ಕನ್ನಡಪ್ರಭ ವಾರ್ತೆ ಮಡಿಕೇರಿ
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಶಾಲನಗರ ಹೋಬಳಿ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಮಹೋತ್ಸವ 25ರಂದು ಕುಶಾಲನಗರದಲ್ಲಿ ನಡೆಯಲಿದೆ.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1999 ರಲ್ಲಿ ಆರಂಭಗೊಂಡ ಸಂಘ ಇದೀಗ 25 ವರ್ಷ ಪೂರೈಸಿದೆ. ಕೊಡಗು ಜಿಲ್ಲಾ ಸಂಘದ ಸದಸ್ಯರಿಗೆ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಸೇರಿದಂತೆ ಹಲವು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸೆ.25ರಂದು ಕುಶಾಲನಗರ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿರುವ ಬೆಳ್ಳಿ ಹಬ್ಬ ಸಮಾರಂಭದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಭೋಸರಾಜು ನೆರವೇರಿಸಲಿದ್ದಾರೆ. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮತ್ತು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಮತ್ತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 25 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿದ್ದ ಪ್ರಮುಖರನ್ನು ಸನ್ಮಾನಿಸಲಿದ್ದಾರೆ ಎಂದು ತಿಳಿಸಿದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಆಶಯ ಭಾಷಣ ಮಾಡುವರು. ಶಕ್ತಿ ಪ್ರಧಾನ ಸಂಪಾದಕ ಜಿ ರಾಜೇಂದ್ರ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ಆರ್ ಸವಿರಾ ರೈ, ರಾಜ್ಯ ಉಪಾಧ್ಯಕ್ಷ ರಮೇಶ್ ಕುಟ್ಟಪ್ಪ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ತಾಲೂಕು ಸಂಘದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಮತ್ತು ಕುಶಾಲನಗರ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ನೆರವೇರಿಸುವರು.ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ನಡುವೆ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದ ತಂಡದ ಸದಸ್ಯರಿಗೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಸಿ ಲೋಕೇಶ್ ಹಾಗೂ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮತ್ತಪ್ಪ ಬಹುಮಾನ ವಿತರಿಸಲಿದ್ದಾರೆ.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೆಟ್ಟಿ, ರಾಜ್ಯ ಸಮಿತಿ ಸದಸ್ಯ ಟಿ ಎನ್ ಮಂಜುನಾಥ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.ಪ್ರಚಾರ ಸಮಿತಿ ಸಂಚಾಲಕ ರಘುಹೆಬ್ಬಾಲೆ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಳೆದ 25 ವರ್ಷಗಳ ಹಿಂದೆ ಹಿರಿಯ ಪತ್ರಕರ್ತ ಬಿ.ಆರ್.ನಾರಾಯಣ ಅವರ ಸಂಸ್ಥಾಪಕ ಅಧ್ಯಕ್ಷರಾಗಿ ಆರಂಭಗೊಂಡ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 25 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸೆ.25 ರಂದು ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಡಾ.ಕಿಶೋರ್ ಕುಮಾರ್ ವೈದ್ಯ ಕ್ಷೇತ್ರದಲ್ಲಿ ಸೇವೆ, ವಿ.ಪಿ.ಪ್ರಕಾಶ್ ಹಿರಿಯ ಪತ್ರಿಕಾ ವಿತರಕ, ಆಟೋ ಚಾಲಕ ಮುನೀರ್, ಸಮಾಜ ಸೇವಕ, ಮೋಹನ್ ಕುಮಾರ್, ಮೇಸ್ತ್ರಿ ಪುರಸಭೆ, ಪದ್ಮ ಪುರುಷೋತ್ತಮ ಸಮಾಜ ಸೇವಕಿ ಅವರನ್ನು ಸನ್ಮಾನಿಸಲಾಗುವುದು ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಕಾರ್ಯದರ್ಶಿ ಕೆ ಕೆ ನಾಗರಾಜ್ ಶೆಟ್ಟಿ, ಬೆಳ್ಳಿ ಹಬ್ಬ ಸ್ವಾಗತ ಸಮಿತಿ ಸಹ ಸಂಚಾಲಕರಾದ ವಿನೋದ್ ಹೆಚ್ ವಿ, ಕ್ರೀಡಾ ಸಂಚಾಲಕರಾದ ಶಿವರಾಜ್ ಕೆ ಜೆ ಇದ್ದರು.