ಫೈರ್ ಕ್ಯಾಂಪ್, ವಾಣಿಜ್ಯ ಚಟುವಟಿಕೆಗಳಿಂದ ಕಡಲಾಮೆಗಳ ಸಂಖ್ಯೆ ಇಳಿಮುಖ
ತಾಲೂಕಿನ ಅಪ್ಸರಕೊಂಡ ಬೀಚ್‌ನಲ್ಲಿ ಆಲಿವ್ ರಿಡ್ಲೆ ಆಮೆ ಮತ್ತೆ ಮೊಟ್ಟೆ ಇಡಲು ಪ್ರಾರಂಭಿಸಿದೆ.
ಕಳೆದ ಕೆಲವು ವರ್ಷಗಳಿಂದ ಮರೆಯಾಗಿದ್ದ ಅಪರೂಪದ ಆಲಿವ್ ರಿಡ್ಲೆ (Olive Ridley) ಜಾತಿಯ ಕಡಲಾಮೆಗಳು ಮತ್ತೆ ಇಲ್ಲಿ ಮೊಟ್ಟೆ ಇಡಲು ಆರಂಭಿಸಿರುವುದು ಪರಿಸರ ಪ್ರೇಮಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.ಅಪ್ಸರಕೊಂಡ ಕಡಲ ತೀರವು ದಶಕಗಳಿಂದಲೂ ಆಲಿವ್ ರಿಡ್ಲೆ ಕಡಲಾಮೆಗಳ ನೆಚ್ಚಿನ ತಾಣವಾಗಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಇಲ್ಲಿ ಕಡಲಾಮೆಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು. ಇದಕ್ಕೆ ಮುಖ್ಯ ಕಾರಣ ಪ್ರವಾಸಿಗರ ಹಾವಳಿ ಮತ್ತು ವಾಣಿಜ್ಯ ಚಟುವಟಿಕೆಗಳು. ಅದರಲ್ಲೂ ವಿಶೇಷವಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಳಿಗಾಗಿ ತೀರದಲ್ಲಿ ನಡೆಸಲಾಗುತ್ತಿದ್ದ ''''''''ಫೈರ್ ಕ್ಯಾಂಪ್''''''''ಗಳು ಕಡಲಾಮೆಗಳ ಹಾದಿಗೆ ಮುಳುವಾಗಿದ್ದವು. ಕಡಲಾಮೆಗಳು ಮೊಟ್ಟೆ ಇಡಲು ಶಾಂತ ಹಾಗೂ ಕತ್ತಲೆಯ ಪರಿಸರವನ್ನು ಬಯಸುತ್ತವೆ. ಬೆಂಕಿಯ ಬೆಳಕು ಮತ್ತು ಜನರ ಗದ್ದಲದಿಂದಾಗಿ ಈ ಸೂಕ್ಷ್ಮ ಜೀವಿಗಳು ತೀರಕ್ಕೆ ಬರುವುದನ್ನೇ ನಿಲ್ಲಿಸಿದ್ದವು.
ಫೈರ್ ಕ್ಯಾಂಪ್‌ಗೆ ವಿರೋಧ:ಈ ಪರಿಸ್ಥಿತಿ ಗಮನಿಸಿದ ಸ್ಥಳೀಯರು ಈ ವರ್ಷ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದ್ದರು. ಕಡಲತೀರದಲ್ಲಿ ಫೈರ್ ಕ್ಯಾಂಪ್ ನಡೆಸದಂತೆ ತೀವ್ರವಾಗಿ ವಿರೋಧಿಸಿದ್ದರು. ಸ್ಥಳೀಯರ ಜಾಗೃತಿಯ ಫಲವಾಗಿ ಈ ಬಾರಿ ಫೈರ್ ಕ್ಯಾಂಪ್‌ಗಳು ನಿಂತವು. ಇದರ ನೇರ ಪರಿಣಾಮ ಎಂಬಂತೆ, ಕಡಲತೀರದಲ್ಲಿ ಮತ್ತೆ ಶಾಂತಿ ನೆಲೆಸಿತು ಮತ್ತು ವರ್ಷಗಳ ನಂತರ ಆಲಿವ್ ರಿಡ್ಲೆ ಕಡಲಾಮೆಗಳು ಸುರಕ್ಷಿತವಾಗಿ ದಡಕ್ಕೆ ಬರಲಾರಂಭಿಸಿವೆ.
ಹಿಂದೆಲ್ಲ ಕಡಲಾಮೆ ಮೊಟ್ಟೆ ಇಟ್ಟಿರುವ ವಿಷಯ ಗಮನಕ್ಕೆ ಬಂದ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಈ ಮೊಟ್ಟೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ನಾಯಿ ಅಥವಾ ಇತರ ಜೀವಿಗಳಿಂದ ರಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಮರಿಗಳಾದ ತಕ್ಷಣ ಅವುಗಳನ್ನು ಅತ್ಯಂತ ಜಾಗರೂಕತೆಯಿಂದ ಸಮುದ್ರಕ್ಕೆ ಬಿಡಲಾಗುತ್ತಿತ್ತು. ಇದೀಗ ಕಡಲಾಮೆಗಳು ತೀರಕ್ಕೆ ಬಂದು ಹೋಗುತ್ತಿರುವುದನ್ನು ಗಮನಿಸಿದ ಶ್ರೀಧರ ಖಾರ್ವಿ, ಜಗದೀಶ ರಾಮ ಖಾರ್ವಿ, ರವಿ ಮೇಸ್ತ ಇವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಕರಾವಳಿ ತೀರಕ್ಕೆ ಮಾದರಿಪ್ರವಾಸೋದ್ಯಮದ ಹೆಸರಿನಲ್ಲಿ ಪ್ರಕೃತಿಯ ಸಹಜತೆ ಹಾಳು ಮಾಡಿದರೆ ನಾವು ಇಂತಹ ಅಪರೂಪದ ಜೀವಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಸ್ಥಳೀಯರು ತೋರಿದ ಈ ಪರಿಸರ ಪ್ರೇಮ ಮತ್ತು ಕಾಳಜಿ ಇಡೀ ಕರಾವಳಿ ತೀರಕ್ಕೆ ಮಾದರಿಯಾಗಿದೆ. ಪ್ರಕೃತಿ ಮತ್ತು ಮಾನವ ಸಹಬಾಳ್ವೆಯಿಂದ ಮಾತ್ರ ಇಂತಹ ಅದ್ಭುತಗಳನ್ನು ಉಳಿಸಿಕೊಳ್ಳಲು ಸಾಧ್ಯ.ಹಲವು ವರ್ಷಗಳ ಹಿಂದೆ ಈ ಪ್ರದೇಶವು ಕಡಲಾಮೆಗಳ ಸಂರಕ್ಷಣಾ ತಾಣವೆಂದು ಗುರುತಿಸಲಾಗಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಪ್ರವಾಸೋದ್ಯಮದ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಕಡಲ ತೀರ ಬಳಸಿಕೊಂಡು ಬೆಂಕಿ ಹಾಕಿ ಫೋಟೋಶೂಟ್ ಮಾಡಲಾಗುತ್ತಿತ್ತು. ಇದರಿಂದ ಇಲ್ಲಿ ಕಡಲಾಮೆಗಳು ಇಟ್ಟ ಮೊಟ್ಟೆಗಳು ಹಾನಿಯಾಗಿ ಮರಿಗಳು ಸತ್ತು ಹೋಗಿವೆ. ಇದಕ್ಕೆ ವಿರೋಧಿಸಿದ್ದರಿಂದ ಪೈರ್ ಕ್ಯಾಂಪ್ ನಿಷೇಧಿಸಲಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಕಡಲಾಮೆಗಳ ಸಂರಕ್ಷಣೆ ಕ್ರಮವಹಿಸಬೇಕು ಹಾಗೂ ಇಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸ್ಥಳೀಯರಾದ ರವಿ ನಾಗೇಶ್ ಮೇಸ್ತ ಹೇಳಿದ್ದಾರೆ.