ದಲಿತರಿಗೆ ಮರಿ ಖರ್ಗೆ ಕೊಡುಗೆ ಏನು?: ಡಾ.ಕೆ.ಅನ್ನದಾನಿ

KannadaprabhaNewsNetwork |  
Published : Oct 20, 2026, 01:15 AM IST
೧೯ಕೆಎಂಎನ್‌ಡಿ-೨ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು. | Kannada Prabha

ಸಾರಾಂಶ

ಕೆಪಿಎಸ್ಸಿ, ನೈಸ್ ಹಗರಣದ ಬಗ್ಗೆ ಕುಮಾರಸ್ವಾಮಿ ಕೇಳಿರುವ ಪ್ರಶ್ನೆಗಳಿಗೆ ಪ್ರಿಯಾಂಕ್ ಖರ್ಗೆ ಬಳಿ ಉತ್ತರವಿಲ್ಲ. ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿ ತಾನೇ ಎಂದು ಆತನೇ ಒಪ್ಪಿಕೊಂಡಿದ್ದರೂ ಇದುವರೆಗೂ ಬಂಧಿಸಿಲ್ಲ. ಕೇವಲ ಬಾಲಿಶ ಹೇಳಿಕೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿರುವ ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿರುವುದಕ್ಕೆ ಅರ್ಹತೆಯೇ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಾಯಿ ಮಾತಿನಲ್ಲಿ ದಲಿತರ ಬಗ್ಗೆ ಕಾಳಜಿ ವ್ಯಕ್ತಪಡಿಸುವ ಮರಿ ಖರ್ಗೆ (ಪ್ರಿಯಾಂಕ್ ಖರ್ಗೆ) ದಲಿತ ಸಮುದಾಯಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಖಾರವಾಗಿಯೇ ಪ್ರಶ್ನಿಸಿದರು.

ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದೊಳಗಿರುವ ವರ್ಚಸ್ಸಿನ ಕಾರಣದಿಂದಾಗಿ ಪ್ರಿಯಾಂಕ್ ಖರ್ಗೆಗೆ ಸಚಿವ ಪಟ್ಟ ದೊರಕಿದೆಯೇ ಹೊರತು ಅವರ ವೈಯಕ್ತಿಕ ವರ್ಚಸ್ಸನ್ನು ನೋಡಿ ಕೊಟ್ಟಿಲ್ಲ. ಮಲ್ಲಿಕಾರ್ಜುನ ಖರ್ಗೆ ರಾಜಕೀಯವಾಗಿ ಬೆಳವಣಿಗೆ ಸಾಧಿಸಿದ್ದನ್ನು ಮಗ ನೋಡಿ-ಕೇಳಿ ತಿಳಿದುಕೊಳ್ಳಲಿ. ಅಪ್ಪನಿಗಿರುವ ಮನಸ್ಥಿತಿ ಮಗನಿಗಿಲ್ಲ. ಏಕೆಂದರೆ, ಮಗ ಬಡತನದಲ್ಲಿ ಬೆಳೆಯಲಿಲ್ಲ. ಹಾಗಾಗಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸುವ ನೈತಿಕತೆಯೂ ಪ್ರಿಯಾಂಕ್ ಖರ್ಗೆಗೆ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನೇರವಾಗಿ ಟೀಕಿಸಿದರು.

ಕೆಪಿಎಸ್ಸಿ, ನೈಸ್ ಹಗರಣದ ಬಗ್ಗೆ ಕುಮಾರಸ್ವಾಮಿ ಕೇಳಿರುವ ಪ್ರಶ್ನೆಗಳಿಗೆ ಪ್ರಿಯಾಂಕ್ ಖರ್ಗೆ ಬಳಿ ಉತ್ತರವಿಲ್ಲ. ಸ್ಟಿಂಗ್ ಆಪರೇಷನ್ ಮಾಡಿದ ವ್ಯಕ್ತಿ ತಾನೇ ಎಂದು ಆತನೇ ಒಪ್ಪಿಕೊಂಡಿದ್ದರೂ ಇದುವರೆಗೂ ಬಂಧಿಸಿಲ್ಲ. ಕೇವಲ ಬಾಲಿಶ ಹೇಳಿಕೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿರುವ ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿರುವುದಕ್ಕೆ ಅರ್ಹತೆಯೇ ಇಲ್ಲ ಎಂದು ಛೇಡಿಸಿದರು.

ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ್ದ ಸಾವಿರಾರು ಕೋಟಿ ರು. ಹಣ ಹಾಗೂ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಇಟ್ಟಿದ್ದ ೧೪೦ ಕೋಟಿ ರು. ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದರೂ ಆ ಬಗ್ಗೆ ಪ್ರಿಯಾಂಕ್ ಖರ್ಗೆ ಒಮ್ಮೆಯೂ ಕ್ಯಾಬಿನೇಟ್‌ನಲ್ಲಿ ಪ್ರಸ್ತಾಪಿಸಲಿಲ್ಲ. ಇವರಿಗೆ ದಲಿತಪರವಾದ ಕಾಳಜಿ ಇದೆಯೇ. ಸಮುದಾಯದ ನಾಯಕನಾಗಿ ಅವರನ್ನು ಅಲ್ಲಿಗೆ ನಾವು ಕಳುಹಿಸಿರುವುದಾದರೂ ಏಕೆ. ಅಧಿಕಾರದ ದರ್ಪ ತೋರುವುದಕ್ಕಾ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಒಂದೇ ವಾರದಲ್ಲಿ ಮಾದಿಗನ ಮನೆಯಲ್ಲಿ ವಾಸ್ತವ್ಯ ಹೂಡಿದರು. ೨೦೦೪ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಸೋನಿಯಾಗಾಂಧಿ ಬಳಿ ಬೇಡಿಕೆ ಇಟ್ಟಿದ್ದೇ ದೇವೇಗೌಡರು. ದಲಿತ ಕೇರಿಗೆ ಸಿಮೆಂಟ್ ರಸ್ತೆ ಮಾಡಿಸಿದವರು ಕುಮಾರಸ್ವಾಮಿ. ಬೋನ್‌ಮ್ಯಾರೋ ರೋಗಕ್ಕೆ ತುತ್ತಾಗಿದ್ದ ದಲಿತ ಕುಟುಂಬದ ಮಗುವಿನ ಚಿಕಿತ್ಸೆಗೆ ೩೦ ಲಕ್ಷ ನೀಡಿ ಉಳಿಸಿದವರು ಕುಮಾರಸ್ವಾಮಿ. ಇಂತಹ ಯಾವುದಾದರೂ ಒಂದು ಕಾರ್ಯವನ್ನು ಸಮುದಾಯದವರಿಗಾಗಿ ಪ್ರಿಯಾಂಕ್ ಖರ್ಗೆ ಮಾಡಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯನವರ ವಿರುದ್ಧ ಸ್ಟಿಂಗ್ ಮಾಡಿದ ವ್ಯಕ್ತಿಯನ್ನು ಬಂಧಿಸುವ ತಾಕತ್ತನ್ನು ಸರ್ಕಾರ ಪ್ರದರ್ಶಿಸುತ್ತಿಲ್ಲ. ಒಬ್ಬ ಹಿರಿಯ ನಾಯಕರಿಗೆ ಆಡಳಿತಾರೂಢ ಸರ್ಕಾರ ನೀಡುವ ಗೌರವ ಇದೇನಾ. ಸ್ಟಿಂಗ್‌ ಮಾಡಿರುವ ವ್ಯಕ್ತಿಯೇ ಸ್ಟಿಂಗ್‌ ಮಾಡಿದ್ದು ನಾನೇ ಎಂದು ಹೇಳಿದರೂ ಆ ವ್ಯಕ್ತಿಯನ್ನು ಬಂಧಿಸದಿರುವುದನ್ನು ನೋಡಿದರೆ ಇಡೀ ಸರ್ಕಾರವೇ ಆತನ ಸ್ಟಿಂಗ್‌ಗೆ ಒಳಗಾಗಿರುವಂತೆ ಕಂಡುಬರುತ್ತಿದೆ. ಗೃಹ ಸಚಿವರಾಗಿ ಸರಿಯಾದ ಕ್ರಮದಲ್ಲಿ ತನಿಖೆಯನ್ನು ನಡೆಸದೆ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಾ ಪ್ರಿಯಾಂಕ್ ಖರ್ಗೆಯೇ ದಿಕ್ಕುತಪ್ಪಿ ಹೋಗಿದ್ದಾರೆ ಎಂದು ಕುಟುಕಿದರು.

ಪ್ರಿಯಾಂಕ್ ಖರ್ಗೆ ಸಚಿವರಾಗಿ ಉದ್ಧಟತನವನ್ನು ಪ್ರದರ್ಶಿಸುತ್ತಿರುವರೇ ಹೊರತು ಹಗರಣಗಳ ಕುರಿತ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಅಧಿಕಾರಿಗಳ ಮೂಲಕ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಎಲ್ಲವನ್ನೂ ಮುಚ್ಚಿಹಾಕುವ ಕೆಲಸವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದ್ದಾರೆ. ಕೆಪಿಎಸ್ಸಿ ಹಗರಣದ ಬಗ್ಗೆ ಕುಮಾರಸ್ವಾಮಿ ನೀಡಿರುವ ದಾಖಲೆಗಳನ್ನೇ ಪರಿಗಣಿಸದೆ ವಿನಾಕಾರಣ ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂಷಿಸಿದರು.

ದಲಿತ ಮತ್ತು ಪ್ರಗತಿಪರ ಸಂಘಟನೆಯವರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿರುವುದಕ್ಕೆ ಕಾರಣವಾದರೂ ಏನು. ಅವರೇನು ದಲಿತ ಸಮುದಾಯದ ಬಗ್ಗೆ ಮಾತನಾಡಿದ್ದಾರೆಯೇ. ಹಣ ಲೂಟಿ ಮಾಡಿದ್ದಾರೆಯೇ. ಅವರು ಹಗರಣಗಳಿಗೆ ಸಂಬಂಧಿಸಿದಂತೆ ಸಚಿವರು, ಸರ್ಕಾರದ ಮುಂದೆ ಪ್ರಶ್ನೆಗಳನ್ನೆತ್ತಿದ್ದಾರೆ. ಅದು ತಪ್ಪೇ ಎಂದು ಮುಖಂಡರನ್ನು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಸಾತನೂರು ಜಯರಾಂ, ಭದ್ರಾಚಲಮೂರ್ತಿ, ಕಾಂತರಾಜು, ಬೊಮ್ಮರಾಜು, ನರಸಿಂಹ, ಶಂಕರ್, ಸಂತೋಷ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.27ರಂದು ಅರ್ಹರಿಗೆ ನಿವೇಶನ ಹಂಚಿಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕೃತಜ್ಞತೆ ಮರೆಯಾಗಿ ಲಾಭ, ನಷ್ಟದಲ್ಲೇ ಜನರು ಜೀವನ ಕಳೆಯುತ್ತಿದ್ದಾರೆ: ರವಿಕಾಂತೇಗೌಡ