ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನಲ್ಲಿ ಅಧಿಕಾರಿಗಳು ಜನಪರ ಕೆಲಸ ಮಾಡದಿದ್ದರೆ ಪುಟ್ಟರಾಜು ಏನೆಂಬುದನ್ನು ತೋರಿಸಬೇಕಾಗುತದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದರು.ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ಮುಖ್ಯಾಧಿಕಾರಿ ಮತ್ತು ಆಡಳಿತಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಜನರ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಡಬೇಕು.
ಯಾವುದೇ ಕೆಲಸವನ್ನು ಉದಾಸೀನ ಮಾಡಬಾರದು. ಪುರಸಭೆಯ 2 ಮತ್ತು 9ನೇ ವಾರ್ಡ್ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಜಯಗಳಿಸಿರುವುದು ಅತ್ಯಂತ ಸಂತಸ ತಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗಾದ ಸೋಲಿನ ನೋವನ್ನು ಪುರಸಭೆ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿನ ಮೂಲಕ ಮರೆತಿದ್ದೇನೆ ಎಂದು ತಿಳಿಸಿದರು.ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಕಾರ್ಯಕರ್ತರು ಸನ್ನದರಾಗಿರಬೇಕು. ನಮ್ಮ ಪಕ್ಷ ಯಾರನ್ನು ಸೂಚಿಸುತ್ತದೆಯೋ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಚುನಾವಣೆ ಎಂದರೆ ನನಗೆ ಭಯ ಉಂಟಾಗುತ್ತಿದೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ನನಗೆ 82 ಸಾವಿರಕ್ಕಿಂತಲೂ ಹೆಚ್ಚು ಮತಗಳು ಲಭಿಸಿದ್ದರೂ ಸೋತಿದ್ದೇನೆ. ಯಾರ ಬಗ್ಗೆಯೂ ಟೀಕೆ, ಟಿಪ್ಪಣಿ ಮಾಡುವುದಿಲ್ಲ. ಮತದಾರರ ಅಭಿಪ್ರಾಯವೇ ದೊಡ್ಡದು. ಪುರಸಭೆಯಲ್ಲಿ ನಮ್ಮ ಪಕ್ಷದ 18 ಸದಸ್ಯರು ಇದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಭಿವೃದ್ಧಿ ಕೆಲಸಗಳು ಜನರ ಮನದಲ್ಲಿವೆ. ಪಟ್ಟಣದಲ್ಲಿ ಬಸ್ ನಿಲ್ದಾಣ, ಸ್ಟೇಡಿಯಂ, ಯುಜಿಡಿ, ಡಿಪೋ, ಪಾರ್ಕುಗಳು ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಚುನಾವಣೆಯಲ್ಲಿ ಅವರ ಸೋಲು ನಮಗೆ ಆಘಾತ ತಂದಿದೆ ಎಂದರು.
ಪುರಸಭೆ ಸದಸ್ಯ ಗಿರೀಶ್ ಮಾತನಾಡಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಾವೆಲ್ಲರೂ ಒತ್ತಡ ಹಾಕಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕಿದೆ. ತಾಲೂಕಿನ ಕಾರ್ಯಕರ್ತರು ಇದಕ್ಕಾಗಿ ಒಗ್ಗೂಡಿ ಶಕ್ತಿ ಮೀರಿ ಕೆಲಸ ಮಾಡಬೇಕು ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಕ್ಷೇತ್ರದ ಮತದಾರರು ಚಿನ್ನ ಗಳಿಸಲು ಹೋಗಿ ವಜ್ರವನ್ನು ಕಳೆದುಕೊಂಡಿದ್ದಾರೆ. ಅವರ ಸೋಲು ನಂಬಲರ್ಹ ಬೆಳವಣಿಗೆ. ಸೋಲಿನ ಬಗ್ಗೆ ಪರಾಮರ್ಶೆ ನಡೆಸಿ ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಇದೇ ವೇಳೆ ಪುರಸಭೆ ಉಪ ಚುನಾವಣೆಯಲ್ಲಿ ಜಯಗಳಿಸಿದ ಜೆಡಿಎಸ್ ಅಭ್ಯರ್ಥಿಗಳಾದ ಜ್ಯೋತಿಲಕ್ಷ್ಮೀಬಾಬು ಮತ್ತು ಯಶವಂತ ಅವರನ್ನು ಶಾಸಕ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಮನ್‌ಮುಲ್ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಲ್.ನಂಜೇಗೌಡ, ಪಿ.ಎಸ್.ಲಿಂಗರಾಜು (ಗುಣ), ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಟಿಎಪಿಸಿಎಂಎಸ್ ನಿರ್ದೇಶಕ ಕಣಿವೆ ಯೋಗೇಶ್, ಜೆಡಿಎಸ್ ಮುಖಂಡ ಸಗಾಯಂ, ಪುರಸಭೆ ಸದಸ್ಯರಾದ ಅರ್ಚನಾ ಚಂದ್ರು, ಶ್ವೇತಾ ಉಮೇಶ್, ಆರ್.ಸೋಮಶೇಖರ್, ಗಿರೀಶ್, ಶಿವಕುಮಾರ್, ಸರಸ್ವತಿ ಜಯರಾಮ್, ಚಂದ್ರು, ಇಮ್ರಾನ್, ಖಮರುನ್ನಿಸಾ ಇಷರತ್ ಮುಂತಾದವರು ಇದ್ದರು.