ಹೊಸಪೇಟೆ: ಸದಸ್ಯರಾಗಿ ನಾಲ್ಕು ವರ್ಷ ಕಳೆಯುತ್ತಿದೆ. ಅಷ್ಟರೊಳಗೆ ಬಾಕಿ ಇರುವ ಅಭಿವೃದ್ಧಿ ಕಾರ್ಯ ಮುಗಿಸಬೇಕು. ಇದಕ್ಕೆ ಅಧಿಕಾರಿಗಳು ಸಾಥ್ ನೀಡಬೇಕು. ಜನರ ಸಮಸ್ಯೆಗೆ ಸ್ಪಂದಿಸಲು ಜನಪ್ರತಿನಿಧಿಗಳಿಗೆ ಆಗುತ್ತಿಲ್ಲ ಎಂಬ ಕೊರಗು ನಮ್ಮಲ್ಲಿದೆ. ಹಾಗಾಗಿ ಅಧಿಕಾರಿಗಳು ತಮ್ಮ ಹೊಣೆ ಅರಿತು ಕೆಲಸ ಮಾಡಿದರೆ, ನಗರದ ಎಲ್ಲ ವಾರ್ಡ್‌ಗಳ ಸಮಸ್ಯೆ ಬಗೆಹರಿಯಲಿದೆ ಎಂದು ನಗರಸಭೆ ಸದಸ್ಯರು ಒಕ್ಕೊರಲಿನಿಂದ ತಾಕೀತು ಮಾಡಿದರು.
ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಘವೇಂದ್ರ, ಸದಸ್ಯರು ಆಗುವ ಮೊದಲು ಕುಡಿಯುವ ನೀರಿನ ಸಮಸ್ಯೆ ಸೇರಿ ಉಳಿದ ಸಮಸ್ಯೆಗಳನ್ನು ಪರಿಹರಿಸುವುದಾಗಿ ವಾಗ್ದಾನ ಮಾಡಿದ್ದೇವೆ. ನಮ್ಮ ಅವಧಿ ಮುಗಿಯಲು ಇನ್ನೂ ಒಂದು ವರ್ಷ ಬಾಕಿ ಇದೆ. ಆದರೂ, ನಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಮನೆಗಳ ಎದುರು ಜನರು ಬಂದು ಶಪಿಸುವಂತಾಗಿದೆ. ನಮ್ಮ ಅವಧಿ ಮುಗಿಯುವುದರೊಳಗೆ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ನೀಡಬೇಕು ಎಂದರು.ಮನೆ ಆಸ್ತಿಗಳ ಸಮಸ್ಯೆ ಇದೆ. 1974ರ ಹಿಂದಿನ ದಾಖಲಾತಿಗಳು ಇಲ್ಲದೇ ಮನೆಗಳ ನೋಂದಣಿ ಆಗುತ್ತಿಲ್ಲ. ದಂಡದೊಂದಿಗೆ ತೆರಿಗೆ ಕಟ್ಟಿಸಿಕೊಂಡು ದಾಖಲೆ ನೀಡುವಂತೆ ಕಳೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈ ವರೆಗೆ ಆದರೂ ಕ್ರಮಕೈಗೊಂಡಿಲ್ಲ. ಸಭೆಯಲ್ಲಿ ತೀರ್ಮಾನಿಸಿದ ಠರಾವು ಈ ವರೆಗೆ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಟ್ಟಿಲ್ಲ. ಈ ರೀತಿ ಅಧಿಕಾರಿಗಳು ಕೆಲಸ ಮಾಡಿದರೆ ಜನ ಸಾಮಾನ್ಯರ ಸೇವೆ ಮಾಡುವುದಾದರು ಹೇಗೆ? ಬೇಜವಾಬ್ದಾರಿ ತೋರಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಸಭೆ ಬೆಳಗ್ಗೆ 11.30ರ ನಂತರ ಆರಂಭವಾಗಿ ಮಧ್ಯಾಹ್ನ 12.05ಕ್ಕೆ ಮುಕ್ತಾಯವಾಯಿತು. ಅರ್ಧತಾಸಿನಲ್ಲೇ ಸಭೆ ಮುಕ್ತಾಯವಾಯಿತು. ಹಲವು ವಿಷಯಗಳಿಗೆ ಓದಲಾಯಿತು, ಒಪ್ಪಲಾಯಿತು ಎಂದು ಅನುಮೋದನೆ ನೀಡಲಾಯಿತು.
ನಗರಸಭೆ ಎಇಇ ಸಯ್ಯದ್ ಮನ್ಸೂರ್, ಉಪಾಧ್ಯಕ್ಷ ಬಿ. ಜೀವರತ್ನಂ, ಸದಸ್ಯರಾದ ಕಿರಣ್ ಶಂಕ್ರಿ, ಜೆ.ಎಸ್. ರಮೇಶ್ ಗುಪ್ತ, ಸುಂಕಮ್ಮ, ಅಬ್ದುಲ್ ಖದೀರ್, ರೋಹಿಣಿ ವೆಂಕಟೇಶ್, ಜಿ.ಎಸ್. ಹನುಮಂತಪ್ಪ, ಎಂ. ಮುಮ್ತಾಜ್ ಬೇಗಂ, ಕೆ. ಗೌಸ್, ತಾರಿಹಳ್ಳಿ ಜಂಬುನಾಥ, ಲತಾ ಸಂತೋಷ್ ಮತ್ತಿತರರಿದ್ದರು.