22ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ರಾಜ್ಯಮಟ್ಟದ ವಕೀಲರ ಸಮಾವೇಶ

KannadaprabhaNewsNetwork |  
Published : Sep 14, 2024, 01:46 AM IST
13ಕೆಡಿವಿಜಿ4, 5-ದಾವಣಗೆರೆಯಲ್ಲಿ ಶುಕ್ರವಾರ ಕೂಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ಸೆ.22ರಂದು ರಾಜ್ಯಮಟ್ಟದ ವಕೀಲರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲ ಸಂಗಮದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.

- 2 ಎ ಸಿಗೋವರೆಗೂ ಹೋರಾಟ ನಿಲ್ಲದು, 7ನೇ ಹಂತದ ಹೋರಾಟ ಶುರು: ಜಯ ಮೃತ್ಯುಂಜಯ ಶ್ರೀ

- ಪಂಚಮಸಾಲಿ ಸಮಾಜದ ನೆತ್ತಿಗೆ ತುಪ್ಪ ಸವರಿದ ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರ: ಆರೋಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ಸೆ.22ರಂದು ರಾಜ್ಯಮಟ್ಟದ ವಕೀಲರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲ ಸಂಗಮದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ವಕೀಲರ ಸಮಾವೇಶ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸಮಾಜ ವಕೀಲರು ಭಾಗವಹಿಸಲಿದ್ದಾರೆ. ಸಮಾಜದ ಮುಖಂಡರು, ಗಣ್ಯರು ಸಹ ಆಗಮಿಸಲಿದ್ದು, 2 ಎ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವಂತಹ ಸಮಾವೇಶ ಇದಾಗಲಿದೆ ಎಂದರು.

ನೆತ್ತಿಗೆ ತುಪ್ಪ ಸವರಿದ ಬೊಮ್ಮಾಯಿ ಸರ್ಕಾರ:

ಬಿಜೆಪಿ ಸರ್ಕಾರವಿದ್ದಾಗ ದೊಡ್ಡಮಟ್ಟದ ಹೋರಾಟಗಳನ್ನು ನಡೆಸಿದ್ದೆವು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜದ ನೆತ್ತಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ನಮ್ಮ ಯಾವುದೇ ಬೇಡಿಕೆ, ಹೋರಾಟಕ್ಕೂ ಸ್ಪಂದಿಸುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಸರ್ಕಾರ ಇದ್ದಾಗಲೂ ಹೋರಾಟ:

ಕಾಂಗ್ರೆಸ್ ಸರ್ಕಾರ ಇದೆಯೆಂಬ ಕಾರಣಕ್ಕೆ ನಾವು ಹೋರಾಟ ಮಾಡುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ. ನಮ್ಮ ಹೋರಾಟವನ್ನು ಯಾವತ್ತೂ ನಿಲ್ಲಿಸಿಲ್ಲ. ಯಾವುದೇ ಸರ್ಕಾರ ಇದ್ದಾಗಲೂ ನಮ್ಮ ಹೋರಾಟವು ನಿಲ್ಲಿಸಿಲ್ಲ. ಮೀಸಲಾತಿಗಾಗಿ ರಸ್ತೆ ತಡೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಆದರೂ, ಕಾಂಗ್ರೆಸ್ ಸರ್ಕಾರ ಸೌಜನ್ಯಕ್ಕೂ ಸ್ಪಂದಿಸಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಕ್ಕೆ ಬಲ ನೀಡಲು ವಕೀಲರ ಸಮಾವೇಶ:

ನನೆಗುದಿಗೆ ಬಿದ್ದಿರುವ ಮೀಸಲಾತಿ ಹೋರಾಟವು ಯಾವುದೇ ಕಾರಣಕ್ಕೂ, ಎಂತಹದ್ದೇ ಪರಿಸ್ಥಿತಿಯಲ್ಲೂ ನಿಲ್ಲುವುದಿಲ್ಲ. ಈ ಬಗ್ಗೆ ಸರ್ಕಾರ, ಸಚಿವರು, ಶಾಸಕರ ಮನೆ ಮನೆಗಳಿಗೆ ಭೇಟಿ ನೀಡಿ, ಸದನದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಧ್ವನಿ ಎತ್ತುವಂತೆ ಮನವಿ ಮಾಡಿದ್ದೆವು. ಆದರೂ, ಅದ್ಯಾವುದೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ನಮ್ಮ ಹೋರಾಟ ಅನಿವಾರ್ಯವಾಗಿದೆ. ಹೋರಾಟಕ್ಕೆ ತೀವ್ರತೆ ನೀಡುವ ಅಗತ್ಯವೂ ಇದೆ. ಈ ಹಿನ್ನೆಲೆಯಲ್ಲಿ ವಕೀಲರ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಸಮಾಜದ ಮುಖಂಡರು, ವಕೀಲರಾದ ಆನಂದಪ್ಪ, ರವಿಶಂಕರ, ಬಸವರಾಜ, ಗುರುಮೂರ್ತಿ, ಯೋಗೇಶ, ಮುರುಗೇಶ, ಕೊಟ್ರೇಶ ಕಾರಿಗನೂರು ಇತರರು ಇದ್ದರು.

- - -

ಬಾಕ್ಸ್‌ * 17ರಂದು ಕಲಬುರಗಿಯಲ್ಲಿ ಸಿಎಂಗೆ ಮತ್ತೆ ಮನವಿ ವಿಧಾನಸಭೆ ಅಧಿವೇಶನ ವೇಳೆ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಕೀಲರು ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ಮನವಿ ಅರ್ಪಿಸಿದ್ದಾರೆ. ಆಗ ನಮ್ಮ ವಕೀಲರ ಹೋರಾಟದ ಶಕ್ತಿ ತಿಳಿದಿದೆ. ವಕೀಲರ ಸಂಘಟನೆ ಮಾಡುತ್ತಿದ್ದೇವೆ. ಸೆ.17ರಂದು ಕಲಬುರಗಿಯಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಅವರಿಗೆ ಮತ್ತೊಮ್ಮೆ ಮನವಿ ಮಾಡಲಿದ್ದೇವೆ. ಬೆಳಗಾವಿ ವಕೀಲರ ರಾಜ್ಯ ಸಮಾವೇಶದಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಿ, 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದ 7ನೇ ಹಂತದ ಹೋರಾಟ ಶುರು ಮಾಡಲಿದ್ದೇವೆ ಎಂದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಸಿದರು.

- - - -13ಕೆಡಿವಿಜಿ4, 5:

ದಾವಣಗೆರೆಯಲ್ಲಿ ಶುಕ್ರವಾರ ಕೂಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ