ಕನ್ನಡಪ್ರಭ ವಾರ್ತೆ ಮಳವಳ್ಳಿ

ಕ್ಷೇತ್ರದ ಜನರ ಪ್ರೀತಿ ಅರ್ಶೀವಾದ ಬೆಂಬಲ ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಪಕ್ಷ, ನಾಯಕತ್ವಕ್ಕೆ ಬದ್ಧನ್ನಾಗಿ ಕಾಂಗ್ರೆಸ್‌ಗೆ ಋಣಿಯಾಗಿ ಉಸಿರು ಇರುವವರೆಗೂ ಜನರ ಸೇವೆಗಾಗಿ ಜೀವನ ತ್ಯಾಗ ಮಾಡುತ್ತೇನೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ಭಾವುಕರಾದರು.

ಸಚಿವರಾದ ನಂತರ ಇದೇ ಮೊದಲ ಬಾರಿಗೆ ತಾಲೂಕಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಅನಂತ್‌ರಾಂ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಅದ್ಧೂರಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕ್ಷೇತ್ರದ ಮತದಾರರ ಭರವಸೆಗೆ ಚ್ಯುತಿ ಬಾರದ ರೀತಿಯಲ್ಲಿ ಮಳವಳ್ಳಿ ಅಭಿವೃದ್ಧಿಗೆ ಜವಾಬ್ದಾರಿಯಿಂದ ದೂರ ದೃಷ್ಟಿ ಹಲವುಹೊಸ ಯೋಜನೆಗಳ ಮೂಲಕ ತಾಲೂಕನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ಮಂಡ್ಯ ಜಿಲ್ಲೆಯ ರೈತರ ನೀರಿನ ಬವಣೆ ತಪ್ಪಿಸಲು ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿ ನಾಲಾ ಆಧುನೀಕರಣ ಮಾಡಲಾಗಿದೆ. ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಶಿಕ್ಷಣ, ಆರೋಗ್ಯ, ರಸ್ತೆ, ವಿದ್ಯುತ್ ಸೇರಿದಂತೆ ಹಲವಾರು ಮೂಲ ಸೌಲಭ್ಯವನ್ನು ಕಲ್ಪಿಸಿ ಸಮಗ್ರವಾಗಿ ಅಭಿವೃದ್ದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜಕೀಯ ವಿರೋಧಿಗಳ ಬಗ್ಗೆ ಟೀಕೆ ಮಾಡದೇ ಅಭಿವೃದ್ಧಿ ಮೂಲಕವೇ ಉತ್ತರ ನೀಡಲಾಗುವುದು. ನನ್ನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಕ್ಕಿನ ಮೂಲಕ ಮಾಹಿತಿ ಪಡೆದುಕೊಳ್ಳಲಿ. ಸುಳ್ಳುಗಾರರಿಗೆ ಉತ್ತರ ಕೊಡುವ ಆಗತ್ಯವಿಲ್ಲ. ಅಭಿವೃದ್ಧಿ ಸುಳ್ಳು ಎಂದು ಸಾಬೀತು ಪಡಿಸಿದರೇ ರಾಜಕೀಯ ನಿವೃತ್ತಿಗೊಳ್ಳುವುದಾಗಿ ಸವಾಲು ಹಾಕಿದರು.


ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಿ 2028ಕ್ಕೆ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮಿಸಲಾಗುವುದು. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಸರ್ವಸ್ವವನ್ನು ತ್ಯಾಗ ಮಾಡಿ ಮಳವಳ್ಳಿ ಕಾಂಗ್ರೆಸ್ ಭದ್ರಕೋಟೆ ಎನ್ನುವುದನ್ನು ಸಾಬೀತು ಪಡಿಸಲಾಗುವುದು ಎಂದು ಭವರಸೆ ನೀಡಿದರು.

ವಿಧಾನಪ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಕಳೆದ ಚುನಾವಣೆಯಲ್ಲಿ ಆರು ಮಂದಿ ಶಾಸಕರನ್ನು ಆಯ್ಕೆ ಮಾಡಲಾಗಿತ್ತು. ವರಿಷ್ಠರು ಮೀಸಲು ಕ್ಷೇತ್ರ ಮಳವಳ್ಳಿಗೆ ಸಚಿವ ಸ್ಥಾನ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದಾರೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು.

ವಿಧಾನ ಸದಸ್ಯ ಬಿ.ಎಸ್.ಶಿವಣ್ಣ ಮಾತನಾಡಿ, ಪಿ.ಎಂ.ನರೇಂದ್ರಸ್ವಾಮಿ ಹಾಗೂ ನಾನು ಜೋಡೆತ್ತಿನ ರೀತಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇವೆ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ ಸಿದ್ದರಾಮಯ್ಯ ಅವರು ಜನಮೆಚ್ಚಿನ ನಾಯಕರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟ ಉತ್ತಮ ಆಡಳಿತ ನೀಡಲಿದೆ ಎಂದರು.

ಮೆರವಣಿಗೆ ಮೂಲಕ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ವೇಳೆ ಮುಂಭಾಗವಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ನೂತನ ಸಚಿವರು ಮಾಲಾರ್ಪಣೆ ಮಾಡಿ ನಮಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಕಾರ್ಯಕರ್ತರು

ಮಳವಳಿ:

ಸಚಿವರಾದ ನಂತರ ಮೊದಲ ಬಾರಿಗೆ ಮಳವಳ್ಳಿಗೆ ಆಗಮಿಸಿದಾಗ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಅದ್ಧೂರಿಯಾಗಿ ಬೃಹತ್ ಹಾರಗಳನ್ನು ಹಾಕಿ ಕುಣಿದು ಕುಪ್ಪಳಿಸುವ ಮೂಲಕ ಸ್ವಾಗತ ಕೂರಿದರು. ಈ ವೇಳೆ ಸಚಿವ ಪಿ.ಎಂ. ನರೇಂದ್ರಸ್ವಾಮಿ ಕಾಣ್ತುಂಬಿಕೊಂಡು ಭಾವುಕರಾದರು.

ಬೈಕ್ ಜಾಥಾದ ಮೂಲಕ ಅನಂತ್‌ರಾಂ ವೃತ್ತದ ಬಳಿ ಸೇರಿದ ಸಾವಿರಾರು ಕಾರ್ಯಕರ್ತರು ಸಂಭ್ರಮ ಮುಗಿಲು ಮುಟ್ಟಿತು. ಈ ವೇಳೆ ಸಚಿವರಿಗೆ ಕ್ರೇನ್ ಮೂಲಕ ಕೊಬ್ಬರಿ ಹಾರ ಹಾಕಿ ಸ್ವಾಗತಿಸಿದರು. ತಾಲೂಕಿನ ಗಡಿಭಾಗ 410 ಮೈಲಿಕಲ್ಲು, ಕಾಗೇಪುರ ಬಿಲ್ದಿಂಗ್ ಪಟ್ಟಣ ಸೇರಿದಂತೆ ಪ್ರತಿಯೊಂದು ಗ್ರಾಮದ ಗೇಟ್‌ನಲ್ಲಿ ಬೃಹತ್ ಹೂವಿನ ಹಾರ ಹಾಕಿ ಅಭಿನಂದಿಸಿದರು.

ನೂರಾರು ಮಹಿಳೆಯರು ಪೂರ್ಣಕುಂಭ ಹಾಗೂ ಜಾನಪದ ಕಲಾಮೇಳದೊಂದಿಗೆ ಸ್ವಾಗತಿಸಿದರು. ಪಟ್ಟಣದ ಶಕ್ತಿ ದೇವತೆಗಳಾದ ಮಹದೇಶ್ವರ, ದಂಡಿನ ಮಾರಮ್ಮ ದೇವರಿಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು. ಪಟ್ಟಣವನ್ನು ಮಧುವನಗಿತ್ತಿಯಂತೆ ಶೃಂಗರಿಸಲಾಗಿತ್ತು. ದೊಡ್ಡ ಕಟೌಟ್‌ಗಳು ರಾರಾಜಿಸಿದವು.