ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಮ ಪಂಚಾಯ್ತಿ ಎದುರು ಧಿಡೀರ್ ಪ್ರತಿಭಟನೆ ಇಳಿದ ರೈತರು, ಗ್ರಾಮಸ್ಥರು ಮತ್ತು ರೈತ ಮಹಿಳೆಯರು ಗೊರವನಹಳ್ಳಿ ಗ್ರಾಮದ ಶೋಭಾ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಹಾಗೂ ಗ್ರಾಮದ ಮುಖಂಡರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಗೆಜ್ಜಲಗೆರೆ ಮತ್ತು ಗೊರವನಹಳ್ಳಿ ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ವಿವಾದ ನ್ಯಾಯಾಲಯದಲ್ಲಿದೆ. ಆದರೆ, ವಿವಾದ ಇತ್ಯರ್ಥವಾಗುವ ಮೊದಲೇ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಕಚೇರಿಗಳ ಕಡತ ಸಾಗಿಸುತ್ತಿದ್ದರು. ಇದನ್ನು ತಡೆಯಲು ಹೋದ ಧರಣಿ ನಿರತರ ಮೇಲೆ ಪೊಲೀಸರನ್ನು ಛೂ ಬಿಟ್ಟು ಮಹಿಳೆಯರು ಎನ್ನದೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರು.ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನಗರಸಭೆ ವ್ಯಾಪ್ತಿಗೆ ಗ್ರಾಮವನ್ನು ಸೇರ್ಪಡೆ ಮಾಡಿದರೆ ತಮಗೆ ಓನಕೆ ಏಟೆ ಗತಿ ಎಂದು ಎಚ್ಚರಿಸಿದರು. ನಂತರ ಸ್ಥಳಕ್ಕೆ ಧಾವಿಸಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಆಕ್ರೋಶ ಭರಿತ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಮಾತುಕತೆ ನಡೆಸಿದರು.
ಮದ್ದೂರು: ತಾಲೂಕು ಆಸ್ಪತ್ರೆಯಲ್ಲಿ ಪೊಲೀಸರ ಲಘು ಲಾಠಿ ವೇಳೆ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಸೇರ್ಪಡೆ ವಿರೋಧಿಸಿ ಗ್ರಾಮಸ್ಥರು ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ವೇಳೆ ಗ್ರಾಪಂ ಕಡತಗಳನ್ನು ನಗರಸಭೆಗೆ ರವಾನೆ ಮಾಡಲು ಯತ್ನಿಸಿರುವುದು ಖಂಡನೀಯ ಎಂದರು.
ಪೊಲೀಸರನ್ನು ಕರೆದುಕೊಂಡು ಹೋಗಿ ಈ ರೀತಿ ದೌರ್ಜನ್ಯ ಮಾಡೋದು ಸರಿಯಲ್ಲ. ಕೋರ್ಟ್ ತೀರ್ಮಾನ ಬರುವವರೆಗೂ ಕಾಯದೇ ಅಧಿಕಾರಿಗಳು ಶಾಂತಿ ಕಾಪಾಡುವ ಕೆಲಸ ಮಾಡುವ ಬದಲು ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.ಏಕಾಏಕಿ ಗ್ರಾಪಂ ಕಡತಗಳನ್ನು ರವಾನೆ ಮಾಡಲು ಯತ್ನಿಸಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರ ವರ್ತನೆ ಬೇಸರ ತರಿಸಿದೆ. ಈ ವಿಚಾರವಾಗಿ ರಾಜಕೀಯ ಮಾಡಬೇಡಿ, ಶಾಂತಿ ಕಾಪಾಡಬೇಕು. ಮತ್ತೆ ಈ ಅವಘಡ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.