ಕೂಡ್ಲಿಗಿ: ರಾಜ್ಯದೆಲ್ಲೆಡೆ ಮಾದಿಗರ ಮುನ್ನಡೆ ಸಮಾವೇಶಕ್ಕೆ ಪೂರ್ವಭಾವಿ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮುದಾಯದ ಪ್ರಮುಖ ಮುಖಂಡರ ಸಮ್ಮುಖದಲ್ಲಿ ನಡೆಸಲಾಯಿತು.
ಸಂಘಟನಾ ಸಹ ಪ್ರಭಾರಿ ಹಡಗಲಿ ಎಚ್. ಪೂಜಪ್ಪ ಮಾತನಾಡಿ, ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿದರೂ ಒಳಮೀಸಲಾತಿ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ಮುಂದೆ ಎಲ್ಲರೂ ಸಂಘಟಿತರಾಗಬೇಕು. ಸಮುದಾಯದ ಯುವಕರು ಶೈಕ್ಷಣಿಕವಾಗಿ ಶಿಕ್ಷಣ ಪಡೆಯಬೇಕು, ಆರ್ಥಿಕವಾಗಿ ಸಬಲರಾಗಬೇಕು ಮತ್ತು ರಾಜಕೀಯವಾಗಿ ಸಂಘಟಿತರಾದಾಗ ಮಾತ್ರ ಸಮುದಾಯ ಅಭಿವೃದ್ಧಿ ಆಗಲು ಸಾಧ್ಯವಿದೆ ಎಂದರು.
ಹಿರಿಯ ಮುಖಂಡ ಹರಪನಹಳ್ಳಿ ಕಣಿವಿಹಳ್ಳಿ ಮಂಜುನಾಥ್ ಮಾತನಾಡಿ, ಮಾದಿಗ ಸಮಾಜ ಬಹುದೊಡ್ಡ ಜನಸಂಖ್ಯೆ ಹೊಂದಿದ್ದು, ಒಳಮೀಸಲಾತಿ ಇಂಥದ್ದೇ ಸರ್ಕಾರ ಮಾಡಬೇಕೆಂದು ನಿಯಮವಿಲ್ಲ. ಒಳಮೀಸಲಾತಿ ಯಾವುದೇ ಸರ್ಕಾರ ಮಾಡಿದರೂ ನಾವು ಸ್ವಾಗತ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ದುರುಗೇಶ್, ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ಎ.ಕೆ. ಸಿದ್ದಲಿಂಗಪ್ಪ ಇತರರು ಇದ್ದರು.