ಕೃಷ್ಣ ಎನ್. ಲಮಾಣಿ
ಹಂಪಿ ಉತ್ಸವಕ್ಕೆ ಜನಸಾಗರವೇ ಹರಿದುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಂಪಿಯಲ್ಲಿ ಭಾರೀ ಬಿಗಿ ಭದ್ರತೆ ಕೈಗೊಂಡಿತು. ಉತ್ಸವದ ವೀಕ್ಷಣೆಗೆ ರಾಜ್ಯ ಸೇರಿದಂತೆ ದೇಶ- ವಿದೇಶಗಳಿಂದ ಆಗಮಿಸಿದ್ದ ಜನಸ್ತೋಮ ಹಂಪಿ ನೆಲದಲ್ಲಿ ಅರಳಿ ನಿಂತ ನಾಡಿನ ಕಲಾ ವೈಭವವನ್ನು ಕಂಡು ಖುಷಿಪಟ್ಟರು.
ಹಂಪಿಯ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಸೇರಿದಂತೆ ಎಲ್ಲೆಡೆ ಜನರು ಸೇರಿದ್ದರು. ಹಂಪಿಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಪ್ರಧಾನ ವೇದಿಕೆಯಲ್ಲೂ ಜನಸಾಗರ ಹರಿದು ಬಂದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲೆಡೆ ತೆರಳಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಎಸ್ಪಿ ಶ್ರೀಹರಿಬಾಬು ಸ್ವತಃ ಪ್ರಧಾನ ವೇದಿಕೆಗೆ ಆಗಮಿಸಿ ಭದ್ರತೆ ಪರಿಶೀಲಿಸಿದರು.ಹಂಪಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮವನ್ನು ವೀಕ್ಷಿಸಿದ ಜನರು ಹುಚ್ಚೆದ್ದು ಕುಣಿದರು. ಒಂದೆಡೆ ಗಾಯಕರು ಗಾನ ಸುಧೆ ಸುರಿಸಿದರೆ, ಜನರು ಕುಣಿದು ಕುಪ್ಪಳಿಸಿ ಏಂಜಾಯ್ ಮಾಡಿದರು.
ಹಂಪಿ ಉತ್ಸವದಲ್ಲಿ ಎರಡನೇ ದಿನ ಕುಸ್ತಿ ಪಂದ್ಯಾವಳಿ, ಗುಂಡು ಎತ್ತುವ ಸ್ಪರ್ಧೆ, ಬಂಡಿ ಗಾಲಿ ಜೋಡಿಸುವ ಸ್ಪರ್ಧೆಗಳು ನಡೆದವು. ಮಲಪನಗುಡಿ, ಹೊಸಮಲಪನಗುಡಿ, ಅನಂತಶಯನಗುಡಿ ಗ್ರಾಮಗಳ ಭಾಗದ ಜನರು ಆಗಮಿಸಿ ಹಂಪಿ ಉತ್ಸವವನ್ನು ಕಣ್ತುಂಬಿಕೊಂಡರು. ಶಾಸಕ ಎಚ್.ಆರ್. ಗವಿಯಪ್ಪನವರು ಸ್ವತಃ ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿ ಪೈಲ್ವಾನ್‌ರನ್ನು ಹುರಿದುಂಬಿಸಿದರು. ಧಾರವಾಡ, ಬೆಳಗಾವಿ, ಗದಗ, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ವಿಜಯನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಕುಸ್ತಿಪಟುಗಳು ರೋಮಾಂಚನಗೊಳಿಸಿದರು.
ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಉತ್ಸವದಲ್ಲಿ ಭಾಗಿಯಾಗಿ ಉತ್ಸಾಹ ತುಂಬಿದರು. ಅದರಲ್ಲೂ ವಿದೇಶಿ ಪ್ರವಾಸಿಗರು ಕೂಡ ಆಸಕ್ತಿಯಿಂದ ಉತ್ಸವವನ್ನು ಏಂಜಾಯ್ ಮಾಡಿದರು.
ಹಾಗಾಗಿ ಪೊಲೀಸ್ ಭದ್ರತೆಗೆ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ.
ಹಂಪಿ ಉತ್ಸವದಲ್ಲಿ ಹೆಜ್ಜೆ ಹೆಜ್ಜೆಗೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತಕ್ಕೆ ಜನರು ಪ್ರಶಂಸಿಸಿದ್ದಾರೆ. ಅದರಲ್ಲೂ 100 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತದ ಕಾರ್ಯಕ್ಕೆ ಜನರು ಶಹಬ್ಬಾಸ್ ಗಿರಿ ನೀಡಿದರು.
ಹಂಪಿಯಲ್ಲಿ ಜಾಮ್,. ಜಾಮ್ ಎಲ್ನೋಡಿ ಜಾಮ್ ಎಂಬಂತೆ ಹಂಪಿಯಿಂದ ಕಮಲಾಪುರ ಮಾರ್ಗ ಹಾಗೂ ಹೊಸಪೇಟೆಯಿಂದ ಕಡ್ಡಿರಾಂಪುರ ಮಾರ್ಗ, ಹಂಪಿಯಿಂದ ಕಡ್ಡಿರಾಂಪುರ ಮಾರ್ಗದಲ್ಲೂ ಜಾಮ್ ಉಂಟಾಗಿತ್ತು. ಪೊಲೀಸರ ವಾಹನಗಳು, ಆ್ಯಂಬುಲೆನ್ಸ್ ಕೂಡ ಜಾಮ್‌ನಲ್ಲಿ ಸಿಕ್ಕು ಹಾಕಿಕೊಂಡಿದ್ದು ಕಂಡುಬಂತು.