ಈ ಹಿಂದೆ ಶೇ.೮.೫ ಇಳುವರಿ ಆಧಾರದ ಮೇಲೆ ಎಫ್ಆರ್ಪಿ ದರ ನಿಗದಿಪಡಿಸಲಾಗುತ್ತಿತ್ತು. ಇದೀಗ ಶೇ.೯.೫ ಇಳುವರಿಗೆ ದರ ನಿಗದಿ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ, ಈ ಹಿಂದೆ ಮೈಷುಗರ್ನಲ್ಲಿ ಶೇ.೮.೫ ಇಳುವರಿ ಬರುತ್ತಿತ್ತು. ಸದ್ಯ ಕಾರ್ಖಾನೆಯಲ್ಲಿ ಇಳುವರಿ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಶೇ.೮.೫ರ ಇಳುವರಿ ಆಧರಿಸಿಯೇ ಎಫ್ಆರ್ಪಿ ದರ ನಿಗದಿಪಡಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಬ್ಬು ಬೆಳೆಗಾರರ ಸಮಸ್ಯೆ, ಎಸ್ಎಪಿ ದರ ನಿಗದಿ, ಬರ ಪರಿಹಾರ ಹೆಚ್ಚಳ, ಮೈಷುಗರ್ ಸಮಸ್ಯೆ, ಹಾಲಿನ ಬೆಲೆ ಹೆಚ್ಚಳ, ಕಾವೇರಿ ಸಮಸ್ಯೆ, ಸಹಕಾರಿ ಕಾಯ್ದೆ ತಿದ್ದುಪಡಿ, ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಅ. ೨೩ರಂದು ಬೃಹತ್ ರೈತರೊಂದಿಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಈಗಾಗಲೇ ಉತ್ತರ ಕರ್ನಾಟಕ ಭಾಗದ ರೈತರು ಕಬ್ಬಿನ ದರ ಹೆಚ್ಚಳಕ್ಕೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೂ ಸರ್ಕಾರ ಸಮಸ್ಯೆ ಬಗೆಹರಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಹಿಂದೆ ಶೇ.೮.೫ ಇಳುವರಿ ಆಧಾರದ ಮೇಲೆ ಎಫ್ಆರ್ಪಿ ದರ ನಿಗದಿಪಡಿಸಲಾಗುತ್ತಿತ್ತು. ಇದೀಗ ಶೇ.೯.೫ ಇಳುವರಿಗೆ ದರ ನಿಗದಿ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ, ಈ ಹಿಂದೆ ಮೈಷುಗರ್ನಲ್ಲಿ ಶೇ.೮.೫ ಇಳುವರಿ ಬರುತ್ತಿತ್ತು. ಸದ್ಯ ಕಾರ್ಖಾನೆಯಲ್ಲಿ ಇಳುವರಿ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಶೇ.೮.೫ರ ಇಳುವರಿ ಆಧರಿಸಿಯೇ ಎಫ್ಆರ್ಪಿ ದರ ನಿಗದಿಪಡಿಸುವಂತೆ ಒತ್ತಾಯಿಸಿದರು.
ರೈತರಿಗೆ ನೀಡಬೇಕಾದ ೫೦ ರು. ಹಣ ಪಾವತಿಸುವುದರ ವಿರುದ್ಧ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ರಾಜ್ಯದ ಆಡಳಿತಗಾರರು ಇದನ್ನು ತೆರವುಗೊಳಿಸಲು ಮನಸ್ಸು ಮಾಡುತ್ತಿಲ್ಲ. ಎಲ್ಲ ರಾಜಕೀಯ ಪಕ್ಷಗಳವರು ಸಕ್ಕರೆ ಕಾರ್ಖಾನೆ ಮಾಲೀಕರಾಗಿರುವುದರಿಂದ ರೈತರ ಸಮಸ್ಯೆ ಅವರಿಗೆ ಬೇಕಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಕೇಂದ್ರ ಸರ್ಕಾರ ಟನ್ ಕಬ್ಬಿಗೆ ೫೫೦೦ ರು. ದರ ನಿಗದಿ ಮಾಡಬೇಕು. ಇದರ ಮೇಲೆ ರಾಜ್ಯಸರ್ಕಾರ ಸಲಹಾ ಬೆಲೆ ನೀಡಬೇಕು. ತಮಿಳುನಾಡಿನಲ್ಲಿ ಶೇ.೯ ಇಳುವರಿಗೆ ಕೇಂದ್ರಸರ್ಕಾರ ೪ ಸಾವಿರ ರು.ದರ ನೀಡಲಾಗುತ್ತಿದೆ. ಜೊತೆಗೆ ಅಲ್ಲಿನ ಸರ್ಕಾರ ೮೦೦ ರು. ಹಣವನ್ನು ಹೆಚ್ಚುವರಿಯಾಗಿ ನೀಡುತ್ತಿದೆ. ಇದೇ ಮಾದರಿ ದರವನ್ನು ಕರ್ನಾಟಕದಲ್ಲೂ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಮುಖಂಡರಾದ ಬೋರಾಪುರ ಶಂಕರೇಗೌಡ, ಕೆ.ಟಿ. ಗೋವಿಂದೇಗೌಡ, ಬಸವರಾಜು, ಮಂಜುನಾಥ್, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಇತರರು ಗೋಷ್ಟಿಯಲ್ಲಿದ್ದರು.
೫೦ ಕೆರೆಗಳಿಗೆ ನಾಲಾ ಸಂಪರ್ಕ ಜಾಲ: ದರ್ಶನ್ ಪುಟ್ಟಣ್ಣಯ್ಯ
ಮೇಲುಕೋಟೆ ಕ್ಷೇತ್ರದಲ್ಲಿ ಸುಮಾರು ೧೮೦ ರಿಂದ ೨೦೦ ಕೆರೆಗಳಿದ್ದು, ಈ ಪೈಕಿ ೫೦ ಕೆರೆಗಳಿಗೆ ಕಾವೇರಿ ನಾಲಾ ಜಾಲದಿಂದ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಕೆರೆಗಳಿಗೂ ನೇರ ಸಂಪರ್ಕ ಕಲ್ಪಿಸಿ ನೀರು ತುಂಬಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಮಗೆ ಅರಿವಿದೆ. ಅಲ್ಲಿನ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾದರೆ ಸಹಕಾರ ಇಲಾಖೆಯಲ್ಲಿರುವ ಕಾಯಿದೆಗಳು ಬದಲಾಗಬೇಕು. ಆರ್ಥಿಕ ಶಿಸ್ತನ್ನು ತರಬೇಕಾದರೆ ಕಾಯಿದೆಯಲ್ಲಿರುವ ಲೋಪ-ದೋಷಗಳನ್ನು ನಿವಾರಿಸಬೇಕು. ಇಲ್ಲದಿದ್ದರೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಇಟ್ಟುಕೊಂಡು ಇನ್ನಿಲ್ಲದ ಸಮಸ್ಯೆಗಳನ್ನು ಹುಟ್ಟುಹಾಕಲಾಗುತ್ತದೆ. ರಾಜಕೀಯ ಬೆರೆತು ಅಭಿವೃದ್ಧಿ ನೆಲಕಚ್ಚುತ್ತದೆ. ಈ ಬಗ್ಗೆ ಸರ್ಕಾರದ ಮಂತ್ರಿಗಳು, ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಹಕಾರ ಇಲಾಖೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಕಬ್ಬು ಮತ್ತು ಇತರೆ ರೈತರ ಸಮಸ್ಯೆಗಳ ಕುರಿತಂತೆ ದೆಹಲಿಯಲ್ಲಿ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಸಚಿವರಾದ ಲಕ್ಷ್ಮಣ ಸವದಿ, ಲಮಾಣಿ ಹಾಗೂ ಅಧಿಕಾರಿಗಳು ಕೇಂದ್ರದ ಸಚಿವರು, ಅಧಿಕಾರಿಗಳೊಂದಿಗೆ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ. ಸಮಸ್ಯೆಗಳನ್ನು ಮುಂದಿಟ್ಟು ಪರಿಹಾರಕ್ಕೆ ಒತ್ತಾಯ ಮಾಡಿದ್ದೇವೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂಧನೆ ವ್ಯಕ್ತವಾಗಿದೆ ಎಂದರು.
ಕಾವೇರಿ ನದಿ ನೀರಿನ ಸಮರ್ಪಕ ಬಳಕೆಗೂ ಚರ್ಚೆ ನಡೆಸಲಾಗಿದೆ. ಜತೆಗೆ ಪ್ರಸ್ತುತ ರಾಜ್ಯವನ್ನು ಬರ ಕಾಡುತ್ತಿದೆ. ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮುಂದಿನ ವರ್ಷವೂ ಇದಕ್ಕಿಂತ ಭೀಕರ ಬರಗಾಲ ಎದುರಿಸಬೇಕಾಗುತ್ತದೆ ಎಂಬ ಮಾಹಿತಿ ಇದೆ. ಹಾಗಾಗಿ ಸರ್ಕಾರ ಈಗಲೇ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು. ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದರ ಮಾಹಿತಿ ನೀಡಬೇಕು. ಎಂದು ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.