ಹಳೇ ರೈಲ್ವೆ ಯೋಜನೆಗಳು ಶೀಘ್ರ ಪೂರ್ಣ: ಸಚಿವ ಸೋಮಣ್ಣ

KannadaprabhaNewsNetwork | Updated : May 08 2025, 12:30 PM IST

ಸಾರಾಂಶ

ರಾಜ್ಯದಲ್ಲಿ ನಾಲ್ಕೈದು ದಶಕದಿಂದ ನನೆಗುದಿಗೆ ಬಿದ್ದಿದ್ದ ₹39 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

  ದಾವಣಗೆರೆ : ರಾಜ್ಯದಲ್ಲಿ ನಾಲ್ಕೈದು ದಶಕದಿಂದ ನನೆಗುದಿಗೆ ಬಿದ್ದಿದ್ದ ₹39 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗದಗ-ಕುಷ್ಟಗಿ ರೈಲ್ವೆ ಯೋಜನೆಯನ್ನು ಮೇ 15ರಂದು ಲೋಕಾರ್ಪಣೆ ಮಾಡಲಿದ್ದು, 2028ರೊಳಗೆ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಂಧನೂರು- ರಾಯಚೂರು, ಲೋಕಾಪುರ- ಕಾಚಿಗುಡಿ ರೈಲ್ವೆ ಯೋಜನೆ ಒಂದೂವರೆ ತಿಂಗಳಲ್ಲೇ ಪೂರ್ಣಗೊಳ್ಳಲಿದೆ. 2026, 2027 ಹಾಗೂ 2028ರೊಳಗೆ ರಾಜ್ಯದ ಎಲ್ಲ ಹಳೆಯ ರೈಲ್ವೇ ಯೋಜನೆಗಳನ್ನೂ ಪೂರ್ಣಗೊಳಿಸಲಿದ್ದೇವೆ ಎಂದರು.

ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗದ ಯೋಜನೆಯ ಶೇ.85ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿದೆ. ಬಾಕಿ ಶೇ.15ರಷ್ಟು ಭೂ ಸ್ವಾಧೀನ ಸಹ ಮುಗಿಸಲಿದ್ದೇವೆ. ಮೇ 17ರಂದು ರೈಲ್ವೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಸಹ ಇದೇ ವಿಚಾರಕ್ಕಾಗಿ ಕರೆಯಲಾಗಿದೆ. ಸಂಸದ ಗೋವಿಂದ ಕಾರಜೋಳ, ರೈಲ್ವೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು ಎಂದರು.

ಇನ್ನು ಮುಂದೆ ಅಪ್ರೋಚ್ ರಸ್ತೆಗಳ ನಿರ್ಮೂಣಕ್ಕೆ ರಾಜ್ಯ ಸರ್ಕಾರವೇ ಭೂ ಸ್ವಾಧೀನ ಮಾಡಬೇಕು. ಉಳಿದ ಎಲ್ಲ ಪ್ರಕ್ರಿಯೆ ಕೇಂದ್ರ ಸರ್ಕಾರ ಮಾಡುತ್ತದೆ. ರೈಲ್ವೆ ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಆದ್ಯತೆ ನೀಡಲಾಗಿದೆ. ಲೆವೆಲ್ ಕ್ರಾಸಿಂಗ್ ಮುಕ್ತ ಮಾಡುವಂತೆ ಪ್ರಧಾನಿ ಆದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಲೆವೆಲ್ ಕ್ರಾಸಿಂಗ್ ಇರುವಲ್ಲಿ ಹಂತ ಹಂತವಾಗಿ ಕೆಳಸೇತುವೆ/ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದರು.

ಕವಚ್‌ ಯೋಜನೆ:

ಈಗ ಅಪಘಾತಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿವೆ. ಅಪಘಾತ ತಡೆಗೆ ಕವಚ್ ಯೋಜನೆ ರೂಪಿಸಲಾಗಿದೆ. 1 ಲಕ್ಷ ಕಿಮೀ ದೂರ ಹಳಿ ಇದ್ದು, ಕರ್ನಾಟಕದಲ್ಲಿ 1ರಿಂದ 2 ಸಾವಿರ ಕಿಮೀ ದೂರದಷ್ಟು ಪ್ರಾಯೋಗಿಕವಾಗಿ ಕವಚ್ ಯೋಜನೆ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಇದರಿಂದ ಎಷ್ಟೇ ವೇಗದಲ್ಲಿ ರೈಲುಗಳು ಬಂದರೂ 50 ಮೀಟರ್ ಅಂತರದಲ್ಲಿ ಅವು ತಮ್ಮಷ್ಟಕ್ಕೆ ತಾವೇ ನಿಲ್ಲುತ್ತವೆ. ಇದರಿಂದ ಅಪಘಾತಗಳನ್ನು, ಸಾವು ನೋವುಗಳನ್ನು, ನಷ್ಟವನ್ನೂ ತಡೆಗಟ್ಟಬಹುದು ಎಂದು ಅವರು ವಿವರಿಸಿದರು.

ಕರ್ನಾಟಕ ಅಭ್ಯರ್ಥಿಗಳಲ್ಲಿ ಆಸಕ್ತಿ ಇಲ್ಲ:

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವಾರು ಬಾರಿ ಮನವಿ ಮಾಡಿದ್ದರಿಂದ ಕನ್ನಡವೂ ಸೇರಿದಂತೆ 10 ಸ್ಥಳೀಯ ಭಾಷೆಗಳಲ್ಲೇ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಬೇರೆ ರಾಜ್ಯಗಳ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಲು ಆಸಕ್ತಿ ತೋರಿಸುವಂತೆ ಕರ್ನಾಟಕದ ಅಭ್ಯರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಬರೆದು, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕು ಎಂದು ಸಚಿವ ವಿ.ಸೋಮಣ್ಣ ಕರೆ ನೀಡಿದರು. 

Share this article