ಶಿರಸಿ: ಅಖಿಲ ಹವ್ಯಕ ಮಹಾ ಸಭಾದಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ಸಮಾವೇಶ ಜೂ. ೧೬ರಂದು ಬೆಳಗ್ಗೆ ೭ರಿಂದ ರಾತ್ರಿ ೮ ಗಂಟೆ ವರೆಗೆ ನಗರದ ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಹವ್ಯಕ ಮಹಾ ಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ತಿಳಿಸಿದರು.
ಯೋಗ ಮಂದಿರದಲ್ಲಿ ಬೆಳಗ್ಗೆ ೭ರಿಂದ ಶಿಕ್ಷಕರಿಂದ ಗಾಯತ್ರಿ ಜಪಾನುಷ್ಠಾನ, ಗಾಯತ್ರಿ ಹವನ, ಶಿಕ್ಷಕಿಯರಿಂದ ಕುಂಕುಮಾರ್ಚನೆ, ಭಗವದ್ಗೀತಾ ಪಠಣ ಜರುಗಲಿದೆ. ತೋಟಗಾರ್ಸ್ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೯.೩೦ರಿಂದ ಉದ್ಘಾಟನೆ ಸಮಾರಂಭ ನಡೆಯಲಿದೆ. ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸುವರು. ಉದ್ಘಾಟನೆಯನ್ನು ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ನೆರವೇರಿಸುವರು. ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ, ಮಹಾಸಭೆ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಭಾಗವಹಿಸುವರು. ವಿದ್ವಾಂಸರಾದ ವಿಶ್ವನಾಥ ಭಟ್ಟ ನೀರಗಾನ ಅವರು ಗಾಯತ್ರಿ ಮಹತ್ವದ ಕುರಿತು ಮಾತನಾಡಲಿದ್ದಾರೆ.
ಬೆಳಗ್ಗೆ ೧೧ಕ್ಕೆ ಖ್ಯಾತ ವಿದ್ವಾಂಸ, ಕರ್ನಾಟಕ ಹರಿದಾಸ ಅಕಾಡೆಮಿ ಅಧ್ಯಕ್ಷ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ಆಶುಭಾಷಣ, ಪ್ರಬಂಧ, ಬಳ್ಳಿ ರಂಗೋಲಿ, ಕಸದಿಂದ ರಸ, ಹವ್ಯಕ ಸಂಪ್ರದಾಯಗೀತೆಗಳ ಸ್ಪರ್ಧಾ ಸೌರಭ ೧೨ರಿಂದ ನಡೆಯಲಿದೆ.ಜೂ. ೧೦ರೊಳಗೆ ಮೊ. ೯೪೮೦೨೧೧೧೨೫ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಹವ್ಯಕ ಸಂಸ್ಕಾರಗಳಿಂದ ಸಾಮಾಜಿಕ ಸಮಸ್ಯೆಗಳ ಪರಿಹಾರ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಮಧ್ಯಾಹ್ನ ೨ರಿಂದ ಒನ್ ಮಿನಿಟ್ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ೨.೩೦ರಿಂದ ಸಾಹಿತ್ಯ ಚುಟುಕು ಗೋಷ್ಠಿ, ೩ರಿಂದ ಭಾರತ ಸಂಸ್ಕೃತಿ ಪರಂಪರೆ ಉಳಿಸುವಲ್ಲಿ ಇಂದಿನ ಶಿಕ್ಷಕರ ಪಾತ್ರದ ಕುರಿತು ವಿ. ಅನಂತಮೂರ್ತಿ ಭಟ್ಟ ಯಲುಗಾರ ಉಪನ್ಯಾಸ ನೀಡಲಿದ್ದಾರೆ.
ಶಿಕ್ಷಕರಿಗೆ ಸನ್ಮಾನ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ತಮ್ಮಣ್ಣ ಬೀಗಾರ, ಜಿ.ಜಿ. ಹೆಗಡೆ ಬಾಳಗೋಡ, ಆರ್.ಎಸ್. ಹೆಗಡೆ ಭೈರುಂಬೆ, ಶ್ರೀಪಾದ ಭಟ್ಟ, ಡಿ.ಪಿ. ಹೆಗಡೆ, ಕೆ.ಎಲ್. ಭಟ್ಟ, ನಾರಾಯಣ ಭಾಗವತ, ರಾಜ್ಯ ಪ್ರಶಸ್ತಿ ಪಡೆದ ಎನ್.ಎಸ್. ಭಟ್ಟ, ಸತೀಶ ಯಲ್ಲಾಪುರ, ಕೆ.ಎ. ಹೆಗಡೆ, ವಿ.ಟಿ. ಹೆಗಡೆ, ಪ್ರಭಾಕರ ಭಟ್ಟ, ನಾಗಪತಿ ಹೆಗಡೆ, ಜಿ.ಎಸ್. ಭಟ್ಟ, ಎಸ್.ಎನ್. ಭಾಗವತ್ ಅವರನ್ನು ಗೌರವಿಸಲಾಗುತ್ತಿದೆ. ಬಳಿಕ ಯಕ್ಷ ಭಾರತಿ ಕಲಾ ವೇದಿಕೆಯಿಂದ ಶಿಕ್ಷಕರ ಬಳಗದಿಂದ ತಾಳಮದ್ದಲೆ ನಡೆಯಲಿದೆ ಎಂದರು.