ಕಾರವಾರ: ಭ್ರೂಣಹತ್ಯೆ ಮಾಡುವುದು ದೊಡ್ಡ ಅಪರಾಧವಾಗಿದ್ದು, ಸಮಾಜದಲ್ಲಿನ ಗಂಡು- ಹೆಣ್ಣು ತಾರತಮ್ಯವನ್ನು ತಡೆಗಟ್ಟಲು ಅನುಷ್ಠಾನ ಅಧಿಕಾರಿಗಳು ತಮ್ಮ ಜವಾಬ್ದಾರಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ತಿಳಿಸಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಪ್ರಸವಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯ್ದೆ ಕುರಿತಾದ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಸವಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದು 30 ವರ್ಷ ಗತಿಸಿದರೂ ಅಮಾನವೀಯ ಹಾಗೂ ಅಪರಾಧ ಕೃತ್ಯಗಳು ಇನ್ನೂ ಮುಂದುವರಿದಿರುವುದು ವಿಷಾದನೀಯ. ಶಿಶು ಹತ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಅನುಷ್ಠಾನಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ನಿಯಮಿತವಾಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದರು.
ವೈದ್ಯರು ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜತೆಗೆ ಪೋಷಕರಿಗೆ ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧ ಎಂಬುದನ್ನು ಮನದಟ್ಟು ಮಾಡಬೇಕು. ಜಿಲ್ಲೆಯಲ್ಲಿ ಭ್ರೂಣ ಹತ್ಯೆಯಂತಹ ಘಟನೆಗಳು ನಡೆಯದಂತೆ ಮಾನವೀಯತೆ ನೆಲೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರಿ ಸಿ.ಎಂ. ಮಾತನಾಡಿ, ಮಹಿಳೆ ಯಾವುದರಲ್ಲೂ ಕಡಿಮೆಯಿಲ್ಲ. ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲೂ ತನ್ನದೇಯಾದ ಛಾಪು ಮೂಡಿಸಿದ್ದಾಳೆ. ಹೆಣ್ಣು ಹೊರೆಯಲ್ಲ ಎಂದು ತಿಳಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ. ಹೆಣ್ಣು ಸಮಾಜದಲ್ಲಿ ಸುರಕ್ಷಿತವಾಗಿ ಬದುಕಲು ವಾತಾವರಣ ಕಲ್ಪಿಸುವುದು ಅವಶ್ಯಕವಾಗಿದೆ ಎಂದರು.ಜಿಪಂ ಆಡಳಿತ ವಿಭಾಗದ ಉಪಕಾರ್ಯದರ್ಶಿ ನಾಗೇಶ ರಾಯ್ಕರ ಮಾತನಾಡಿ, ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳು ಹೆಚ್ಚು ಕಳವಳಕಾರಿಯಾಗಿದ್ದು, ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಾಗಿದ್ದು, ನಮ್ಮ ಕರ್ತವ್ಯವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿರೂಪಾಕ್ಷಗೌಡ ಪಾಟೀಲ್, ಡಿಎಸ್‌ಪಿ ಗಿರೀಶ ಎಸ್.ವಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅನ್ನಪೂರ್ಣ ವಸ್ತ್ರದ, ಆರ್‌ಸಿಎಚ್ ಅಧಿಕಾರಿ ಡಾ. ನಟರಾಜ, ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ನಿವೃತ್ತ ಸಮಾಜಶಾಸ್ತ್ರ ಉಪನ್ಯಾಸಕ ಡಿ.ಆರ್. ನಾಯ್ಕ ಮೊದಲಾದವರು ಇದ್ದರು.