ಯೋಜನೆಗಳ ಪ್ರಗತಿಗೆ ಅಧಿಕಾರಿಗಳು ಬದ್ಧತೆಯಿಂದ ಶ್ರಮಿಸಲಿ: ಸಚಿವ ರಾಯರಡ್ಡಿ

KannadaprabhaNewsNetwork |  
Published : Nov 17, 2026, 02:15 AM IST
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಸರ್ಕಾರದ ಯೋಜನೆಗಳ ಪ್ರಗತಿ ಸಾಧನೆಗೆ ಅಧಿಕಾರಿಗಳು ವೈಯಕ್ತಿಕ ಆಸಕ್ತಿ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು.

ಸಮರ್ಪಕ ಮಾಹಿತಿ ನೀಡದ ರೇಷ್ಮೆ, ಪಶುಸಂಗೋಪನೆ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಸರ್ಕಾರದ ಯೋಜನೆಗಳ ಪ್ರಗತಿ ಸಾಧನೆಗೆ ಅಧಿಕಾರಿಗಳು ವೈಯಕ್ತಿಕ ಆಸಕ್ತಿ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಸೋಮವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡು ದಿನಗಳ ಸಭೆಯ ಮೊದಲ ಹಂತದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ನೀರಾವರಿ ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಅನಗತ್ಯ ಚರ್ಚೆಗೆ ಅವಕಾಶ ನೀಡದೆ, ಮಂಜೂರಾದ ಹಾಗೂ ಖಾಲಿ ಹುದ್ದೆಗಳು, ವೇತನ ಅನುದಾನ ಮತ್ತು ಯೋಜನೆಗಳ ಪ್ರಗತಿ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ಕೃಷಿ ಇಲಾಖೆಯಲ್ಲಿ 204 ಮಂಜೂರು ಹುದ್ದೆಗಳ ಪೈಕಿ 83 ಕಾಯಂ ಹಾಗೂ 53 ಹೊರಗುತ್ತಿಗೆ ಸಿಬ್ಬಂದಿಯ ಬಗ್ಗೆ ಮುಂದಿನ ಸಾಲಿನ ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ಕುರಿತು ವರದಿ ಸಲ್ಲಿಸಲು ಸಚಿವರು ಸೂಚಿಸಿದರು. ತೋಟಗಾರಿಕೆ ಇಲಾಖೆಯಲ್ಲಿ 72 ಹುದ್ದೆಗಳ ಪೈಕಿ 60 ಸಿಬ್ಬಂದಿ ಹಾಗೂ ಇನ್ನುಳಿದವರು ಹೊರಗುತ್ತಿಗೆ ನೌಕರರಿದ್ದಾರೆ. ಗದಗ ಜಿಲ್ಲೆಯಲ್ಲಿ ಈರುಳ್ಳಿ ಸಂಗ್ರಹಣಾ ಘಟಕಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ ಸಚಿವರು, ಡಂಬಳ ತೋಟಗಾರಿಕೆ ಕಾಲೇಜಿನ ಪ್ರಗತಿ ವರದಿ ಸಲ್ಲಿಸಲು ಸೂಚಿಸಲಾಯಿತು.

ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 38ರಷ್ಟು ಮಳೆ ಕೊರತೆಯಾಗಿದ್ದು, 7.01 ಲಕ್ಷ ಎಕರೆಯಲ್ಲಿ ಬಿತ್ತನೆಯಾಗಿ ಅಂದಾಜು ₹262 ಕೋಟಿ ಬರ ಹಾನಿ ಸಂಭವಿಸಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯ ₹8500 ಪರಿಹಾರದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ₹5 ಸಾವಿರ ಜೊತೆಗೆ ಉಳಿದ ₹3500 ಬಿಡುಗಡೆಗೆ ಕ್ರಮವಹಿಸಲು ಚರ್ಚಿಸಲಾಯಿತು. ಮಳೆನೀರು ಸಂಗ್ರಹಿಸಲು ಹಳ್ಳಗಳಿಗೆ ಚೆಕ್‌ಡ್ಯಾಂ ನಿರ್ಮಾಣದ ನಕ್ಷೆ ರೂಪಿಸಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಯಿತು.

ಅಧಿಕಾರಿಗಳಿಗೆ ನೋಟಿಸ್:

ರೇಷ್ಮೆ ಇಲಾಖೆಯಲ್ಲಿ 49 ಹುದ್ದೆಗಳ ಪೈಕಿ 41 ಖಾಲಿಯಿದ್ದು, ಕೇವಲ 8 ಸಿಬ್ಬಂದಿ ಇದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ 384 ಹುದ್ದೆಗಳ ಪೈಕಿ 106 ಕಾಯಂ ಹಾಗೂ 87 ಹೊರಗುತ್ತಿಗೆ ಸಿಬ್ಬಂದಿ ಇದ್ದು, 278 ಹುದ್ದೆಗಳು ಖಾಲಿಯಿವೆ. ಇಲಾಖೆಗೆ 5 ಸಂಚಾರಿ ಪಶುವೈದ್ಯಕೀಯ ವಾಹನಗಳಿಗೆ ಬೇಕಾಗುವ ಅನುದಾನದ ಬಗ್ಗೆ ಕೇಳಿದ ಮಾಹಿತಿಯನ್ನು ನೀಡುವಲ್ಲಿ ಅಧಿಕಾರಗಳ ವರ್ತನೆಗೆ ಬೇಸರ ವ್ಯಕ್ತ ಪಡಿಸಿದ ಸಚಿವರು ರೇಷ್ಮೆ ಇಲಾಖೆ ಹಾಗೂ ಪಶುಸಂಗೋಪನಾ ಉಪನಿರ್ದೇಶಕರಿಗೆ ಎಚ್ಚರಿಕೆ ನೋಟಿಸ್ ನೀಡಲು ಜಿಪಂ ಸಿಇಒ ಮುಕುಲ್ ಜೈನ್ ಅವರಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್ಪಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಉಪಸ್ಥಿತರಿದ್ದರು.ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳು ಮತ್ತು ಅಂಕಿ-ಅಂಶಗಳ ಕುರಿತು ಸಂಪೂರ್ಣ ಹಿಡಿತ ಹೊಂದಿರಬೇಕು. ಸಭೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದಿರುವುದು ಬೇಜವಾಬ್ದಾರಿತನ; ಇಂತಹ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ.

ಬಸವರಾಜ ರಾಯರಡ್ಡಿ, ಗದಗ ಜಿಲ್ಲಾ ಉಸ್ತುವಾರಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿಯವ ನೀರಿಗಾಗಿ ಇಳಕಲ್ಲ ಜನರ ಪರದಾಟ
ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ