ಹುಬ್ಬಳ್ಳಿ:
ಮಂಗಳವಾರ ಸಂಜೆ ಇಲ್ಲಿನ ಹಳೇಹುಬ್ಬಳ್ಳಿಯ ಚೆನ್ನಪೇಟ, ಹಿರೇಪೇಟ, ನೇಕಾರ ನಗರ, ಕೃಷ್ಣಾಪುರ ಓಣಿ, ಹಿರೇಪೇಟೆ ಓಣಿ, ಇಂಡಿ ಪಂಪ್, ಅಂಬೇಡ್ಕರ್ ನಗರ, ಘೋಡ್ಕೆ ಓಣಿ, ಕೇಶ್ವಾಪುರದ ಕೆಲವು ಭಾಗ, ಗೋಪನಕೊಪ್ಪದ ಕೆಲವು ಭಾಗ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ರತಿ-ಕಾಮಣ್ಣರ ಮೂರ್ತಿಗಳನ್ನು ಬುಧವಾರ ಬೆಳಗ್ಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ಬಳಿಕ ದಹನ ಮಾಡಿ ಓಕುಳಿ ಆಡಿದರು. ಹಲವೆಡೆ ಕರಿಬಂಡಿ ಹಾಗೂ ಚಕ್ಕಡಿಗಳಲ್ಲಿ ರತಿ- ಕಾಮಣ್ಣರ ಮೂರ್ತಿಗಳನ್ನಿರಿಸಿ ಯುವಕರೇ ಚಕ್ಕಡಿ ಹಾಗೂ ಕರಿಬಂಡಿ ಎಳೆಯುವ ಮೂಲಕ ಮೆರವಣಿಗೆಗೆ ಮೆರುಗು ತಂದರು. ಹಲವೆಡೆ ಆಯೋಜಿಸಲಾಗಿದ್ದ ರೇನ್ ಡ್ಯಾನ್ಸ್‌ನಲ್ಲಿ ಯುವಕ-ಯುವತಿಯರು, ಮಕ್ಕಳು ಕುಣಿದು ಕುಪ್ಪಳಿಸಿದರು.
ಭಾವೈಕ್ಯತೆಯ ಬಣ್ಣದೋಕುಳಿ:ಹಳೇ ಹುಬ್ಬಳ್ಳಿ ಹಾಗೂ ಆನಂದ ನಗರದಲ್ಲಿ ಬುಧವಾರ ನಡೆದ ರತಿ-ಕಾಮಣ್ಣ ಮೂರ್ತಿಗಳ ಮೆರವಣಿಗೆಯಲ್ಲಿ ಮುಸಲ್ಮಾನ ಬಾಂಧವರು ಪಾಲ್ಗೊಂಡು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ರಂಜಾನ್ ತಿಂಗಳ ಉಪವಾಸ ವ್ರತಾಚರಣೆ ಆರಂಭವಾಗಿದ್ದರೂ ರಂಗಪಂಚಮಿಯಲ್ಲಿ ಮುಸಲ್ಮಾನರು ಪಾಲ್ಗೊಂಡು ಹಿಂದು ಬಾಂಧವರಿಗೆ ಬಣ್ಣ ಹಚ್ಚಿ ಸಂಭ್ರಮಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ಹಲವೆಡೆ ಮುಸಲ್ಮಾನ್ ಬಾಂಧವರಿಂದ ಮಸೀದಿಗಳ ಬಳಿ, ಹಲವೆಡೆ ತಂಪು ಪಾನೀಯ ವ್ಯವಸ್ಥೆ ಮಾಡಿರುವುದು ಕಂಡುಬಂದಿತು.