ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಸರ್ಕಾರ ಅಕ್ಷರಶಃ ಬಿದ್ದು ಹೋಗಿದೆ. ಕಬ್ಬು ಬೆಳೆಗಾರರ ವಿಷಯ ಪ್ರಸ್ತಾಪಿಸಿದರೆ ಕೇಂದ್ರದ ಮೇಲೆ ಆರೋಪ ಮಾಡುತ್ತಾರೆ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಕೇಳಲು ರಾಜ್ಯ ಸರ್ಕಾರಕ್ಕೆ ತಾಳ್ಮೆ ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್.ಒ.ಪಿ ಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎನ್ನುತ್ತಾರೆ. ನೆರೆಯ ಮಹಾರಾಷ್ಟ್ರ ಸರ್ಕಾರ ಮೂರುವರೆಯಿಂದ ನಾಲ್ಕು ಸಾವಿರ ನೀಡಿ ಕಬ್ಬನ್ನು ಖರೀದಿಸುತ್ತಿದೆ. ಆದರೆ ಗಡಿಭಾಗದ ಕರ್ನಾಟಕದ ಕಾರ್ಖಾನೆಗಳು 3010 ರುಪಾಯಿಗಿಂತ ಹೆಚ್ಚು ನೀಡಲು ಆಗದು ಎನ್ನುತ್ತಿವೆ.
ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆ ಹೊರತು ಕೇಂದ್ರ ಅಲ್ಲ. ಕೂತು ವಿಚಾರ ಮಾಡುವ ವ್ಯವಧಾನವೇ ರಾಜ್ಯ ಸರ್ಕಾರಕ್ಕಿಲ್ಲ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರೊಂದಿಗೆ ಕೂತು ತೀರ್ಮಾನ ತೆಗೆದುಕೊಂಡಿದ್ದರು. ಕಬ್ಬು ಬೆಳೆಗಾರರು ಬೀದಿಗೆ ಇಳಿಯದಂತೆ ಈ ಮೂಲಕ ಅವರು ನೋಡಿಕೊಂಡಿದ್ದರು.ಆದರೆ ಇಂದು ಸರ್ಕಾರವೇ ಇಲ್ಲದಂತಾಗಿದ್ದು ಏನು ಮಾಡಬೇಕೆಂದೆ ಗೊತ್ತಾಗುತ್ತಿಲ್ಲ ಎಂದರು.
ಜನಸಾಮಾನ್ಯರಿಂದ ಸುಲಿಗೆ: ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಸುವ ಮೂಲಕ ಜನರಿಗೆ ಅನುಕೂಲ ಮಾಡಿದೆ. ಜನಸಾಮಾನ್ಯರಿಗೆ ಇದರಿಂದ ಅನುಕೂಲ ಆಗಿತ್ತು. ಜನರಿಗೆ ತೆರಿಗೆ ಲಾಭ ಸಿಗಬೇಕು ಎಂಬ ಉದ್ದೇಶ ಕೇಂದ್ರದಾಗಿತ್ತು. ಆದರೆ ರಾಜ್ಯ ಸರ್ಕಾರ ತುಪ್ಪದ ದರವನ್ನ ಹೆಚ್ಚಿಸಿ ಜನರನ್ನು ಸುಲಿಗೆ ಮಾಡುತ್ತಿದೆ. ಜನಸಾಮಾನ್ಯರಿಗೆ ಬೇಕಾದ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದರು.ವೋಟ್ ಚೋರಿ ಕಾಂಗ್ರೆಸ್‌ನ ಚುನಾವಣೆ ಗಿಮಿಕ್: ಹರಿಯಾಣದಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮತಗಳ ಕಳವು ಆರೋಪ ಮಾಡಿರುವ ರಾಹುಲ್ ಗಾಂಧಿ ಅವರು ಹಿಟ್ ಅಂಡ್ ರನ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ತನ್ನ ನಿಲುವಿನ ಕುರಿತು ಅಫಿಡವಿಟ್ ಹಾಕಿ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ ರಾಹುಲ್ ಗಾಂಧಿ ಆ ರೀತಿ ನಡೆದುಕೊಳ್ಳುತ್ತಿಲ್ಲ. ಬದಲಿಗೆ ವ್ಯರ್ಥ ಆರೋಪ ಮಾಡುತ್ತಿದ್ದಾರೆ ಎಂದರು. ಅವರಿಗೆ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಕಾಶವೂ ಇದೆ. ಅದರ ಬದಲು ಬಿಹಾರ ಚುನಾವಣೆ ಹೊತ್ತಿನಲ್ಲಿ ಈ ರೀತಿ ಆರೋಪ ಚುನಾವಣೆ ಗಿಮಿಕ್ ಎಂದರು.