ತ್ರಿಪದಿ ಮೂಲಕ ಸಮಾಜ ಪರಿವರ್ತಿಸಿದ ಸರ್ವಜ್ಞ: ಎಸ್‌.ಎಸ್‌. ಪಾಟೀಲ

KannadaprabhaNewsNetwork | Published : Feb 26, 2024 1:38 AM

ಸಾರಾಂಶ

ಮೂರು ಸಾಲಿನ ತ್ರಿಪದಿಯನ್ನೇ ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಕೆ ಮಾಡಿಕೊಂಡು ಸರಳವಾದ ನುಡಿಗಟ್ಟುಗಳಲ್ಲಿ ಸಮಾಜವನ್ನು ಪರಿವರ್ತಿಸಲು ಹೊರಟ ಮಹಾಸಂತ ಸರ್ವಜ್ಞ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಕನ್ನಡ ನಾಡು ಕಂಡ ಮಹಾ ದಾರ್ಶನಿಕ, ಕಂಡದ್ದನ್ನು ಕಂಡ ಹಾಗೆ ಕೆಂಡದಂತೆ ಅಭಿವ್ಯಕ್ತಿಸುವ ಮಹಾನಿಷ್ಠುರವಾದಿ ಅರಮನೆ, ಗುರುಮನೆಗಳ ಹಂಗಿಲ್ಲದೆ ಲೋಕ ಸಂಚಾರಿಯಾಗಿ ಕನ್ನಡ ನಾಡಿನಲ್ಲಿ ನಡೆದಾಡಿದ ಬಿಚ್ಚು ಮಾತಿನ ಕೆಚ್ಚೆದೆಯ ಕರ್ನಾಟಕದ ಕೊಡಲಿ ಸರ್ವಜ್ಞ. ಮೂರು ಸಾಲಿನ ತ್ರಿಪದಿಯನ್ನೇ ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಕೆ ಮಾಡಿಕೊಂಡು ಸರಳವಾದ ನುಡಿಗಟ್ಟುಗಳಲ್ಲಿ ಸಮಾಜವನ್ನು ಪರಿವರ್ತಿಸಲು ಹೊರಟ ಮಹಾಸಂತ ಸರ್ವಜ್ಞ ಎಂದು ಸರ್ವಜ್ಞ ಸ್ಮಾರಕ ಸಮಿತಿಯ ಅಧ್ಯಕ್ಷ ಎಸ್.ಎಸ್. ಪಾಟೀಲ ಹೇಳಿದರು.

ಸರ್ವಜ್ಞ ಸ್ಮಾರಕ ಸಮಿತಿ ಹಾಗೂ ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ನಿಯಮಿತ ಅಧೀನ ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ನಡೆದ ಸರ್ವಜ್ಞ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಹಿಂಡನಗಲಿದ ಮದಗಜದಂತೆ ಕರದಿ ಕಪ್ಪರ ತೊಟ್ಟು ಹಿರಿದೊಂದು ನಾಡುಂಟು ತಿರಿವರಿಂ ಸಿರಿವಂರ‍್ಯಾರು ಎಂದು ತನ್ನ ಆತ್ಮಾಭಿಮಾನವನ್ನೇ ಕೆಣಕಿಕೊಂಡು ಲೌಖಿಕ ಬದುಕಿನಲ್ಲಿ ಸಮಾಜವಾದಿ, ಆಧ್ಯಾತ್ಮಿಕ ಜೀವನದಲ್ಲಿ ಮಹಾ ಅನುಭಾವಿ ದಾರ್ಶನಿಕ. ಕ್ರಾಂತಿಕಾರಿ ಬಂಡಾಯ ಮನೋಧರ್ಮದ ಮನೋಭಾವುಳ್ಳ ಈತ ಸಮಾಜದಲ್ಲಿ ಕಣ್ಣಿಗೆ ಕಂಡದ್ದನ್ನು ತನ್ನ ಮಾತಿನ ಮೂಲಕ ಛಾಟಿ ಬೀಸಿ ಆ ಮೂಲಕ ಕನ್ನಡ ಭಾಷೆ ಹಾಗೂ ಆ ಭಾಷೆಯ ಅನಂತ ಸಾಧ್ಯತೆಗಳನ್ನು ವಿಸ್ತರಿಸುತ್ತ ಯಾವುದೇ ಜಾತಿ, ಮತ, ಧರ್ಮ ಇವುಗಳ ಬಂಧನಕ್ಕೆ ಅಂಟಿಕೊಳ್ಳದೆ ಜಾತಿ, ಧರ್ಮಗಳನ್ನು ಮೀರಿದ ಮಹಾ ಮಾನವತಾವಾದಿ ಸರ್ವಜ್ಞ. ಭೌದ್ಧಿಕ ಶ್ರೀಮಂತಿಕೆಯನ್ನು ಜಾತಿಯಿಂದ ಅಳತೆಗೋಲು ಮಾಡುವ ಸರ್ಕಾರಗಳಿಂದ ಇಂಥಹ ಮಹಾನ್ ಪ್ರತಿಭೆಯ ಕುರಿತು ಈಗಾಗಲೇ ಆಗಬೇಕಾಗಿರುವ ಸರ್ವಜ್ಞ ಪ್ರಾಧಿಕಾರ, ಸರ್ವಜ್ಞ ಸಂಶೋಧನಾ ಕೇಂದ್ರ, ಸರ್ವಜ್ಞ ಅಧ್ಯಯನ ಪೀಠಗಳು ರಚನೆಯಾದರೂ ಗಗನ ಕುಸುಮವಾಗಿಯೇ ಉಳಿದಿರುವುದು ವಿಪರ್ಯಾಸವೇ ಸರಿ. ಇನ್ನಾದರು ಸರ್ಕಾರ ಎಚ್ಚೆತ್ತು ಈ ಮಹಾ ಚೇತನದ ಆಶಯದ ಅಭಿವ್ಯಕ್ತಿಯನ್ನು ಕನ್ನಡ ನಾಡಿಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

ಸಮಾರಂಭದ ಮುಖ್ಯ ಅತಿಥಿ ಮಹೇಂದ್ರ ಬಡಳ್ಳಿ ಮಾತನಾಡಿ, ತ್ರಿಪದಿ ಎಂಬ ಮೂರು ಸಾಲಿನ ಪದ್ಯಗಳಿಂದ ಕನ್ನಡ ಸಾಹಿತ್ಯದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿ ತನ್ನ ನೇರ, ನಿಷ್ಠುರ ಮಾತುಗಳಿಂದ ಸಮಾಜ ಪರಿವರ್ತನೆ ಮಾಡಲು ಲೋಕ ಸಂಚಾರಿಯಾದ ಜಂಗಮ ಕವಿ ಸರ್ವಜ್ಞನೆಂದು ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಮುಖ್ಯಸ್ಥ ಕೆ.ಆರ್. ಲಮಾಣಿ, ಬಿ.ವಿ. ಸನ್ನೇರ, ಸತೀಶ ಬಣಕಾರ, ಹಿರಿಯ ಉಪನ್ಯಾಸಕ ಕೆ.ಎಚ್. ಮಾವಿನತೋಪ, ಸಿ.ಎಸ್. ಮರಿಗೂಳಪ್ಪನವರ, ಎಸ್.ಸಿ. ಬಸರೀಹಳ್ಳಿ, ಎಂ.ಜಿ. ಕಡದಕಟ್ಟಿ, ತನುಜಾ ಉಪ್ಪಾರ, ಸಹಶಿಕ್ಷಕ ಆರ್.ಎಚ್. ಬೆಟ್ಟಳ್ಳೇರ, ಪಿ.ಎಂ. ಡಮ್ಮಳ್ಳಿ ಮತ್ತು ಬೋಧಕ ಬೋಧಕೇತರ ಸಿಬ್ಬಂದಿ, ಸಹಸ್ರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಾಚಾರ್ಯ ಹಾಗೂ ಸರ್ವಜ್ಞ ಸ್ಮಾರಕ ಸಮಿತಿ ಕಾರ್ಯದರ್ಶಿ ಡಾ. ಎಸ್.ಬಿ. ಚನ್ನಗೌಡ್ರ ಸರ್ವರನ್ನು ಪ್ರಾಸ್ತಾವಿಕ ಮಾತನಾಡಿದರು. ಆರ್.ಎಂ. ಕರೇಗೌಡ್ರ ನಿರೂಪಿಸಿ, ವಂದಿಸಿದರು.

Share this article