ಚಳ್ಳಕೆರೆ ತಾಲೂಕು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟಂದೇವರ ಕೋಟೆಯಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಗ್ರಾಮಕ್ಕೆ ಭೇಟಿ ನೀಡಿ ಎರಡೂ ಕಡೆಯವರ ಅಹವಾಲು ಆಲಿಸಿದರು.
ದಲಿತರ ಕಾಲೋನಿಗೆ ನುಗ್ಗಿ ದಲಿತರ ಮೇಲೆ ಹಲ್ಲೆ ನಡೆಸಿದ ಊರಿನ ನಾಯಕ, ರೆಡ್ಡಿ, ಮಡಿವಾಳ ಸೇರಿದಂತೆ ಇನ್ನಿತರೆ ಸಮುದಾಯಗಳ ಜನರ ಮೇಲೆ ಪ್ರಕರಣ ದಾಖಲಾಗಿದ್ದರೂ, ಆರೋಪಿಗಳನ್ನು ದಸ್ತಗಿರಿ ಮಾಡಿಲ್ಲ ಹಾಗೂ ಊರಿನ ಕಿರಾಣಿ ಅಂಗಡಿ ಸೇರಿದಂತೆ ಹಿಟ್ಟಿನ ಗಿರಣಿಗಳಲ್ಲೂ ದಲಿತರನ್ನು ಬಿಡಿಸಿಕೊಳ್ಳದೇ ಸಾಮಾಜಿಕ ಬಹಿಷ್ಕಾರ ಆಗಿದ್ದರೂ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂಬ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಲಾಗಿತ್ತು.
ದಲಿತರ ಕಾಲೋನಿಯಲ್ಲಿ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಎದರಬೇಡಿ. ನಿಮಗೆ ರಕ್ಷಣೆ ಕೊಡುತ್ತೇವೆ ಎಂದು ಸಂತ್ರಸ್ಥರಿಗೆ ಸಾಂತ್ವನ ಹೇಳಿದರು.
ಸ್ಮಶಾನಕ್ಕಾಗಿ ಮಂಜೂರಾದ 7 ಎಕರೆ ಪ್ರದೇಶದಲ್ಲಿ ಊರಿನ ಇತರೆ ಸಮುದಾಯದವರು ಬಣವೆ ಹಾಕಿಕೊಂಡಿದ್ದಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿ ಈ ಕೂಡಲೇ ಆ ಜಾಗವನ್ನು ತೆರವುಗೊಳಿಸಿ ಎಂದು ತಹಸೀಲ್ದಾರ್‌ಗೆ ಸೂಚಿಸಿದರು.
ನಿವೇಶನ ರಹಿತರಿಗಾಗಿ ನಿವೇಶನ ನೀಡಲು 4 ಎಕರೆ ಮಂಜೂರು ಮಾಡಲಾಗಿದೆ. ನಿವೇಶನ ರಹಿತರ ಪಟ್ಟಿ ಮಾಡಿ ಆದಷ್ಟು ಬೇಗ ವಿತರಿಸುವ ಕೆಲಸ ಆಗಬೇಕು. ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡಲು 9.35ಲಕ್ಷಕ್ಕೆ ಹರಾಜು ಪ್ರಕ್ರಿಯೆ ನಡೆದಿರುವುದನ್ನು ರದ್ದು ಮಾಡಿ ಕ್ರಮ ಜರುಗಿಸಲು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೇ ಕಲ್ಯಾಣ ಮಂಟಪದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಇಲ್ಲವಾದರೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿಸಬೇಕಾಗುತ್ತದೆ ಎಂದು ಹೇಳಿದರು. ದೌರ್ಜನ್ಯಕ್ಕೆ ಒಳಗಾದ ದಲಿತರ ನಾಲ್ಕು ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಿಗೆ ಪ್ರವೇಶ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಇದಾದ ಬಳಿಕ ಗ್ರಾಮದ ಇನ್ನಿತರೆ ಸಮುದಾಯಗಳ ಜನರ ಸಭೆ ನಡೆಸಿ, ನಿಮ್ಮ ದೌರ್ಜನ್ಯ ನಿಲ್ಲಿಸದಿದ್ದರೆ ಕಠಿಣ ಕಾನೂನಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ದಲಿತರ ಮೇಲೆ ಹಲ್ಲೆ ಮಾಡಿದಂತೆ ನಾವೂ ನಿಮ್ಮ ಮೇಲೆ ಹಲ್ಲೆ ಮಾಡಿದರೆ ಏನು ಮಾಡುತ್ತೀರಿ? ಯಾರೊಬ್ಬರೂ ಕಾನೂನು ಮೀರಿ ನಡೆದುಕೊಳ್ಳಬಾರದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆಕಾಶ್, ಡಿವೖಎಸ್‌ಪಿ ಸತ್ಯನಾರಾಯಣ ರಾವ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಮುಖಂಡರಾದ ಹೊನ್ನೂರ ಸ್ವಾಮಿ, ನಾಗರಾಜ್, ಫಾಲಾಕ್ಷ ಸೇರಿದಂತೆ ಅಧಿಕಾರಿ ವರ್ಗ ಸ್ಥಳದಲ್ಲಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.