ಕನ್ನಡಪ್ರಭ ವಾರ್ತೆ ಕೆ.ಆರ್.ನಗರ
ರಾಜ್ಯ ಸರ್ಕಾರ ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ನೂರಾರು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳು ಅವುಗಳ ಬಗ್ಗೆ ನಿಖರ ಮಾಹಿತಿ ನೀಡಿ ಅರ್ಹರಿಗೆ ಪ್ರಯೋಜನಾಗುವಂತೆ ಕೆಲಸ ಮಾಡಬೇಕು ಎಂದು ತಾಪಂ ಆಡಳಿತಾಧಿಕಾರಿ ಪ್ರಭುಸ್ವಾಮಿ ಹೇಳಿದರು.ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇದರ ಜತೆಗೆ ಇಲಾಖಾವಾರು ಕಾರ್ಯಕ್ರಮಗಳ ಪಟ್ಟಿಯನ್ನು ಕಚೇರಿಯಲ್ಲಿ ಪ್ರದರ್ಶಿಸಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕೆಂದರು.
ಪ್ರಮುಖವಾಗಿ ಆರೋಗ್ಯ, ಕೃಷಿ, ಕಂದಾಯ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಜನಪರ ಕೆಲಸ ಮಾಡುವಂತೆ ಕ್ರಮ ಕೈಗೊಂಡು ಯಾವುದೇ ಸಮಸ್ಯೆಗಳಿದ್ದರೂ ವರದಿ ನೀಡಬೇಕೆಂದು ತಾಕೀತು ಮಾಡಿದರು.ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿಯೊಂದು ವಿದ್ಯಾರ್ಥಿ ನಿಲಯಗಳಲ್ಲಿಯೂ ಹೈಟೆಕ್ ಗ್ರಂಥಾಲಯ ಆರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದ ಅವರು, ಇದರೊಂದಿಗೆ ನಿಲಯಗಳಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಉತ್ತೀರ್ಣರಾಗುವಂತೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಈಗಾಗಲೇ ರೈತರು ಕೃಷಿ ಚಟುವಟಿಕೆ ಆರಂಭಿಸಿ ಭತ್ತದ ಬಿತ್ತನೆ ಕಾರ್ಯ ಆರಂಭಿಸಿರುವುದರಿಂದ ಇಲಾಖೆಯ ಸಹಾಯಕ ನಿರ್ದೇಶಕರು ಅವರ ಅಗತ್ಯತೆ ಮತ್ತು ಅನುಕೂಲಕ್ಕೆ ತಕ್ಕಂತೆ ಕೃಷಿ ಯಂತ್ರೋಪಕರಣ ಮತ್ತು ಬಿತ್ತನೆ ಬೀಜ ವಿತರಣೆ ಮಾಡಿ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.ರಾಜ್ಯಾದ್ಯಂತ ಡೆಂಘೀ ಮಹಾಮಾರಿ ರಣಕೇಕೆ ಹಾಕುತ್ತಿರುವುದರಿಂದ ಈ ವಿಚಾರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಮತ್ತು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮನವರಿಕೆ ಮಾಡಬೇಕೆಂದರು.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ವಿಚಾರ ಬಂದಾಗ ಯಾವುದೇ ಪ್ರಮುಖ ಸಮಸ್ಯೆಗಳಿದ್ದರೂ ನನಗೆ ಮತ್ತು ತಾಲೂಕು ಆಡಳಿತಕ್ಕೆ ವರದಿ ನೀಡಬೇಕೆಂದು ಆದೇಶಿಸಿದ ಅವರು, ಸೇವೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದರು ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ. ಜಾತಿ ಮತ್ತು ಜನಾಂಗದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ಮೂರು ಕೋಟಿ ರು. ಗಳು ಮಂಜುರಾಗಿದ್ದು, ಆ ಅನುದಾನವನ್ನು ಆದ್ಯತೆಯ ಮೇರೆಗೆ ಖರ್ಚು ಮಾಡಲು ಗಮನ ಹರಿಸಬೇಕೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗೆ ನಿರ್ದೇಶನ ನೀಡಿದರು.
ಆ ನಂತರ ಅವರು ಇಲಾಖೆವಾರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಆಲಿಸಿ ಮುಂದೆ ಕೈಗೊಳ್ಳಬಹುದಾದ ಕ್ರಮಗಳು ಮತ್ತು ಮಾಡಬಹುದಾದ ಕೆಲಸಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.ತಾಪಂ ಇಒ ಜಿ.ಕೆ. ಹರೀಶ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸರ್ಕಾರದಿಂದ ಬರುವ ಅನುದಾನ ಖರ್ಚು ಮಾಡುವ ವಿಚಾರ ಮತ್ತು ಇತರ ಸಮಸ್ಯೆಗಳ ಬಗ್ಗೆ ಸಂವಹನ ಮಾಡಿ ಸೂಕ್ತ ತಿಳುವಳಿಕೆ ಮೂಡಿಸಿದ್ದು, ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೆ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಗದಿತ ಅವಧಿಯಲ್ಲಿ ಮಾಡಬೇಕೆಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಡಿ. ನಟರಾಜು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನವೀನ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ, ಹಿರಿಯ ಪಶು ನಿರ್ದೇಶಕ ಡಾ. ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಎಲ್. ವಿನುತ್, ಎಸ್. ರಾಜಾರಾಂ ವೈಲಾಯ, ಸಿಡಿಪಿಓ ಸಿ.ಎಂ. ಅಣ್ಣಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ರವಿ, ತಾಪಂ ವ್ಯವಸ್ಥಾಪಕ ಕರೀಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.