ಕನ್ನಡ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕವಿ ಸರ್ವಜ್ಞ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದ ಶಿವಶರಣರು ವಚನಗಳ ಮೂಲಕ ಹೇಗೆ ಸಮಾಜದ ಸುಧಾರಣೆಗೆ ಶ್ರಮಿಸಿದರೋ, ಅದೇ ಹಾದಿಯಲ್ಲಿ 16ನೇ ಶತಮಾನದಲ್ಲಿ ಮಹಾಕವಿ ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಜನಮಾನಸವನ್ನು ತಲುಪಿ ಸಮಾಜದ ಓರೆಕೋರೆಗಳನ್ನು ತಿದ್ದಿದ್ದಾರೆ ಎಂದರು.ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತವಾಗಿದ್ದ ಕಾಲದಲ್ಲಿ, ಸರ್ವಜ್ಞರು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ತ್ರಿಪದಿಗಳನ್ನು ರಚಿಸಿದರು. ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆ ಮತ್ತು ಜಾತಿ ಪದ್ಧತಿಯನ್ನು ಅವರು ನೇರವಾಗಿ ಖಂಡಿಸಿದರು. ಸರ್ವಜ್ಞ ಎಂಬುದು ಅಹಂಕಾರದಿಂದ ಬಂದ ಹೆಸರಲ್ಲ, ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವಾದವರು ಎಂದು ಬಣ್ಣಿಸಿದರು.
ಇಂದಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ ಕ್ರೌರ್ಯ ಮತ್ತು ಅಪರಾಧಗಳು ಹೆಚ್ಚುತ್ತಿವೆ. ತಂದೆ-ತಾಯಿಯನ್ನು ಕೊಲ್ಲುವಂತಹ ಹೀನ ಕೃತ್ಯಗಳು ನಡೆಯುತ್ತಿರುವುದು ವಿಷಾಧನೀಯ. ಮಕ್ಕಳಿಗೆ ಕೇವಲ ಅಂಕಗಳಿಕೆಯ ಶಿಕ್ಷಣ ನೀಡದೆ, ಸರ್ವಜ್ಞರ ತತ್ವಗಳನ್ನೊಳಗೊಂಡ ಸಂಸ್ಕಾರಯುತ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ಬಿ.ಟಿ.ಕುಮಾರಸ್ವಾಮಿ ಹೇಳಿದರು.ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸುರೇಶ್.ಬಿ ಮಾತನಾಡಿ, ಮಹಾಕವಿ ಸರ್ವಜ್ಞರು ಕೇವಲ ಒಬ್ಬ ಕವಿಯಲ್ಲ, ಮಹಾನ್ ದಾರ್ಶನಿಕರೂ ಹೌದು. ಅವರ ತ್ರಿಪದಿಗಳು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಪ್ರತಿಪಾದಿಸಿದರು.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ? ಎಂದು ಪ್ರಶ್ನಿಸುವ ಮೂಲಕ, ಮನುಷ್ಯನ ಜನ್ಮಕ್ಕಿಂತ ಅವನ ಗುಣ ಮತ್ತು ನಡತೆ ಮುಖ್ಯ ಎಂಬುದನ್ನು ಸರ್ವಜ್ಞರು ಅಂದೇ ಸಾರಿದ್ದರು. ಶ್ರೇಷ್ಠತೆ ಎಂಬುದು ವ್ಯಕ್ತಿಯ ಜ್ಞಾನದಲ್ಲಿರಬೇಕೇ ಹೊರತು ಜಾತಿಯಲ್ಲಿಲ್ಲ ಎಂದು ಅವರು ತಿಳಿಸಿದ್ದರು. ಸರ್ವಜ್ಞರು ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ಓದಿದವರಲ್ಲ. ಅವರು ಲೋಕವನ್ನೇ ಗುರುವನ್ನಾಗಿ ಮಾಡಿಕೊಂಡವರು. ಸಮಾಜದಲ್ಲಿನ ಅಸಮಾನತೆ, ಡಂಭಾಚಾರದ ಭಕ್ತಿ ಮತ್ತು ಮೂಢನಂಬಿಕೆಗಳ ವಿರುದ್ಧ ತಮ್ಮ ವಚನಗಳ ಮೂಲಕ ಚಾಟಿ ಬೀಸಿದ್ದಾರೆ ಎಂದರು.ಚಳ್ಳಕೆರೆ ತಾಲೂಕಿನ ಬೋಸೇದೇವರಹಟ್ಟಿ ಮಂಜಣ್ಣ ಮತ್ತು ತಂಡ ನಾಡಗೀತೆ ಹಾಡುವುದರೊಂದಿಗೆ ಗೀತಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಸ್ವಾಗತಿಸಿದರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ನಿರೂಪಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಉಪವಿಭಾಗಾಧಿಕಾರಿಗಳ ಕಚೇರಿ ತಹಸೀಲ್ದಾರ್ ನರಸಿಂಹಮೂರ್ತಿ, ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಕುಂಬಾರ ಗುಂಡಯ್ಯ ಸ್ವಾಮೀಜಿ, ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಎಸ್.ಯರ್ರಿಸ್ವಾಮಿ, ಕಾರ್ಯದರ್ಶಿಗಳಾದ ವೈ. ಮೃತ್ಯುಂಜಯ, ಎ.ಸಿದ್ದೇಶ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್.ಬೈಲಮ್ಮ, ಕಾರ್ಯದರ್ಶಿ ಹೇಮಾವತಿ ಇತರರು ಹಾಜರಿದ್ದರು.