ರಾಮಕೃಷ್ಣ ದಾಸರಿ
ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಎಲ್ಲಡೆ ಬರದ ಛಾಯೇ ಆವರಿಸುತ್ತಿದ್ದು, ಮಳೆಯನ್ನೇ ನಂಬಿರುವ ರೈತರು, ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಆರಂಭವಾಗಿದೆ. ಇಷ್ಟು ದಿನ ಮಳೆಗಾಗಿ ಕಾದು ಕುಳಿತಿದ್ದ ಮಂದಿ ಮಾರ್ಬಲವು ಇದೀಗ ದೈವದ ಮೊರೆ ಹೋಗುತ್ತಿದ್ದು, ಕಾಯೋ ಮಳೆರಾಯ ಬಿಡಬೇಡ ಜನರ ಕೈಯ್ಯ ಎನ್ನುವ ಪ್ರಾರ್ಥನಾ ಮಾರ್ದನಿ ಘೋಷವ್ಯಾಖ್ಯಗಳು ಎಲ್ಲೆಡೆ ಮೊಳಗಲಾರಂಭಿಸಿವೆ.
ರೈತರ ಜೊತೆಗೆ ಜನಸಾಮಾನ್ಯರು ಆಗಸದ ಕಡೆಗೆ ಮುಖಮಾಡಿದ್ದು, ಮಳೆಗಾಗಿ ನಾನಾ ರೀತಿಯ ಪೂಜೆ,ಪುನಸ್ಕಾರಗಳು, ವಿಶೇಷ ಪ್ರಾರ್ಥನೆ, ಕಪ್ಪೆಗಳ ಮದುವೆ ಮಾಡಿ ಮೆರವಣಿಗೆ, ಮೌನಾನುಷ್ಠಾನ, ದೇವಸ್ಥಾನಗಳಿಗೆ ಪಾದಯಾತ್ರೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಮುಖಾಂತರ ಮಳೆರಾಯ ಕರುಣಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ಶೇ.42 ರಷ್ಟು ಇದ್ದ ಮಳೆ ಕೊರತೆಯು ಇದೀಗ ಸುಮಾರು ಶೇ.65 ಆಸುಪಾಸಿಗೆ ತಲುಪುತ್ತಿದ್ದು, ತುಂಗಭದ್ರಾ - ಕೃಷ್ಣಾ ನದಿಗಳು ಮತ್ತು ಜಲಾಶಯಗಳಲ್ಲಿಯೂ ನೀರಿನ ಮಟ್ಟವು ನಿಗದಿತ ಪ್ರಮಾಣದಲ್ಲಿ ತಲುಪದ ಕಾರಣಕ್ಕೆ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ರೈತರು ಬಿತ್ತಿದ ಬೆಳೆಗಳನ್ನು ನಾಶ ಪಡಿಸುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳೆಂದು ಜಿಲ್ಲಾಡಳಿತ ಗುರುತಿಸಿ ಪರ್ಯಾಯ ಮೂಲಗಳಿಂದ ನೀರು ಪಡೆದುಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ. ಇತ್ತ ವಿವಿಧ ಸಂಘಟನೆಗಳು ಬರ ಘೋಷಣೆ ಮಾಡಿ, ಸಮೀಕ್ಷೆ ಕೈಗೊಂಡು ಪರಿಹಾರ ನೀಡಲು ಕ್ರಮ ವಹಿಸಬೇಕು. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನು ಎದುರಿಸಲು ಅಗತ್ಯ ಯೋಜನೆಗಳ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಡಳಿತದ ಮುಖಾಂತರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.ಜಿಲ್ಲಾ ಕೇಂದ್ರವಾದ ರಾಯಚೂರು ನಗರ, ಗ್ರಾಮೀಣ ಭಾಗದ ಜೊತೆಗೆ ಸಿಂಧನೂರು, ದೇವದುರ್ಗ, ಮಾನ್ವಿ, ಲಿಂಗಸುಗೂರು, ಸಿರವಾರ, ಅರಕೇರಾ ಮತ್ತು ಮಸ್ಕಿ ತಾಲೂಕುಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು,ವಿವಿಧ ಸಂಘ-ಸಂಸ್ಥೆಗಳು, ರೈತರು, ಮಹಿಳೆಯರು ಹಾಗೂ ಜನಸಾಮಾನ್ಯರು ವಿವಿಧ ರೀತಿಯಲ್ಲಿ ಪೂಜೆಗಳನ್ನು ಮಾಡಿ ಮಳೆರಾಯನಿಗೆ ನಿವೇದನೆಯನ್ನು ಸಮರ್ಪಿಸುತ್ತಿದ್ದಾರೆ.
ಮಳೆಗಾಗಿ ನಿವೃತ್ತ ಶಿಕ್ಷಕನ ಮೌನವ್ರತ:
---
ಮಸ್ಕಿ ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ಮಳೆಗಾಗಿ ಮಹಿಳೆಯರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬರಗಾಲದ ಭೀತಿ ನೀಗಿ, ಉತ್ತಮ ಮಳೆಯಾಗಲಿ ಎಂಬ ಆಶಯದೊಂದಿಗೆ ಬಾವಿಯ ಪವಿತ್ರ ಜಲವನ್ನು ತಂದು ಗ್ರಾಮದ ದುರ್ಗಾದೇವಿ, ಆಂಜನೇಯ, ಬಸವಣ್ಣ, ತಾಯಮ್ಮ, ಸುಂಕಲಮ್ಮ ದೇವಸ್ಥಾನಗಳು ಹಾಗೂ ಅಗಸಿ ಬುಡ್ಡೆಕಲ್ಲಿಗೆ ಭಕ್ತಿಯಿಂದ ಜಲಾಭಿಷೇಕ ಮಾಡಿದರು.ದೇವಸ್ಥಾನಗಳಲ್ಲಿ ಉಡಿ ತುಂಬು ಕಾರ್ಯ ಜರುಗಿತು ಮತ್ತು ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ, ಮಹಾಮಂಗಳಾರತಿ ಮಾಡಲಾಯಿತು.
15ಕೆಪಿಆರ್‌ಸಿಆರ್ 01: ದೇವದುರ್ಗ ತಾಲೂಕಿನ ಗೋಪಾಳಪೂರ ಗ್ರಾಮದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ನಿವೃತ್ತ ಶಿಕ್ಷಕರ ಸದಾಶಿವಪ್ಪ ಮೌನವ್ರತವನ್ನು ವಹಿಸಿದ್ದಾರೆ.