ಕನ್ನಡಪ್ರಭ ವಾರ್ತೆ ಮಳವಳ್ಳಿ
ಕನಕದಾಸರ ಜಯಂತಿ ಆಚರಣೆ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಗೆ ಬಹುತೇಕ ಅಧಿಕಾರಿಗಳು ಗೈರಾಗಿರುವ ಕುರಿತು ತಹಸೀಲ್ದಾರ್ ಹಾಗೂ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ನ.8 ರಂದು ಕನಕದಾಸರ ಜಯಂತಿ ಆಚರಣೆ ಸಂಬಂಧ ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ಬಿಇಒ, ಲೋಕೋಪಯೋಗಿ, ತೋಟಗಾರಿಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಕೇವಲ 5-6 ಇಲಾಖೆಗಳ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿರುವ ಕುರಿತು ಆರಂಭದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಹಸೀಲ್ದಾರ್ ಡಾ.ಲೋಕೇಶ್ ಅವರು ಪ್ರತೀ ಹಬ್ಬಗಳ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರಾಗುತ್ತಿದ್ದು, ತಾಲೂಕು ಆಡಳಿತ ಕರೆಯುವ ಸಭೆಗೆ ಈ ರೀತಿ ತಾತ್ಸಾರ ಧೋರಣೆ ತೋರಿದರೆ ಹೇಗೆ ಎಂದು ಪ್ರಶ್ನಿಸಿದರರು.ಈ ಹಿಂದೆ ಹಲವು ಬಾರಿ ನೋಟಿಸ್ ನೀಡಿದ್ದರೂ ಅದೇ ವರ್ತನೆ ಮುಂದುವರಿಯುತ್ತಿದ್ದಾರೆ. ಇಂದಿನ ಸಭೆಗೆ ಅರ್ಧಗಂಟೆಯಿಂದ ಜೀಪ್‌ನಲ್ಲಿ ಕುಳಿತು ಕಾಯುತ್ತಿದ್ದರೂ ಅಧಿಕಾರಿಗಳು ಬಾರದಿರುವ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳ ಗೈರು ಹಾಜರಿ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕ ಲಿಂಗಯ್ಯ, ಕೆಡಿಪಿ ಸದಸ್ಯ ಶಶಿರಾಜ್, ಮಾಜಿ ಗ್ರಾಪಂ ಅಧ್ಯಕ್ಷ ಕಲ್ಲಾರೆಪುರ ಮಂಜುನಾಥ್ ಅವರು ಕನಕದಾಸರ ಜಯಂತಿ ಆಚರಣೆ ಸಂಬಂಧ ಸಭೆಗೆ ಅಧಿಕಾರಿಗಳು ಇಷ್ಟು ಅಸಡ್ಡೆ ತೋರಿದ ಮೇಲೆ ಇವರು ಜನರನ್ನು ಸಂಘಟಿಸಿ ಸಮಾರಂಭ ನಡೆಸುವುದಾದರೂ ಹೇಗೆ ಎಂದು ಹರಿಹಾಯ್ದರು.ಅಂತಿಮವಾಗಿ ಪ್ರತೀ ವರ್ಷದಂತೆ ಈ ಬಾರಿ ನ.8 ರಂದು ಬೆಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರ ಇರಿಸಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಅಂಬೇಡ್ಕರ್ ಭವನದಲ್ಲಿ ಸಮಾರಂಭ ಆಯೋಜಿಸುವ ಮೂಲಕ ವಿಜೃಂಭಣೆಯಿಂದ ಕನಕದಾಸರ ಜಯಂತಿ ಆಚರಿಸಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ತಹಸೀಲ್ದಾರ್ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಇಒ ಶ್ರೀನಿವಾಸ್, ಬಿಇಒ ಉಮಾ, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರಯ್ಯ ಸೇರಿದಂತೆ ಹಲವು ಮುಖಂಡರರು ಹಾಜರಿದ್ದರು.