ಕನ್ನಡಪ್ರಭ ವಾರ್ತೆ ಸುರಪುರ
ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ತ್ರಿಪದಿ ಸರ್ವಜ್ಞನವರ ಜಯಂತಿ ಸರಳವಾಗಿ ಆಚರಿಸಲಾಯಿತು.ಈ ವೇಳೆ ಮಾತನಾಡಿದ ತಹಸೀಲ್ದಾರ್ ಕೆ.ವಿಜಯಕುಮಾರ, ಲೋಕ ಸಂಚಾರ ಮಾಡುತ್ತಾ ಎಲ್ಲರೊಳಗಿರುವ ಪದಗಳನ್ನು ಕಲಿಯುತ್ತಾ, ಆಡುವ ಭಾಷೆಯಲ್ಲಿ ತ್ರಿಪದಿ ಸಾಲಿನಲ್ಲಿ ಕವಿ ಸರ್ವಜ್ಞನವರು ವಚನ ರಚಿಸಿ ಸಮಾಜದಲ್ಲಿನ ಮೌಢ್ಯತೆ, ಜಾತೀಯತೆ ತೊಲಗಿಸಲು ಶ್ರಮಿಸಿದರು. ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ, ಹಾವೇರಿ ಜಿಲ್ಲೆ ಹಿರೆಕೇರೂರ ತಾಲೂಕಿನ ಮಾಸೂರಿನಲ್ಲಿ ಜನಸಿದ ಸರ್ವಜ್ಞ ಕವಿ ತ್ರಿಪದಿಗಳಲ್ಲಿ ಸಮಾಜದ ಅನಿಷ್ಟ ಪದ್ಧತಿಗಳನ್ನು ಟೀಕಿಸಿದರು. ಈ ಮೂಲಕ ಸಮಾಜ ತಿದ್ದಿ ತೀಡಿ, ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾದರು. ಸಾಮಾಜಿಕ ವ್ಯವಸ್ಥೆ ಒಳಿತು, ಕೆಡುಕು ಸೂಕ್ಷ್ಮವಾಗಿ ತ್ರಿಪದಿಗಳಲ್ಲಿ ಪ್ರತಿಪಾದಿಸಿದ್ದಾರೆ. ಅವರ ತ್ರಿಪದಿಗಳಲ್ಲಿನ ವಿಚಾರಧಾರೆ, ಆದರ್ಶನೀಯ ಅಂಶಗಳು ಅದ್ಭುತವಾದವು. ಸರಳವಾಗಿರುವ ತ್ರಿಪದಿಗಳು ಓದುಗನ ಮನದಾಳದಲ್ಲಿ ನೆಲೆಸುತ್ತವೆ. ಸಕಲ ಜ್ಞಾನದ ಸಂಗಮವೇ ಆಗಿದ್ದ ಅವರು ಸಮಾಜ ಎಚ್ಚರಿಸಿದರು ಎಂದು ಹೇಳಿದರು.ತ್ರಿಪದಿಗಳಲ್ಲಿ ನೀತಿ, ಸತ್ಯ, ತತ್ವ, ವಿವೇಕ, ವಿಡಂಬನೆ ಇದೆ. ಸರ್ವಜ್ಞ ಜಯಂತಿ ಇನ್ನೂ ತುಂಬಾ ಅದ್ಧೂರಿಯಾಗಿ ಆಚರಿಸುವ ಮೂಲಕ ಅವರ ಸಂದೇಶ ಎಲ್ಲರಿಗೂ ತಲುಪಿಸುವ ಕಾರ್ಯ ತಾಲೂಕು ಆಡಳಿತ ಮಾಡಬೇಕು ಎಂದು ಮನವಿ ಮಾಡಿದರು.
ಉಪ ತಹಸೀಲ್ದಾರ್ ರೇವಪ್ಪ ತೆಗ್ಗಿನಮನಿ, ಚುನಾವಣಾ ಶಿರಸ್ತೇದಾರ್ ಅವಿನಾಶ ಪಡಶೆಟ್ಟಿ, ಸಮಾಜದ ಮುಖಂಡರಾದ ನಗರಸಭೆ ಸದಸ್ಯ ಜುಮ್ಮಣ್ಣ ಕೆಂಗುರಿ, ಮಲ್ಲಣ್ಣ ಹುಬ್ಬಳ್ಳಿ, ಈರಣ್ಣ ಕುಂಬಾರ, ಸಾಹೇಬಗೌಡ ಕುಂಬಾರ, ಅಮರೇಶ ಕುಂಬಾರ, ಭೀಮರಾಯ ಕುಂಬಾರಪೇಟೆ, ರವಿ ಕುಂಬಾರಪೇಟೆ, ಆನಂದ ಕುಂಬಾರ, ಮಡಿವಾಳಪ್ಪ ಕುಂಬಾರ, ನಿಂಗಣ್ಣ ವಡಗೇರಿ, ಅಂಬ್ರೇಶ್ ಪಾನಶಾಪ್, ರವಿ ಕುಂಬಾರ, ಸಿದ್ದಪ್ಪ ದಾರಿಮನಿ ಸೇರಿದಂತೆ ಇತರರಿದ್ದರು.