ಡಿ. 14ರಂದು ನಾಯಕನಕೆರೆ ದತ್ತ ಮಂದಿರ ಪ್ರತಿಷ್ಠಾಪನಾ ಮಹೋತ್ಸವ

KannadaprabhaNewsNetwork | Published : Aug 18, 2024 1:53 AM

ಸಾರಾಂಶ

ಯಲ್ಲಾಪುರ ಪಟ್ಟಣದ ನಾಯಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ದತ್ತ ಮಂದಿರದಲ್ಲಿ ದತ್ತ ಜಯಂತಿ ಸಂದರ್ಭದಲ್ಲಿ ಅಂದರೆ ಡಿ. 14ರಂದು ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ ಎಂದು ಮಂದಿರದ ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.

ಯಲ್ಲಾಪುರ: ಪಟ್ಟಣದ ನಾಯಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ದತ್ತ ಮಂದಿರದಲ್ಲಿ ದತ್ತ ಜಯಂತಿ ಸಂದರ್ಭದಲ್ಲಿ ಅಂದರೆ ಡಿ. 14ರಂದು ಪ್ರತಿಷ್ಠಾಪನಾ ಮಹೋತ್ಸವ ನಡೆಯಲಿದೆ ಎಂದು ಮಂದಿರದ ನಿರ್ಮಾಣ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು.

ದತ್ತಮಂದರಿ ನಿರ್ಮಾಣ ಕಾಮಗಾರಿ ಕುರಿತು ಅವರು ಶನಿವಾರ ಮಾಹಿತಿ ನೀಡಿದರು. ಸುಮಾರು ₹15 ಲಕ್ಷ ವೆಚ್ಚದಲ್ಲಿ ಕೆರೆಯ ಆಳಕ್ಕೆ ಸಮಾನವಾಗುವಂತೆ 17 ಅಡಿಯಿಂದ ವೃತ್ತಾಕಾರದಲ್ಲಿ ಕಲ್ಲಿನಿಂದ ಅಡಿಪಾಯ ನಿರ್ಮಿಸಲಾಗಿದೆ. ಬೆಂಗಳೂರಿನ ವಾಸ್ತು ತಜ್ಞ ಮಹೇಶ್ ಮುನಿಯಂಗಳ ನೇತೃತ್ವದಲ್ಲಿ ಈ ಮಂದಿರ ನಿರ್ವಾಣವಾಗಬೇಕಾಗಿದೆ. ಅವರು ಈಗಾಗಲೇ ಮೂರು ಸಾವಿರಕ್ಕಿಂತಲೂ ಹೆಚ್ಚು ಗುಡಿಗಳನ್ನು ನಿರ್ಮಿಸಿದ್ದಲ್ಲದೆ, ಅಮೆರಿಕದಲ್ಲೂ ಶಿಲಾಮಯ ಮಂದಿರ ನಿರ್ಮಾಣ ಮಾಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಶಿಲ್ಪಿಗಳಾದ ವೆಂಕಟರಮಣ ಭಟ್ ಸುರಾಲು ಮಂದಿರಕ್ಕೆ ಬೇಕಾಗಿರುವ ಕಲ್ಲುಗಳನ್ನು ಕೆತ್ತಿ ಜೋಡಿಸಿ ನಿರ್ಮಿಸುತ್ತಿದ್ದಾರೆ. ನೂರಾರು ವರ್ಷಗಳ ಹಿಂದೆ ಬ್ರಹ್ಮಾನಂದ ಗಣೇಶ ಯೋಗಿಗಳು ಈ ಮಂದಿರ ಸ್ಥಾಪಿಸಿದ್ದರು. ಆನಂತರ ಶಿವಾನಂದ ಯೋಗಿಗಳು ತಪಸ್ಸನ್ನು ಆಚರಿಸಿ, ಪುಣ್ಯಭೂಮಿಯನ್ನಾಗಿ ಮಾಡಿದ್ದರು. ಈಗ ಶ್ರೀರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಶೀರ್ವಾದ ಮತ್ತು ಸತ್ಸಂಕಲ್ಪದಂತೆ ಮಂದಿರ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಿದರು.

ಕಟ್ಟಡ ನಿರ್ಮಾಣಕ್ಕಾಗಿ ಎಲ್ಲ ವರ್ಗದ ಪ್ರಮುಖರನ್ನು ಸೇರಿಸಿ ಒಂದು ಸಮಿತಿ ರಚಿಸಲಾಗಿದೆ. ತಾಲೂಕಿನ ಜಿಲ್ಲೆಯ ಸಮಸ್ತ ಜನರ ತನು- ಮನ- ಧನ ಸಹಾಯದಿಂದ ನಿರ್ಮಾಣಗೊಳ್ಳಬೇಕಾಗಿದೆ. ಒಂದು ಕೋಟಿ ರು. ವೆಚ್ಚದಲ್ಲಿ ಗರ್ಭಗುಡಿ ನಿರ್ಮಾಣದ ಆನಂತರ ಇನ್ನೆರಡು ಕೋಟಿ ರು. ವೆಚ್ಚದಲ್ಲಿ ಚಂದ್ರಶಾಲೆ, ಕಲ್ಯಾಣ ಮಂಟಪ, ವಸತಿಗೃಹ ಮುಂತಾದ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಲಾಗಿದೆ. ಶ್ರೀಗಳ ಅಪೇಕ್ಷೆಯಂತೆ ಜನರ ಸಹಭಾಗಿತ್ವದಲ್ಲಿ ಈ ಗುಡಿ ನಿರ್ಮಾಣವಾಗಬೇಕಿದೆ. ಆದ್ದರಿಂದ ಭಕ್ತರು ಸಹಾಯಹಸ್ತ ನೀಡಬೇಕು ಎಂದು ವಿನಂತಿಸುತ್ತೇವೆ ಎಂದು ತಿಳಿಸಿದರು.

ಉಪಾಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ, ಶ್ರೀರಂಗ ಕಟ್ಟಿ, ನಾಗೇಶ ಯಲ್ಲಾಪುರಕರ್, ಕಾರ್ಯದರ್ಶಿ ಶಾಂತಾರಾಮ ಹೆಗಡೆ, ಖಜಾಂಚಿ ಪ್ರಶಾಂತ ಹೆಗಡೆ, ನಿರ್ದೇಶಕ ಕೆ.ಟಿ. ಭಟ್ಟ ಗುಂಡ್ಕಲ್ ಉಪಸ್ಥಿತರಿದ್ದರು.

Share this article