ಓಂಕಾರೇಶ್ವರ ದೇಗುಲ ಆಸ್ತಿಗಳು ಸ್ವಾಧೀನಕ್ಕೆ ಬಂದಿಲ್ಲ: ನಿರಂಜನ

KannadaprabhaNewsNetwork |  
Published : Sep 29, 2025, 12:05 AM IST
ದೇಗುಲ  | Kannada Prabha

ಸಾರಾಂಶ

ಒಂಕಾರೇಶ್ವರ ದೇಗುಲಕ್ಕೆ ದಾನ ನೀಡಿದ ಹಲವು ಆಸ್ತಿಗಳು ದೇಗುಲದ ಸ್ವಾಧೀನಕ್ಕೆ ಬಂದಿಲ್ಲ ಎಂದು ಹಿರಿಯ ವಕೀಲ ನಿರಂಜನ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಒಳಪಡುವ ಓಂಕಾರೇಶ್ವರ ದೇಗುಲಕ್ಕೆ ದಾನ ನೀಡಿದ ಹಲವು ಆಸ್ತಿಗಳು ದೇಗುಲದ ಸ್ವಾಧೀನಕ್ಕೆ ಬಂದಿಲ್ಲ ಎಂದು ಹಿರಿಯ ವಕೀಲ ಹಾಗೂ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯ ನಿರಂಜನ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ತಾಲೂಕಿನ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1956ರಲ್ಲಿ ಮಹಿಳೆಯೊಬ್ಬರು ಸುಮಾರು 39 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಇದುವರೆಗೆ ದೇವಾಲಯದ ಸ್ವಾಧೀನಕ್ಕೆ ಸಿಗಲಿಲ್ಲ. ಜತೆಗೆ ಮಹದೇವಪೇಟೆಯಲ್ಲಿ ದೊರಾಬ್ಜಿ ದಾರಾಶಾಹಿ ಎಂಬುವವರು 1969ರಲ್ಲಿ 7.50 ಸೆಂಟ್‌ನಲ್ಲಿರುವ ಜಾಗವನ್ನು ದಾನಪತ್ರವಾಗಿ ಓಂಕಾರೇಶ್ವರ, ಇಗ್ಗುತಪ್ಪ ಹಾಗೂ ಭಗಂಡೇಶ್ವರ ದೇಗುಲಕ್ಕೆ ಮಾಡಿಕೊಟ್ಟಿದ್ದರು. ಈ ಕಟ್ಟಡದ ಒಟ್ಟು ಮೌಲ್ಯದಲ್ಲಿ ಭಗಂಡೇಶ್ವರ ದೇಗುಲಕ್ಕೆ ಶೇ.50, ಇಗ್ಗುತ್ತಪ್ಪ ಮತ್ತು ಓಂಕಾರೇಶ್ವರ ದೇಗುಲಕ್ಕೆ ತಲಾ ಶೇ.25ರಷ್ಟು ಸಿಗಬೇಕಿತ್ತು. ಆದರೆ, ಅದು ಸಹ ಇನ್ನೂ ನಮ್ಮ ಸುಪರ್ದಿಗೆ ಬಂದಿಲ್ಲ. ಈ ಕುರಿತು ಕಾನೂನು ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು. ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚುಮ್ಮಿದೇವಯ್ಯ ಮಾತನಾಡಿ, ಓಂಕಾರೇಶ್ವರ ದೇವಾಲಯ ಕೊಡಗಿನ ರಾಜ 2ನೇ ಲಿಂಗರಾಜ ಒಡೆಯರ್ ಅವರಿಂದ ನಿರ್ಮಾಣವಾಯಿತು. ದೇವಾಲಯವು ಕೊಡಗಿನ ಇತಿಹಾಸಕ್ಕೆ ಬೆಸೆದುಕೊಂಡಿದ್ದು, ಮಾತ್ರವಲ್ಲದೆ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರಸ್ತುತ ದೇವಾಲಯ ವ್ಯವಸ್ಥಾಪನ ಸಮಿತಿ 2025ರ ಮಾರ್ಚ್ ತಿಂಗಳ ಅಂತ್ಯಕ್ಕೆ ರಚನೆಯಾಗಿದ್ದು, ಓಂಕಾರೇಶ್ವರ ದೇವಾಲಯ, ಆಂಜನೇಯ ದೇವಾಲಯ ಮತ್ತು ಕೋಟೆ ಗಣಪತಿ ದೇವಾಲಯಗಳ ಚಿನ್ನ, ಬೆಳ್ಳಿ ಹಾಗೂ ಇತರೆ ಆಭರಣಗಳ ಮೌಲ್ಯಮಾಪನ ಮಾಡಲಾಗಿದೆ. ಈ ಸಂದರ್ಭ ಸಮಿತಿ ಸದಸ್ಯರು, ಅರ್ಚಕರು, ದೇವಾಲಯ ಸಿಬ್ಬಂದಿ, ಆರಕ್ಷಕರ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಸಾರ್ವಜನಿಕರ ಸಮ್ಮುಖದಲ್ಲಿ ವಿಡಿಯೋ ಚಿತ್ರಿಕರಣ ಮೂಲಕ ಮಾಡಲಾಗಿದೆ ಎಂದು ವಿವರಿಸಿದರು.ಓಂಕಾರೇಶ್ವರ ದೇವಾಲಯದಲ್ಲಿ 22 ಗ್ರಾಂ 100 ಮಿಲಿ ಚಿನ್ನ, 83 ಕೆಜಿ 472 ಗ್ರಾಂ ಬೆಳ್ಳಿ, 40 ಕೆಜಿ 810 ಗ್ರಾಂ ಹಿತ್ತಾಳೆ, 3 ಕೆಜಿ ಕಂಚು ಇದೆ. ಆಂಜನೇಯ ದೇವಾಲಯದಲ್ಲಿ 1 ಗ್ರಾಂ ಚಿನ್ನ, 19 ಕೆಜಿ 609 ಗ್ರಾಂ ಬೆಳ್ಳಿ ಇದೆ. ಕೋಟೆ ಗಣಪತಿ ದೇವಾಲಯದಲ್ಲಿ 120 ಗ್ರಾಂ 840 ಮಿಲಿ ಚಿನ್ನ, 10 ಕೆಜಿ 255 ಗ್ರಾಂ ಬೆಳ್ಳಿ ಇರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.ಸಮಿತಿ ಸದಸ್ಯರಾದ ಜಿ.ರಾಜೇಂದ್ರ ಮಾತನಾಡಿ, ಆಂಜನೇಯ ಮತ್ತು ಕೋಟೆ ಗಣಪತಿ ದೇವಸ್ಥಾನದ ಅಭಿವೃದ್ಧಿ ವಿಚಾರವಾಗಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ತಾಂಬೂಲ ಪ್ರಶ್ನೆ ಮಾಡಿದ ಸಂದರ್ಭ ದೇವಾಲಯದ ಈಶಾನ್ಯ ಮೂಲೆಯಲ್ಲಿ ನವಗ್ರಹ ಪ್ರತಿಷ್ಠಾಪನೆ ಮಾಡುವಂತೆ ತಂತ್ರಿಗಳು ತಿಳಿಸಿದ್ದಾರೆ. ಅದರಂತೆ ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯಕ್ಕೆ ಹೊಂದಿಕೊಂಡಿರುವ ಪ್ರವೇಶ ದ್ವಾರದ ಕಮಾನಿನ ಅಭಿವೃದ್ಧಿಗೆ ಮುಂದಾಗಿದೆ ಎಂದ ಅವರು, ಇತ್ತೀಚೆಗೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಅವರನ್ನು ಶಾಸಕ ಮಂತರ್‌ಗೌಡ ಅವರ ನೇತೃತ್ವದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಕಾರ್ಯಗಳಿಗೆ 5 ಕೋಟಿಯ ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಅಂಬೆಕಲ್ಲು ಕುಶಾಲಪ್ಪ, ವೀಣಾಕ್ಷಿ ಉಪಸ್ಥಿತರಿದ್ದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ