ಮಾಲೀಕರ ಮನೆಗೆ ಕನ್ನ ಹಾಕಿ ಲಕ್ಷಾಂತರ ರು.ಮೌಲ್ಯದ ಚಿನ್ನಾಭರಣ ದೋಚಿ ದಂಪತಿ ಪರಾರಿ ಆಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಲೀಕರ ಮನೆಗೆ ಕನ್ನ ಹಾಕಿ ಲಕ್ಷಾಂತರ ರು.ಮೌಲ್ಯದ ಚಿನ್ನಾಭರಣ ದೋಚಿ ದಂಪತಿ ಪರಾರಿ ಆಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೊಲ್ಲರಹಟ್ಟಿಯ ಜಯಲಕ್ಷ್ಮೀ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಪೂಜಾ ಹಾಗೂ ಆಕೆಯ ಪತಿ ರಾಜು ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಾಪಿಂಗ್ ನೆಪದಲ್ಲಿ ಮನೆ ಮಾಲೀಕರನ್ನು ಕರೆದೊಯ್ದು ಬಳಿಕ ಅವರ ಮನೆಯಲ್ಲಿ ನಕಲಿ ಕೀ ಬಳಸಿ ಕಿಡಿಗೇಡಿಗಳ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 2 ತಿಂಗಳ ಹಿಂದೆ ಜಯಲಕ್ಷ್ಮೀ ಅವರ ಮನೆಗೆ ಪೂಜಾ ದಂಪತಿ ಬಾಡಿಗೆ ಪಡೆದಿದ್ದರು. ಸೌಜನ್ಯ ನಡವಳಿಕೆ ಮೂಲಕ ಮನೆ ಮಾಲೀಕರ ವಿಶ್ವಾಸವನ್ನು ದಂಪತಿಗೆ ಸಂಪಾದಿಸಿದರು. ಇದೇ ನಂಬಿಕೆಯಲ್ಲಿ ಜಯಲಕ್ಷ್ಮೀ ಅವರಿಗೆ ದ್ರೋಹ ಬಗೆದ ಆರೋಪಿಗಳು, ಅವರ ಮನೆಯ ಬೀಗ ಕೀ ಕದ್ದು ನಕಲಿ ಮಾಡಿಸಿಕೊಂಡಿದ್ದರು. ತರುವಾಯ ಶಾಪಿಂಗ್ ನೆಪದಲ್ಲಿ ಆಕೆಯನ್ನು ಹೊರಗೆ ಪೂಜಾ ಕರೆದೊಯ್ದಿದ್ದಳು. ಈ ವೇಳೆ ಪೂಜಾ ಪತಿ ರಾಜು ಮನೆ ಮಾಲಿಕರ ಮನೆಗೆ ಕನ್ನ ಹಾಕಿ 40 ಲಕ್ಷ ರು.ಮೌಲ್ಯದ ಚಿನ್ನಾಭರಣವನ್ನು ದೋಚಿದ್ದ. ಬಳಿಕ ಶಾಪಿಂಗ್ ಮುಗಿಸಿ ಮನೆ ಮಾಲೀಕಳ ಜತೆ ಪೂಜಾ ಮರಳಿದ್ದಾಳೆ. ಆಗ ತನ್ನ ಮನೆಗೆ ಕರೆದೊಯ್ದು ಆಕೆಯನ್ನು ಕೂಡಿ ಹಾಕಿ ಪತಿ ಜತೆ ಆಕೆ ಸಹ ಪರಾರಿಯಾಗಿದ್ದಾಳೆ. ಕೆಲ ಹೊತ್ತಿನ ಬಳಿಕ ಮನೆ ಮಾಲಿಕರಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ ಎಂದು ತಿಳಿದು ಬಂದಿದೆ.