ಜನರ ಸಮಸ್ಯೆಗೆ ಅಧಿಕಾರಿಗಳೇ ಮೂಲ ಕಾರಣಕರ್ತರು

KannadaprabhaNewsNetwork |  
Published : Nov 30, 2026, 02:45 AM IST
ಚನ್ನರಾಯಪಟ್ಟಣದ ತಾಲೂಕು ಕಚೇರಿ ಎದುರು ನಡೆದ ಪ್ರಜಾಸೇವಾ ಆಂದೋಲನದಲ್ಲಿ ಸಚಿವ ಶಿವಲಿಂಗೇಗೌಡ, ಶಾಸಕ ಸಿ.ಎನ್. ಬಾಲಕೃಷ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ ಮೊದಲಾದವರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಸರ್ಕಾರಿ ಕಚೇರಿಗಳೇ ಜನರನ್ನು ಅಲೆದಾಡಿಸುವ ಕೇಂದ್ರಗಳಾಗುತ್ತಿದೆ. ಅರ್ಜಿಗಳು ವರ್ಷಗಟ್ಟಲೆ ವಿಲೇವಾರಿಯಾಗದೆ ಕಡತಗಳಲ್ಲಿ ಧೂಳು ಹಿಡಿಯುತ್ತಿದ್ದರೆ, ರೈತರು ತಮ್ಮ ಜಮೀನಿನ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದರೆ, ಅಧಿಕಾರಿಗಳ ಜವಾಬ್ದಾರಿ ಏನು? ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ಸರ್ಕಾರಿ ಕಚೇರಿಗಳೇ ಜನರನ್ನು ಅಲೆದಾಡಿಸುವ ಕೇಂದ್ರಗಳಾಗುತ್ತಿದೆ. ಅರ್ಜಿಗಳು ವರ್ಷಗಟ್ಟಲೆ ವಿಲೇವಾರಿಯಾಗದೆ ಕಡತಗಳಲ್ಲಿ ಧೂಳು ಹಿಡಿಯುತ್ತಿದ್ದರೆ, ರೈತರು ತಮ್ಮ ಜಮೀನಿನ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದರೆ, ಅಧಿಕಾರಿಗಳ ಜವಾಬ್ದಾರಿ ಏನು? ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಪಟ್ಟಣದ ತಾಲೂಕು ಕಛೇರಿ ಎದುರು ನಡೆದ ಪ್ರಜಾಸೇವಾ ಆಂದೋಲನದಲ್ಲಿ ಮಾತನಾಡಿದ, ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಆಡಳಿತದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶದ ಕಟ್ಟೆಯೊಡೆದು, ಅಧಿಕಾರಿಗಳ ಕರ್ತವ್ಯಲೋಪಕ್ಕೆ ತೀವ್ರ ತರಾಟೆ ತೆಗೆದುಕೊಂಡರು.

೩ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ!ಇನ್ನು ಸಮಸ್ಯೆ ಆಲಿಸುತ್ತಿದ್ದ ಸಚಿವರು, ತಾಲೂಕಿನಲ್ಲಿ ೧೭ ಸರ್ವೇಯರ್‌ಗಳಿದ್ದರೂ ಜಮೀನು ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ವಿಚಾರ ಸಚಿವರ ಆಕ್ರೋಶಕ್ಕೆ ಕಾರಣವಾಯಿತು. ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಮೂರು ಸಾವಿರಕ್ಕೂ ಅಧಿಕ ಅರ್ಜಿಗಳು ಬಾಕಿ ಇವೆ. ನಾಚಿಕೆ ಆಗಲ್ವಾ ನಿಮಗೆ? ಒಂದು ಅರ್ಜಿಯನ್ನು ವ?ಗಟ್ಟಲೆ ಬಾಕಿ ಉಳಿಸಿಕೊಂಡಿದ್ದೀರಲ್ಲ. ತಾಲೂಕು ಕಚೇರಿ ಸತ್ತಿದೆಯಾ, ಬದುಕಿದೆಯಾ? ಎಂದು ಸಚಿವರು ಅಧಿಕಾರಿಗಳನ್ನು ನೇರವಾಗಿ ಪ್ರಶ್ನಿಸಿದರು. ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿರುವುದರಿಂದ ಜನರ ಸಮಸ್ಯೆಗಳು ಉಲ್ಬಣವಾಗುತ್ತಿವೆ ಎಂದು ಕಿಡಿಕಾರಿ,ಕಾರ್ಯವೈಖರಿಯ ವಿರುದ್ಧ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.ನೆಂಟರು ಮನೆಗೆ ಬಂದ ಹಾಗೆ ಬರುತ್ತಾರೆ: ಇನ್ನು ಕೆಲವು ಜಿಲ್ಲೆಗಳಲ್ಲಿರುವ ಗ್ರಾಮಲೆಕ್ಕಾಧಿಕಾರಿಗಳು ಕಚೇರಿಗೆ ನೆಂಟರು ಮನೆಗೆ ಬಂದಂತೆ ಬಂದು ಹೋಗುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ ಸಚಿವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಹಕ್ಕುಪತ್ರಕ್ಕಾಗಿ ಜನರ ಪರದಾಟ:ಕಲ್ಕೆರೆ ಹಾಗೂ ರಂಗಾಪುರ ಗ್ರಾಮಗಳಲ್ಲಿ ೧೦೦ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ವಿತರಣೆ ಬಾಕಿ ಇರುವ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು. ಅರ್ಹರಿಗೆ ಸರ್ಕಾರದ ನಿಯಮಾನುಸಾರ ಹಕ್ಕುಪತ್ರ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ೯೪/ಸಿ ಅಡಿಯಲ್ಲಿ ಅರ್ಹ ಅರ್ಜಿಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿದ್ದು, ಉಳಿದ ಅರ್ಜಿಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.

ಕೆ. ಮಲ್ಲೇನಹಳ್ಳಿಯಲ್ಲಿ ವ್ಯಕ್ತಿಯೊಬ್ಬರ ಮನೆಯನ್ನು ಕಾನೂನುಬಾಹಿರವಾಗಿ ಪರಭಾರೆ ಮಾಡಿರುವ ಆರೋಪ ಹಾಗೂ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲೇ ಖಾತೆ ಮುಂದುವರಿಸಿರುವ ಪ್ರಕರಣಗಳ ಕುರಿತು ಮಾತನಾಡಿದ ಸಚಿವರು, ಯಾರು ಇಂತಹ ಕರ್ತವ್ಯ ಲೋಪ ಎಸಗಿದ್ದಾರೆ ಅವರ ವಿರುದ್ಧ ತಕ್ಷಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ರೈತರ ಜಮೀನು ದುರಸ್ತಿ, ಇಂಡಿಕರಣ, ವಿದ್ಯುತ್ ಸಮಸ್ಯೆ ಸೇರಿದಂತೆ ಯಾವುದೇ ವಿಚಾರದಲ್ಲೂ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಬಾಗೂರಿಗೆ ಪೊಲೀಸ್ ಠಾಣೆ, ಶಾಲೆಗೆ ಅನುದಾನದ ಭರವಸೆ:ಚನ್ನರಾಯಪಟ್ಟಣ ತಾಲೂಕಿನ ಬಾಗುರು ಹೋಬಳಿಯಲ್ಲಿ ಸುಮಾರು ೩೫ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅಲ್ಲಿ ಯಾವುದೇ ಹಂತಕರ ಘಟನೆ ನಡೆದರೆ ಅಲ್ಲಿಂದ ಪೊಲೀಸ್ ಠಾಣೆಗೆ ಚನ್ನರಾಯಪಟ್ಟಣಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಬಾಗೂರು ಪಟ್ಟಣಕ್ಕೆ ಪೊಲೀಸ್ ಠಾಣೆ ಮಂಜೂರು ಮಾಡಬೇಕೆಂದು ಮನವಿ ಮಾಡಿದರು ಬಾಗೂರಿನಲ್ಲಿ ಪೊಲೀಸ್ ಠಾಣೆ ಸ್ಥಾಪಿಸುವ ಬೇಡಿಕೆಗೆ ಸ್ಪಂದಿಸಿದ ಸಚಿವರು, ಮುಂದಿನ ಬಜೆಟ್‌ನಲ್ಲಿ ಪ್ರಸ್ತಾವನೆ ಸೇರಿಸಿ ಅನುಮೋದನೆ ಕೊಡಿಸುವುದಾಗಿ ಭರವಸೆ ನೀಡಿದರು. ಚನ್ನರಾಯಪಟ್ಟಣದಲ್ಲಿ ಬೆಳಿಗ್ಗೆ ೬ ಗಂಟೆಗೆ ಬಾರ್ ತೆರೆಯುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಅವರು, ಬೆಳಿಗ್ಗೆ ೧೦ ಗಂಟೆಯ ನಂತರವೇ ಮಧ್ಯದಂಗಡಿ ತೆರೆಯುವಂತೆ ಸೂಚಿಸಿದರು. ವಾರನಹಳ್ಳಿ ಸರ್ಕಾರಿ ಶಾಲೆ ಶಿಥಿಲಗೊಂಡಿದ್ದು, ಅನುದಾನದ ಕೊರತೆಯ ವಿಚಾರಕ್ಕೆ ಶೀಘ್ರ ಅನುದಾನ ಕೊಡಿಸುವಂತೆ ಸಂಸದ ಶ್ರೇಯಸ್ ಪಟೇಲ್ ಅವರಿಗೆ ಕ್ರಮವಹಿಸಲು ಸೂಚಿಸಿದರು.ಇನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಪಡೆದು ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ವೈಯಕ್ತಿಕ ಮಾತುಕತೆಗಿಂತ ಜನರ ಕೆಲಸಗಳಿಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಶುಭನ್ವಿತ, ಸಿಇಒ ಶುಭಂ ಶುಕ್ಲಾ, ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ, ನಿಗಮ ಮಂಡಳಿ ಅಧ್ಯಕ್ಷ ಲಲಿತ್‌ರಾಘವ್, ತಹಸೀಲ್ದಾರ್ ಗೀತಾ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

===============

ಪ್ರಜಾಸೇವಾ ಆಂದೋಲನದಲ್ಲಿ ಗಮನ ಸೆಳೆದ ವಿಷಯಗಳು :೧. ಕಂದಾಯ ಹಾಗೂ ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ೩೦೦೦ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ೨. ೧೭ ಸರ್ವೇಯರ್‌ಗಳು ಇದ್ದರೂ ಜಮೀನು ದುರಸ್ತಿ ಕಾರ್ಯದಲ್ಲಿ ವಿಳಂಬದ ಆರೋಪ.೩. ಕಲ್ಕೆರೆ, ರಂಗಾಪುರದಲ್ಲಿನ ೧೦೦ಕ್ಕೂ ಹೆಚ್ಚು ಮನೆಗಳ ವಾರಸುದಾರರಿಗೆ ಈ ಸ್ವತ್ತನ್ನು ನೀಡಿ ಹಕ್ಕುಪತ್ರ ನೀಡದಿರುವುದು. ೪. ಬಾಗೂರು ಪಟ್ಟಣಕ್ಕೆ ಪೊಲೀಸ್ ಠಾಣೆ ಮಂಜೂರು ವಿಚಾರ ೫. ಬೀಳುವ ಹಂತದಲ್ಲಿರುವ ವಾರನಹಳ್ಳಿ ಶಾಲೆ ಶೀಘ್ರ ಅನುದಾನ ಕೊಡಿಸುವ ಭರವಸೆ.೬. ಸರ್ಕಾರಿ ಸಂಬಳ ಆದ ಪಡೆದು, ಕೆಲಸ ಮಾಡದೆ ಇರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಕೆಎಮ್ ಶಿವಲಿಂಗೇಗೌಡ೭. ಗ್ರಾಮ ಲೆಕ್ಕಾಧಿಕಾರಿಗಳ ಕರ್ತವ್ಯ ಲೋಪಕ್ಕೆ ಕಠಿಣ ಕ್ರಮ.೮. ತಿಂಗಳ ಒಳಗೆ ಎಲ್ಲಾ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಗೆ ಸೂಚನೆ

====

ಫೋಟೋ:

ಚನ್ನರಾಯಪಟ್ಟಣದ ತಾಲೂಕು ಕಚೇರಿ ಎದುರು ನಡೆದ ಪ್ರಜಾಸೇವಾ ಆಂದೋಲನದಲ್ಲಿ ಸಚಿವ ಶಿವಲಿಂಗೇಗೌಡ, ಶಾಸಕ ಸಿ.ಎನ್. ಬಾಲಕೃಷ್ಣ, ಸಂಸದ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ ಮೊದಲಾದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಲೀಕರ ಮನೆ ಬೀಗ ಕದ್ದು ನಕಲಿಕೀ ಮಾಡಿಸಿ ಚಿನ್ನ ದೋಚಿದ ದಂಪತಿ
1154 ಮಸಾಜ್ ಪಾರ್ಲರ್, ಸ್ಪಾ ಮೇಲೆ ದಾಳಿ