ವೃದ್ಧ ದಂಪತಿ ಮನೆ ಧ್ವಂಸ ಪ್ರಕರಣ: ಕಡಬ ತಾಲೂಕು ಕಚೇರಿ ಎದುರು ಪ್ರತಿಭಟನೆ

KannadaprabhaNewsNetwork | Published : Nov 21, 2024 1:00 AM

ಸಾರಾಂಶ

ಮನೆ ಧ್ವಂಸಗೊಳಿಸಿದ ತಹಸೀಲ್ದಾರ್‌ ಅಮಾನತು ಮಾಡಬೇಕು, ಅಲ್ಲಿಯವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕೌಕ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಪಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ವಾಸವಿದ್ದ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬ ವೃದ್ಧ ದಂಪತಿಯ ಮನೆಯನ್ನು ಕಡಬ ತಹಸೀಲ್ದಾರ್ ಅವರ ಉಪಸ್ಥಿತಿಯಲ್ಲಿ ಜೇಸಿಬಿ ಮೂಲಕ ಧ್ವಂಸಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಬುಧವಾರ ಕಡಬ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ಸಾಮಾಜಿಕ ಹೋರಾಟಗಾರ ನೀತಿ ಸಂಘಟನೆಯ ರಾಜ್ಯಾಧ್ಯಕ್ಷ ಜಯಂತ್ ಟಿ. ನೇತೃತ್ವದಲ್ಲಿ ವೃದ್ಧ ದಂಪತಿ ಹಾಗೂ ಅವರ ಸಹವರ್ತಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವೃದ್ಧ ದಂಪತಿ ತಮ್ಮ ನುಜ್ಜುಗುಜ್ಜಾಗಿರುವ ಪಾತ್ರೆ ಪರಿಕರಗಳು ಹಾಗೂ ಇತರ ಸಾಮಾಗ್ರಿಗಳೊಂದಿಗೆ ಆಗಮಿಸಿ ಉರಿ ಬಿಸಿಲಿನಲ್ಲೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಸಮಾನ ಮನಸ್ಕರು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಜಯಂತ್ ಟಿ., ಕೌಕ್ರಾಡಿ ಗ್ರಾಮದ ಸರ್ವೆ ನಂಬರ್‌ ೧೨೩ ರಲ್ಲಿ ೨೯ ಸೆಂಟ್ಸ್ ಸ್ವಾಧೀನದಲ್ಲಿರುವ ವೃದ್ಧ ದಂಪತಿ ರಾಧಮ್ಮ ಹಾಗೂ ಮತ್ತು ಸ್ವಾಮಿ ಅವರು ವಾಸವಿರುವ ಸುಮಾರು ಹತ್ತು ವರ್ಷ ಹಳೆಯದಾದ ಮನೆಯನ್ನು ಕಾನೂನು ಬಾಹಿರವಾಗಿ, ನೋಟಿಸ್‌ ನೀಡದೆ ಕಡಬ ತಹಸೀಲ್ದಾರ್ ಅವರು ಇಲಾಖಾಧಿಕಾರಿಗಳ ಜೊತೆ ಬಂದು ಪೊಲೀಸ್ ಸಹಕಾರದಲ್ಲಿ ಕೆಡವಿದ್ದಾರೆ. ಇದನ್ನು ಪ್ರಶ್ನಿಸಿದಾಗ ರೇಣುಕಾ ಎಂಬವರ ಹೆಸರಲ್ಲಿ ಮನೆ ತೆರವುಗೊಳಿಸಲು ನ್ಯಾಯಾಲಯದ ಆದೇಶ ಇದೆ, ಆದ್ದರಿಂದ ಈ ಮನೆಯನ್ನು ತೆರವುಗೊಳಿಸುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ. ಇದಕ್ಕೆ ದಾಖಲೆ ತೋರಿಸುವಂತೆ ಕೇಳಿದರೆ ಅವರಲ್ಲಿ ದಾಖಲೆಯೇ ಇಲ್ಲ. ಮನೆ ಕಳೆದುಕೊಂಡು ವೃದ್ಧ ದಂಪತಿ ಬೀದಿ ಪಾಲಾಗಿದ್ದಾರೆ. ಅದೇ ಸ್ಥಳದಲ್ಲಿ ನಿರ್ಮಿಸಿಕೊಡುವುದರ ಜೊತೆಗೆ 10 ಲಕ್ಷ ರು. ಪರಿಹಾರ ನೀಡಬೇಕು, ಮನೆ ನಿರ್ಮಿಸಿಕೊಡುವ ತನಕ ಅವರಿಗೆ ಬದಕಲು ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಮನೆ ಧ್ವಂಸಗೊಳಿಸಿದ ತಹಸೀಲ್ದಾರ್‌ ಅಮಾನತು ಮಾಡಬೇಕು, ಅಲ್ಲಿಯವರೆಗೆ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಿ.ಪಿ.ಎಂ. ಮುಖಂಡ ಬಿ.ಎಂ. ಭಟ್‌, ರಾಧಮ್ಮ ಅವರ ಮನೆಯನ್ನು ಧ್ವಂಸ ಮಾಡಿ ರೇಣುಕಾ ಅವರ ಮನೆಯನ್ನು ಧ್ವಂಸ ಮಾಡಿದ್ದೇವೆ ಎಂದು ಸುಳ್ಳು ವರದಿ ಕೊಡುತ್ತಿರುವ ಕಡಬ ತಹಸೀಲ್ದಾರ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಇಲ್ಲದಿದ್ದರೆ ಅವರ ಸ್ವಂತ ಖರ್ಚಿನಲ್ಲಿ ವೃದ್ದ ದಂಪತಿಗೆ ಮನೆ ನಿರ್ಮಿಸಿಕೊಡಬೇಕು ಎಂದು ತಹಸೀಲ್ದಾರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

ಪ್ರತಿಭಟನೆಯಲ್ಲಿ ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಯುವ ಘಟಕದ ಗ್ರಾಮೀಣ ಅಧ್ಯಕ್ಷ ಎಸ್.ಕೆ. ಹಕೀಂ, ಕೆ.ಆರ್.ಎಸ್. ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್, ದಲಿತ ಹಕ್ಕುಗಳ ಸಮಿತಿಗಳ ಅಧ್ಯಕ್ಷೆ ಈಶ್ವರಿಶಂಕರ್, ದಲಿತ ಮುಖಂಡ ಬಾಬು ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಬಂದೋಬಸ್ತ್‌ ಮಾಡಿದ್ದರು. ತಾಲೂಕು ಕಚೇರಿಗೆ ಹೋಗುವ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಮುಚ್ಚಿದ್ದರು.

ಸಹಾಯಕ ಆಯುಕ್ತರ ಭೇಟಿ, ಭರವಸೆ, ಪ್ರತಿಭಟನೆ ವಾಪಸ್‌: ಪ್ರತಿಭಟನಾಕಾರರ ಪರವಾಗಿ ಬಂದಿದ್ದ ಬಿ.ಎಂ. ಭಟ್ ಸೇರಿದಂತೆ ಹಲವರು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ವೇಳೆ ಎ.ಸಿ. ಒಂದು ವಾರದೊಳಗೆ ಮನೆ ಧ್ವಂಸ ಪ್ರಕರಣವನ್ನು ತನಿಖೆ ನಡೆಸುತ್ತೇನೆ, ನಮ್ಮ ಕಡೆಯಿಂದ ತಪ್ಪು ಆಗಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ, ಅಲ್ಲದೆ ೯೪ಸಿಯಡಿಯಲ್ಲಿ ಹಕ್ಕುಪತ್ರ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದು, ಪ್ರತಿಭನೆ ವಾಪಸ್‌ ಪಡೆಯುತ್ತಿದ್ದೇವೆ ಎಂದು ಕಡಬದಲ್ಲಿ ಜಯಂತ್.ಟಿ. ಮಾಧ್ಯಮಕ್ಕೆ ತಿಳಿಸಿದರು. ಒಂದು ವೇಳೆ ಎಸಿ ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಎಸಿ ಕಚೇರಿ ಮುಂಭಾಗವೇ ಪ್ರತಿಭಟನೆ ನಡೆಸುತ್ತೇವೆ ಎಂದರು.

Share this article