರಿಯೇ ಮನೆಯ ಯಜಮಾನ. ವಾರಕ್ಕೊಮ್ಮೆ ಅಹವಾಲು ಸ್ವೀಕರಿಸಬೇಕು.

ಹೊಸಪೇಟೆ: ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ಭೇಟಿ ನೀಡಬೇಕು. ಡಿಸಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಆಡಳಿತಕ್ಕೆ ಚುರುಕು ಮುಟ್ಟಿಸಲು ಶಾಲಾ, ಕಾಲೇಜ್‌, ಹಾಸ್ಟೆಲ್‌, ಅಂಗನವಾಡಿ, ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ನಾವೇ ಮಾಸ್ಟರ್‌ ಎಂಬ ಮನೋಭಾವದಿಂದ ಹೊರಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಗೆ ಜಿಲ್ಲಾಧಿಕಾರಿಯೇ ಮನೆಯ ಯಜಮಾನ. ವಾರಕ್ಕೊಮ್ಮೆ ಅಹವಾಲು ಸ್ವೀಕರಿಸಬೇಕು. ಜಿಲ್ಲೆಯ ಉಳಿದ ಅಧಿಕಾರಿಗಳು ವಾರದಲ್ಲಿ ಎರಡು ದಿನ ಅಹವಾಲು ಸ್ವೀಕರಿಸಬೇಕು. ಜಿಲ್ಲೆಯ ಜನರು ಸಣ್ಣಪುಟ್ಟ ಕೆಲಸಕ್ಕೂ ನಮ್ಮಲ್ಲಿ ಬರುತ್ತಿದ್ದಾರೆ. ಜನರ ಕೆಲಸವನ್ನು ಅಧಿಕಾರಿಗಳು ಜಿಲ್ಲಾ, ತಾಲೂಕು ಹಂತದಲ್ಲೇ ಮಾಡಿಕೊಡಬೇಕು ಎಂದರು.

ಜಿಲ್ಲಾಧಿಕಾರಿ ಉತ್ತಮ ಕೆಲಸ ಮಾಡುತ್ತಾರೆ ಎಂದು ಜಿಲ್ಲೆಯ ಶಾಸಕರು ಹೇಳುತ್ತಿದ್ದಾರೆ. ಇರಲಿ, ಆದರೂ ಅಧಿಕಾರಿಗಳ ಕೆಲಸದ ಬಗ್ಗೆ ನನಗೆ ಸಮಾಧಾನ ಇಲ್ಲ. ಜಿಲ್ಲೆಯ ಅಧಿಕಾರಿಗಳ ಕೆಲಸದಿಂದ ನನಗೆ ಸಂತೋಷ ಇಲ್ಲ. ಜಿಲ್ಲೆಯ ಎಲ್ಲ ಇಲಾಖೆಗಳಲ್ಲೂ ಆಡಳಿತ ವೇಗ ಪಡೆದಿಲ್ಲ. ಕೆಂಗಲ್‌ ಹನುಮಂತರಾಯರು ವಿಧಾನಸೌಧದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ. ಸರ್ಕಾರಿ ಅಧಿಕಾರಿಗಳು, ನೌಕರರು ಜನರ ಸೇವೆ ಮಾಡಬೇಕು ಎಂದರು.

ಎಸ್ಟಿ ಆಶ್ರಮ ಶಾಲೆಗಳಲ್ಲಿ ಮಕ್ಕಳಿಲ್ಲ:

ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಬಳಿಕ ಎಸ್ಟಿ ವರ್ಗದ ಇಲಾಖೆಯ ಹೊಣೆಗಾರಿಕೆ ನಾನೇ ವಹಿಸಿಕೊಂಡಿರುವೆ. ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ನಡೆಸುವೆ. ಆಶ್ರಮ ಶಾಲೆಗಳಲ್ಲಿ ರಾತ್ರಿ ಹೊತ್ತಿನಲ್ಲಿ ಮಕ್ಕಳೇ ಇರಲ್ಲ. ಆದರೂ ಹಾಸಿಗೆ, ದಿಂಬು ಖರೀದಿಸಲಾಗಿದೆ. ಈ ಇಲಾಖೆಯ ನಿರ್ದೇಶಕರನ್ನೇ ಅಮಾನತುಗೊಳಿಸಲು ಸೂಚಿಸಿರುವೆ. ಇಲಾಖೆಯ ಉನ್ನತ ಅಧಿಕಾರಿಗಳನ್ನು ಅಮಾನತುಗೊಳಿಸಿದರೆ, ಉಳಿದ ಅಧಿಕಾರಿಗಳು ಪಾಠ ಕಲಿಯುತ್ತಾರೆ. ಜಿಲ್ಲೆಯ ಪ್ರಮುಖ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳ ತಾಲೂಕು ಕಚೇರಿಗಳಿಗೆ ತೆರಳಿ ಪರಿಶೀಲಿಸಬೇಕು. ಒಂದು ವೇಳೆ ಜಡತ್ವದಲ್ಲೇ ಇದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಡಕ್‌ ಎಚ್ಚರಿಕೆ ನೀಡಿದರು.

ಬಿತ್ತನೆ ಬೀಜ, ಗೊಬ್ಬರ ಕೊರತೆ ಆಗದಿರಲಿ:

ರೈತರಿಗೆ ಬೀಜ ಗೊಬ್ಬರ ಕೊರತೆ ಆಗಬಾರದು. ಕೊರತೆ ಉಂಟಾದರೆ, ನೀವೇ ಹೊಣೆ. ಕೃಷಿ ಅಧಿಕಾರಿಗಳು ರೈತರ ಜಮೀನುಗಳಿಗೆ ಹೋಗಿ ಮಣ್ಣಿನ ಗುಣಮಟ್ಟಕ್ಕೆ ತಕ್ಕಂತೆ ರೈತರಿಗೆ ತಿಳಿವಳಿಕೆ ನೀಡಬೇಕು. ಯಾವ ಅಧಿಕಾರಿಗಳು ಯಾವ ಹಳ್ಳಿಗೆ ಹೋಗಿದ್ದೀರಿ? ಎಷ್ಟು ರೈತರಿಗೆ ತಿಳಿವಳಿಕೆ ನೀಡಿದ್ದೀರಿ? ನೀವು ಭೇಟಿ ನೀಡಿ ತಿಳಿವಳಿಕೆ ನೀಡಿದ ಡೈರಿ ಎಲ್ಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌ ಅವರನ್ನು ಪ್ರಶ್ನಿಸಿದರು.

ಬರ ಪರಿಹಾರ ₹130 ಕೋಟಿ ವಿತರಣೆ:

ರಾಜ್ಯ ಸರ್ಕಾರದಿಂದ ನೀಡಿದ ಬರ ಪರಿಹಾರದ ಮೊತ್ತ ₹130 ಕೋಟಿ ಸಂಪೂರ್ಣವಾಗಿ ವಿತರಣೆಯಾಗಿದೆ. ಜಿಲ್ಲೆಯಲ್ಲಿ ಯಾವ ಅರ್ಹ ರೈತರಿಗೂ ಬಾಕಿ ಉಳಿಸಿಕೊಂಡಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿಳಂಬ: ತರಾಟೆ

2023-24ರಲ್ಲಿ 34 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾಲಿನಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ಮಾಹಿತಿಗೆ ಪ್ರತಿಯಾಗಿ, ಇವರಲ್ಲಿ ಪ್ರತಿ ರೈತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ದೊರಕಿದೆಯೇ ಎಂದು ಸಿಎಂ ಪ್ರಶ್ನಿಸಿದರು.

ಐದು ಮಂದಿ ರೈತರ ಕುಟುಂಬಕ್ಕೆ ಮಾತ್ರ ತಾಂತ್ರಿಕ ತೊಂದರೆ ಆಗಿದ್ದು ಏಕೆ? ಎಫ್ಎಸ್ಎಲ್ ವರದಿ 20 ದಿನದೊಳಗೆ ಬರುತ್ತದೆ. ಆದರೂ ಪ್ರಕ್ರಿಯೆ ತಡೆವಾಗಿದ್ದಕ್ಕೆ ಸಿಎಂ ಗರಂ ಆದರು.

ಕೆರೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಒತ್ತುವರಿಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಾಗುತ್ತದೆ. ನರೇಗಾದಲ್ಲಿ ಕೆರೆ ಹೂಳು ತೆಗೆದು ಕೆರೆಗಳಿಗೆ ಮರುಜೀವ ಒದಗಿಸಬೇಕು. 52 ಶುದ್ಧ ನೀರಿನ ಘಟಕಗಳು ಕೆಲಸ ಸ್ಥಗಿತಗೊಳಿಸಿದ್ದರೂ ಸರಿಯಾದ ಸಮಯಕ್ಕೆ ರಿಪೇರಿ ಮಾಡಿಸಲು ಏನು ಸಮಸ್ಯೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕೆಲ ಬೋರ್‌ ವೆಲ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಗರಂ ಆದ ಸಿಎಂ, ರಿಪೇರಿ ಮಾಡಿದ್ದು ಇಲಾಖೆಯವರೇ ತಾನೇ? ಪದೇಪದೇ ಕೆಟ್ಟು ಹೋಗುವ ರೀತಿ ರಿಪೇರಿ ಏಕೆ ಮಾಡ್ತಾರೆ? ಅದರಲ್ಲಿ ಏನಾದರೂ ರಿಪೇರಿಯಾಗದ ಸಮಸ್ಯೆ ಇದೆಯಾ ಪರಿಶೀಲಿಸಿ ಎಂದರು.

ಜಿಲ್ಲೆಯಲ್ಲಿ ಶೌಚಾಲಯಗಳು ಇಲ್ಲದ ಮನೆಗಳು ಇವೆಯೇ ಎಂದು ಸಿಎಂ ಪ್ರಶ್ನಿಸಿದರು. ಇವೆ ಎಂದು ಅಧಿಕಾರಿಗಳು ವರದಿ ನೀಡಿದರು. ಹೀಗಿದ್ದೂ ಜಿಲ್ಲೆಯನ್ನು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿದ್ದು ಏಕೆ ಎಂದು ಸಿಎಂ ಪ್ರಶ್ನಿಸಿದರು. ನೀವು ಕೊಡುವ ತಪ್ಪು ಮಾಹಿತಿಯನ್ನು ನಾವು ಅಧಿವೇಶನದಲ್ಲಿ ಹೇಳುವುದಕ್ಕೆ ಆಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಹಾಸ್ಟೆಲ್‌ಗೆ ಭೇಟಿ ಕೊಡಿ:

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಜಂಟಿ ನಿರ್ದೇಶಕರು ನಿಯಮಿತ ಭೇಟಿ ನೀಡಬೇಕು ಎಂದು ಇಲಾಖೆಯ ಅಧಿಕಾರಿ ಮಂಜುನಾಥಗೆ ಸೂಚಿಸಿದರು.

ನರೇಗಾದಲ್ಲಿ ಸಮಯಕ್ಕೆ ಸರಿಯಾಗಿ ಮಾನವ ದಿನಗಳ ಕೂಲಿ ಹಣ ಪಾವತಿಯಾಗಬೇಕು. ಅನಗತ್ಯ ವಿಳಂಬ ಆಗಬಾರದು. ಕಲುಷಿತ ನೀರು ಕುಡಿದು ಜನರ ಆರೋಗ್ಯ ಹಾಳಾದರೆ, ಜೀವಕ್ಕೆ ತೊಂದರೆ ಆದರೆ ಅದಕ್ಕೆ ಜಿಪಂ ಸಿಇಒ ಹೊಣೆ ಎಂದು ಎಚ್ಚರಿಸಿದರು.

ಬಾಲ್ಯ ವಿವಾಹ, ಬಾಲ್ಯದಲ್ಲೇ ಹೆಣ್ಣುಮಕ್ಕಳು ಗರ್ಭಿಣಿಯರಾಗುತ್ತಿರುವ ಪ್ರಕರಣ ಬಗ್ಗೆ ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಗಂಭೀರವಾಗಿ ಪರಿಗಣಿಸಿ, ತಡೆಗಟ್ಟಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಎಚ್.ಆರ್‌. ಗವಿಯಪ್ಪ, ಕೆ.ನೇಮರಾಜ್ ನಾಯ್ಕ, ಜೆ.ಎನ್‌. ಗಣೇಶ್, ಎಂ.ಪಿ. ಲತಾ, ಡಾ.ಎನ್‌.ಟಿ. ಶ್ರೀನಿವಾಸ್‌, ಕೃಷ್ಣ ನಾಯ್ಕ, ಬಿ.ದೇವೇಂದ್ರಪ್ಪ ಇದ್ದರು.

ಸುದೀರ್ಘ ಸಭೆ:

ಸಿಎಂ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸುದೀರ್ಘ ಸಭೆ ನಡೆಸಿದರು. ನಂತರ ಡಿಸಿ ಕಚೇರಿಯಲ್ಲೇ ಊಟ ಮಾಡಿದ ಅವರು, ಬಳಿಕ ಸಂಜೆ 5:30ರವರೆಗೆ ಸಭೆ ನಡೆಸಿದರು. ರೇಷ್ಮೆ, ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲು ಸಮಯದ ಅಭಾವ ಇದೆ. ಇಲಾಖೆಗಳ ಅಧಿಕಾರಿಗಳು ಹೊಣೆ ಅರಿತು ಕೆಲಸ ಮಾಡಬೇಕು ಎಂದು ಸಿಎಂ ಸೂಚಿಸಿದರು.

ಅಹವಾಲು ಸ್ವೀಕಾರ:

ತೋರಣಗಲ್‌ನ ಜಿಂದಾಲ್‌ನಿಂದ ರಸ್ತೆ ಮಾರ್ಗವಾಗಿ ಬೆಳಗ್ಗೆ ಆಗಮಿಸಿದ ಸಿಎಂ ನಗರದ ಶ್ರೀರಾಮನಗರದಲ್ಲಿರುವ ಅವರ ಸಂಬಂಧಿಕ ಬಸವರಾಜ ದೇವರಮನೆ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು. ಬಳಿಕ ಡಿಸಿ ಕಚೇರಿಗೆ ಆಗಮಿಸಿ ರೈತರು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಹೋರಾಟಗಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಮನವಿ ಸ್ವೀಕರಿಸಿ, ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಒಳಗಡೆ ಸಿಎಂ ತರಾಟೆ, ಹೊರಗೆ ಮಳೆ ಭರಾಟೆ:

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಎಂ ಜಿಲ್ಲೆಯ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರೆ, ಹೊರಗಡೆ ಧೋ ಎಂದು ಮಳೆ ಸುರಿಯುತ್ತಿತ್ತು. ಜಿಲ್ಲೆಗೆ ಸಿದ್ದರಾಮಯ್ಯ ಮಳೆ ತಂದ ಎಂದು ಜನರು ತನಾಡಿಕೊಳ್ಳುತ್ತಿದ್ದರು.400 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಸಿಎಂ ಒಪ್ಪಿಗೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯನಗರ ಜಿಲ್ಲಾಸ್ಪತ್ರೆ 250 ಹಾಸಿಗೆಯಿಂದ 400 ಹಾಸಿಗೆಗೆ ಮೇಲ್ದರ್ಜೆ ಗೇರಿಸಲು ಒಪ್ಪಿಗೆ ನೀಡಿದ್ದಾರೆ.ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಈ ಕುರಿತು ಪ್ರಸ್ತಾಪಿಸಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಅಗತ್ಯ ವಿದ್ದು ಅದಕ್ಕೆ ಪೂರಕವಾಗಿ 250 ಹಾಸಿಗೆ ಆಸ್ಪತ್ರೆ 400 ಹಾಸಿಗೆಗೆ ಮೇಲ್ದರ್ಜೆ ಗೆ ಏರಿಸಬೇಕು. ಇದಕ್ಕಾಗಿ ₹75 ಕೋಟಿ ವಿಶೇಷ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯವರು ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.ಹಂಪಿ ಕನ್ನಡ ವಿಶ್ವ ವಿದ್ಯಾಲಯ ಕ್ಕೆ ಹತ್ತು ಕೋಟಿ ರು. ವಿಶೇಷ ಅನುದಾನ, ಜಿಲ್ಲೆಯ ಅಭಿವೃದ್ಧಿ ಗೆ ವಿಶೇಷ ಪ್ಯಾಕೇಜ್ ಸೇರಿ ಜಿಲ್ಲೆಯ ಬೇಡಿಕೆ ಗಳ ಬಗ್ಗೆ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!